ಚಿಕ್ಕಬಳ್ಳಾಪುರ : ಪತ್ರಿಕೋದ್ಯಮವು ಈ ದೇಶದ ಜನರ ಒಳಿತಿಗಾಗಿ ಕೆಲಸ ಮಾತನಾಡು ತ್ತದೆ. ನಮ್ಮ ಸೇವೆಗಳು ಹೆಚ್ಚು ಜನರನ್ನು ತಲುಪಲು ಮಾಧ್ಯಮದವರ ಸಹಕಾರ ಬೇಕಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವ'ದ ೯೯ನೇ ದಿನವಾದ ಶನಿವಾರ ಆಶೀರ್ವಚನ ನೀಡಿದ ಸದ್ಗುರು, ಎಲ್ಲರೂ ತಮ್ಮಷ್ಟಕ್ಕೆ ತಾವೇ ಎಲ್ಲವನ್ನು ಪಡೆಯಲು ಸಾಧ್ಯವಿಲ್ಲ. ಇತರರ ನೋವನ್ನು ತಿಳಿಯಬೇಕು, ಅವರ ಮಾತುಗಳನ್ನು ಆಲಿಸಬೇಕು. ಜನರಿಗಾಗಿ ಕೆಲಸ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಮಾಜದ ಪರವಾಗಿ ನಿಂತವರು, ಸಾಮಾಜಿಕ ಕಳಕಳಿ ಇರುವವರನ್ನು ಗುರುತಿಸಿ ಬೆಂಬಲಿಸಲು 'ವಾಯ್ಸ್ ಆಫ್ ದಿ ಪೀಪಲ್ಸ್ ಅವಾರ್ಡ್' ಸ್ಥಾಪಿಸಲಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮವು ರೂಪುಗೊಂಡಿದೆ. ಟಿಆರ್‌ಪಿ ಮತ್ತು ಇತರೆ ವಿಚಾರಗಳಿಂದ ಚಾನೆಲ್‌ಗಳು ಹಾಗೂ ಇತರೆ ಮಾಧ್ಯಮಗಳ ಮೇಲೆ ಒತ್ತಡ ಹೇರುತ್ತಿರುವ ಈ ಕಾಲದಲ್ಲಿ ಜನರು ಏನು ಬಯಸುತ್ತಾರೆ ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ. ಆದರೆ ನಿಮ್ಮ ನೆಲೆಯಲ್ಲಿ ನಿಂತು ಸರಿಯಾದ ವಿಷಯಗಳನ್ನು ಹೇಳುವುದು, ಸತ್ಯವನ್ನು ಹೇಳುವುದು ಮತ್ತು ಆಹ್ಲಾದಕರ ರೀತಿಯಲ್ಲಿ ಹೇಳುವುದು, ಅಹಿತಕರ ಸತ್ಯವನ್ನು ಹೇಳದಿರುವುದು ಉತ್ತಮ ಪತ್ರಿಕೋದ್ಯಮದ ಭಾಗವಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: Sadhguru Shri Madhusudan Sai: ಆರೋಗ್ಯ ಮತ್ತು ಶಿಕ್ಷಣ ಪ್ರಜಾಸತ್ತಾತ್ಮಕ ಹಕ್ಕುಗಳಾಗಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಪದ್ಮಭೂಷಣ ಪುರಸ್ಕೃತ ದೀಪಕ್ ಪಾರೇಖ್ ಮಾತನಾಡಿ, ಸತ್ಯ ಸಾಯಿ ಗ್ರಾಮವು ಒಂದು ಜಗತ್ತು ಒಂದು ಕುಟುಂಬವನ್ನು ನಿರ್ಮಿಸುವ ತನ್ನ ಧ್ಯೇಯಕ್ಕೆ ಬದ್ಧವಾಗಿದೆ. ಭಗವಾನ್ ಸತ್ಯ ಸಾಯಿ ಬಾಬಾ ಅವರಿಂದ ಶಕ್ತಿ, ಪ್ರೇರಣೆ ಪಡೆದಿರುವ ದೂರದೃಷ್ಟಿಯ ನಾಯಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಉತ್ತಮ ಸೇವೆಗಳನ್ನು ನೀಡುತ್ತಿದ್ದಾರೆ. ಒಳ್ಳೆಯತನವು ಎಂದಿಗೂ ವಿಫಲವಾಗದ ಅತ್ಯುತ್ತಮ ಹೂಡಿಕೆಯಾಗಿದೆ. ಈ ಧ್ಯೇಯವು ಮಾನವನ ದುಃಖವನ್ನು ನಿವಾರಿಸುವ ಧರ್ಮ ಎಂದು ಹೇಳಿದರು.
ಪೌಷ್ಟಿಕಾಂಶ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ. ಈ ಮೂರು ಶಕ್ತಿಗಳು ಒಟ್ಟಿಗೆ ಸೇರಿದಾಗ ಸುಸ್ಥಿರ ಜಗತ್ತನ್ನು ನಿರ್ಮಿಸಬಹುದು. ಸಮಾಜ, ಸೇವಾ ಕೇಂದ್ರಗಳು ಹಾಗೂ ಸರ್ಕಾರಗಳು ಸಾಮರಸ್ಯದಿಂದ ಒಟ್ಟಾಗಿ ಮುಂದೆ ಸಾಗಬೇಕು. ಸರಳತೆ ಮತ್ತು ಪ್ರಾಮಾಣಿಕತೆಯು ಈ ಮಿಷನ್‌ನ ಸೌಂದರ್ಯವಾಗಿದೆ. ಕರುಣೆಗೆ ಯಾವುದೇ ಗಡಿಗಳಿಲ್ಲ. ಇದರಿಂದ ಜಗತ್ತು ಎಲ್ಲರಿಗೂ ಉತ್ತಮ ಸ್ಥಳವಾಗಬಹುದು ಎಂದರು.
ತ್ರಿಪುರದ ರಾಜ್ಯಪಾಲ ನಲ್ಲು ಇಂದ್ರಸೇನರೆಡ್ಡಿ ಮಾತನಾಡಿ, ಮುದ್ದೇನಹಳ್ಳಿಯಲ್ಲಿ ದೈವಿಕ ವಾತಾವರಣವಿದೆ. ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ನ ಸಾಧನೆಯು ಕೇವಲ ಅಂಕಿಅಂಶ ಗಳಲ್ಲ. ಅದು ಭಾರತದ ಭವಿಷ್ಯವನ್ನು ಸಶಕ್ತಗೊಳಿಸುತ್ತಿದೆ. ಸತ್ಯ ಸಾಯಿ ಸರಳ ಸ್ಮಾರಕ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆಯು ಉಚಿತವಾಗಿ ದೊರೆಯುತ್ತಿದೆ. ಇದು ಒಂದು ರೀತಿಯ ಪವಾಡದಂತೆ ಭಾಸವಾಗುತ್ತದೆ. ಸಹಾನುಭೂತಿಯಿಂದ ಆರೋಗ್ಯ ಸೇವೆಯನ್ನು ಹೇಗೆ ಒದಗಿಸಬಹುದು ಎನ್ನುವುದಕ್ಕೂ ಇದು ಅತ್ಯುತ್ತಮ ಉದಾಹರಣೆಯಾಗಿದೆ. ಸತ್ಯ ಸಾಯಿ ಗ್ರಾಮವು ಆದರ್ಶ ಸಮಾಜಕ್ಕೆ ಇರುವ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಟೀಂ ಇಂಡಿಯಾದ ಮಾಜಿ ಕ್ರಿಕೆಟ್ ಆಟಗಾರ ಸುನಿಲ್ ಗವಾಸ್ಕರ್ ಮಾತನಾಡಿ, ಜಾಗತಿಕ ನಾಯಕತ್ವ ಪ್ರಶಸ್ತಿಯು ನಮ್ಮ ವಿನಮ್ರ ಮನ್ನಣೆಯಾಗಿದೆ. ನಾಯಕರು ತಮ್ಮ ಜೀವನ ದಲ್ಲಿ ಮಾಡಿರುವ ಸಾಧನೆಗಳು ಮತ್ತು ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸಮಾಜದ ಮೇಲೆ ಬೀರಿದ ಪ್ರಭಾವ ಹಾಗೂ ಪರಿಣಾಮಗಳನ್ನು ಪರಿಗಣಿಸಿ ಜಾಗತಿಕ ನಾಯಕತ್ವ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಆಯ್ಕೆ ಸಮಿತಿಯ ತೀರ್ಪುಗಾರರು ಅದ್ಭುತ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರಾದ ಪದ್ಮಭೂಷಣ ಪುರಸ್ಕೃತ ದೀಪಕ್ ಪಾರೆಖ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಗೌರವಿಸಲಾಯಿತು. ಮೀಡಿಯಾ ಅಂಡ್ ಜರ್ನಲಿಸಮ್ ಎಕ್ಸಲೆನ್ಸ್ ವಿಭಾಗದಲ್ಲಿ ಸಿಎನ್‌ಎನ್ ನ್ಯೂಸ್ ೧೮ ಹಿರಿಯ ಸುದ್ದಿ ನಿರೂಪಕರಾದ ರಾಹುಲ್ ಶಿವಶಂಕರ್ ಮತ್ತು ಲಿಟ್ರರಿ ಅಂಡ್ ಅಡ್ವೆಕಸಿ ಇಂಪ್ಯಾಕ್ಟ್ ವಿಭಾಗದಲ್ಲಿ ಸುಪ್ರೀಂ ಕೋರ್ಟ್ನ ವಕೀಲರು ಮತ್ತು ವಾಗ್ಮಿ ಜೆ.ಸಾಯಿ ದೀಪಕ್ ಅವರಿಗೆ ಅವರಿಗೆ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ವಾಯ್ಸ್ ಆಫ್ ದಿ ಪೀಪಲ್ ಅವಾರ್ಡ್ ೨೦೨೫ ಪುರಸ್ಕಾರ' ನೀಡಿ ಗೌರವಿಸಲಾಯಿತು.
ತಮಿಳುನಾಡಿನ ಮೈಲಾದುರೈನಲ್ಲಿರುವ ಆಧೀನಮ್ ಧರ್ಮಪುರಂ ಶ್ರೀ ಮಸಿಲಮಣಿ ಜ್ಞಾನಸಂಬAಧ ಪರಮಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ತ್ರಿಪುರಾದ ಪ್ರಥಮ ಮಹಿಳೆ ರೇಣುಕಾ ನಲ್ಲು, ಶ್ರೀಲಂಕಾದ ಮಾಜಿ ಕ್ರಿಕೆಟರ್ ಮತ್ತು ಉದ್ಯಮಿ ಅರವಿಂದ್ ಡಿಸಿಲ್ವಾ, ಪ್ರಶಾಂತಿ ಬಾಲಮಂದಿರ ಟ್ರಸ್ಟ್ನ ಅಧ್ಯಕ್ಷ ಡಾ ಬಿ.ಎನ್.ನರಸಿಂಹ ಮೂರ್ತಿ, ಶ್ರೀ ಸತ್ಯ ಸಾಯಿ ಹೆಲ್ತ್ ಅಂಡ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ ಶ್ರೀನಿವಾಸ್ ಉಪಸ್ಥಿತರಿದ್ದರು.