ಚಿಕ್ಕಬಳ್ಳಾಪುರ : ನಂದಿಬೆಟ್ಟವನ್ನು ಅಂತರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರೋಪ್‌ವೇ ನಿರ್ಮಾಣ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾ ಗಿದ್ದು, ಯೋಜನೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್(Tourism Minister K.J. George) ಹೇಳಿದರು.
ನಂದಿಗಿರಿಧಾಮದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ವತಿಯಿಂದ ರೂ..1.96 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 'ಮಯೂರ ಸನ್‌ರೈಸ್ ರೆಸ್ಟೋರೆಂಟ್' ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: Chinthamani News: ಗ್ರಾಮಗಳ ಅಭಿವೃದ್ಧಿಗಾಗಿ ನಿಲ್ಲದ ಹೋರಾಟ: ಮೂರನೇ ಹಂತದ ಪಾದಯಾತ್ರೆಗೆ ಅನುಮತಿ ಕೋರಿದ ಮಂಜುನಾಥ್
ಕರ್ನಾಟಕದ ಪ್ರವಾಸೋದ್ಯಮವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಗುಣಮಟ್ಟದ ಸೇವೆ, ಸ್ವಚ್ಛತೆ ಹಾಗೂ ಆಧುನಿಕ ಸೌಲಭ್ಯಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಕೆಎಸ್‌ಟಿಡಿಸಿ 1971 ರಿಂದ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದು, ಇಂದು ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಉತ್ತಮ ಸೇವೆ ಮತ್ತು ಆತಿಥ್ಯ ದಿಂದ ತೃಪ್ತರಾಗಿರುವ ಪ್ರವಾಸಿಗರೇ ನಿಗಮದ ನಿಜವಾದ ರಾಯಭಾರಿಗಳಾಗಿದ್ದಾರೆ ಎಂದು ಸಚಿವರು ಹೇಳಿದರು.
ರಾಜ್ಯಾದ್ಯಂತ 28 ಹೋಟೆಲ್ ಹಾಗೂ ರೆಸ್ಟೋರೆಂಟ್ ಘಟಕಗಳು, 503 ವಸತಿ ಕೊಠಡಿಗಳನ್ನು ಕೆಎಸ್‌ಟಿಡಿಸಿ ನಿರ್ವಹಿಸುತ್ತಿದ್ದು, ಡಿಜಿಟಲ್ ಸೇವೆಗಳು ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ನಂದಿಬೆಟ್ಟದಲ್ಲಿ ಈಗಾಗಲೇ 36 ವಸತಿ ಕೊಠಡಿಗಳಿದ್ದು, ಹೊಸದಾಗಿ ನಿರ್ಮಾಣಗೊಂಡಿರುವ ಎರಡು ಮಹಡಿಗಳ 'ಮಯೂರ ಸನ್‌ರೈಸ್ ರೆಸ್ಟೋರೆಂಟ್' ನಲ್ಲಿ ಏಕಕಾಲಕ್ಕೆ ಸುಮಾರು 200 ಮಂದಿ ಉಪಹಾರ ಮತ್ತು ಊಟ ಸೇವಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ವಾರಾಂತ್ಯಗಳಲ್ಲಿ 10 ರಿಂದ 15 ಸಾವಿರ ಹಾಗೂ ಸಾಮಾನ್ಯ ದಿನಗಳಲ್ಲಿ ಸುಮಾರು 2 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿರುವ ನಂದಿಬೆಟ್ಟದಲ್ಲಿ ಪಾರ್ಕಿಂಗ್ ಸೇರಿದಂತೆ ಮೂಲಸೌಲಭ್ಯಗಳನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಡಾ.ವಿ.ರಾಮ್ ಪ್ರಸಾದ್ ಮನೋಹರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ಆರ್. ಶಿವಪ್ರಸಾದ್, ತಾಜ್ ಹೋಟೆಲ್ ಅಧ್ಯಕ್ಷ ಶ್ರೀನಿವಾಸ್, ಜಂಗಲ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ಶಿವರಾಮ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು, ವಿವಿಧ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪ್ರವಾಸಿಗರು ಉಪಸ್ಥಿತರಿದ್ದರು.
*
ನಂದಿಬೆಟ್ಟ ರೋಪ್‌ವೇ ಕಾಮಗಾರಿಗೆ ಮೊದಲ ಆದ್ಯತೆ
*ರೂ.1.96 ಕೋಟಿ ವೆಚ್ಚದ 'ಮಯೂರ ಸನ್‌ರೈಸ್ ರೆಸ್ಟೋರೆಂಟ್' ಉದ್ಘಾಟನೆ
*ಪ್ರವಾಸಿಗರಿಗೆ ಗುಣಮಟ್ಟದ ಸೇವೆ, ಸ್ವಚ್ಛತೆ ಮತ್ತು ಆಧುನಿಕ ಸೌಲಭ್ಯಗಳಿಗೆ ಒತ್ತು
*ಕೆಎಸ್‌ಟಿಡಿಸಿ ರಾಜ್ಯಾದ್ಯಂತ 28 ಘಟಕಗಳು, 503 ವಸತಿ ಕೊಠಡಿಗಳ ನಿರ್ವಹಣೆ
*ನಂದಿಬೆಟ್ಟವನ್ನು ವಿಶ್ವಮಟ್ಟದ ಪ್ರವಾಸಿ ತಾಣವನ್ನಾಗಿಸಲು ಸರ್ಕಾರದ ಸಂಕಲ್ಪ