ಬಾಗೇಪಲ್ಲಿ: ಶಾಂತಿ, ಸೌಹಾರ್ದತೆ ಸಂದೇಶ ಸಾರುವ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬ(Ramadan)ವನ್ನು ಪಟ್ಟಣದೆಲ್ಲೆಡೆ ಶನಿವಾರ ಸಂಭ್ರಮ-ಸಡಗರದೊಂದಿಗೆ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.
ಒಂದು ತಿಂಗಳ ಕಾಲ ಉಪವಾಸ ಆಚರಿಸಿದ ಮುಸ್ಲಿಂ ಸಮಾಜದವರು ಶನಿವಾರ ಬೆಳಿಗ್ಗೆ 9 ಗಂಟೆಗೆ ನಡೆದ ಈದ್ ಆಚರಣೆಯ ಸಾಮೂಹಿಕ ಪ್ರಾರ್ಥನೆಯಲ್ಲಿ ನಮಾಜ್ ಮಾಡಿ ರಂಜಾನ್ ಹಬ್ಬಕ್ಕೆ ತೆರೆ ಎಳೆದರು. ಮೌಲ್ವಿಗಳು ಕುರಾನ್ ಪಠಣ ಮಾಡಿದರು. ಸಾಮೂಹಿಕ ಪ್ರಾರ್ಥನೆ ನಂತರ ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಪಟ್ಟಣದ ಕೂಡಿಕೊಂಡೆ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪಾರ್ಥನೆ ಸಲ್ಲಿಸುವ ಮೂಲಕ ಪವಿತ್ರ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಇದನ್ನೂ ಓದಿ: Ramadan: ಸಂಭ್ರಮದ ರಂಜಾನ್‌ಗೆ ಮುಸ್ಲಿಮರಿಂದ ಭರ್ಜರಿ ಸಿದ್ದತೆ
ಇಲ್ಲಿನ ಈದ್ಗಾ ಮೈದಾನದ ರಂಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಂಡ ನಂತರ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(Bagepalli MLA S.N.Subbareddy) ಮಾತನಾಡಿ, ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಹಬ್ಬ ಮಾನವೀಯತೆಯ ಸಂಕೇತವಾಗಿದೆ.
ಶ್ರೀಮಂತ, ಬಡವ ಎಂಬುದನ್ನು ಮರೆತು ಎಲ್ಲರೂ ಒಂದೇ ಎಂಬುದನ್ನು ಅರ್ಥ ಮಾಡಿ ಕೊಂಡು ಬದುಕು ಸಾಗಿಸುವ ಪವಿತ್ರ ಹಬ್ಬವಾಗಿದೆ. ರಂಜಾನ್ ಹಬ್ಬದೊಂದಿಗೆ ಸಮಾಜ ದಲ್ಲಿ ಶಾಂತಿ ನೆಲೆಸಿ, ಪ್ರತಿಯೊಬ್ಬರು ಪರಸ್ಪರ ಬೆರೆತು ಹಬ್ಬವನ್ನು ಆಚರಿಸುವ ಜೊತೆಗೆ, ಎಲ್ಲರೂ ಪ್ರೀತಿ, ನೆಮ್ಮದಿಯಿಂದ ಬದುಕುವ ಚಿಂತನೆಯೊಂದಿಗೆ ಹಬ್ಬವನ್ನು ಆಚರಿಸಲಿ ಎಂದು ಹಾರೆಸಿದರು.
ರಂಜಾನ್ ಹಬ್ಬದ ಅತ್ಯಂತ ಸುಂದರ ಅಂಶವೆಂದರೆ ದಾನ. ತಾನು ಗಳಿಸಿದ ಸಂಪತ್ತಿನಲ್ಲಿ ಒಂದು ಭಾಗವನ್ನು ಬಡವರಿಗೆ ನೀಡುವ ಝುಕಾತ್ ಪದ್ಧತಿ ಸಮಾಜದಲ್ಲಿ ಆರ್ಥಿಕ ಸಮತೋಲನವನ್ನು ಬೆಳೆಸುತ್ತದೆ. ಹಸಿದವನಿಗೆ ಅನ್ನ ನೀಡುವುದು, ಸಂಕಷ್ಟದಲ್ಲಿ ರುವವರಿಗೆ ನೆರವಾಗುವುದು, ಪವಿತ್ರ ರಂಜಾನ್ ಶಾಂತಿ, ಸಹನೆ ತಾಳ್ಮೆ, ಪ್ರೀತಿ ಹಾಗೂ ಕರುಣೆಯ ತಿಂಗಳಾಗಿದೆ.
ಭೂಮಿಯ ಮೇಲೆ ಬದುಕಿರುವಷ್ಟು ದಿನ ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಎಲ್ಲ ಧರ್ಮಗಳ ಮೂಲ ಮಂತ್ರ ಶಾಂತಿ ಮತ್ತು ಪ್ರೀತಿಯೇ ಆಗಿದೆ ಅದನ್ನು ತಿಳಿದುಕೊಳ್ಳುವ ಪ್ರಯತ್ನ ನಾವೆಲ್ಲರೂ ಮಾಡಬೇಕಾಗಿದೆ ಎಂದರು.
ಚಿಮುಲ್ ಅದ್ಯಕ್ಷ ಪಿ.ಮಂಜುನಾಥ್ ರೆಡ್ಡಿ ಮಾತನಾಡಿ, ರಂಜಾನ್ ತಿಂಗಳಲ್ಲಿ ಮುಸ್ಲಿಮರ ಪವಿತ್ರ ಧರ್ಮಗ್ರಂಥ ಕುರಾನ್ ಪಠಣ ಮಾಡುವುದರಿಂದ ಮನಸ್ಸಿನಲ್ಲಿ ಕಲ್ಮಶಗಳನ್ನು ದೂರವಾಗುತ್ತದೆ ಅಲ್ಲಾಹನನ್ನು ಮನದಲ್ಲಿ ನೆನೆದು ಸಮಾಜದಲ್ಲಿ ಶಾಂತಿ, ನೆಮ್ಮದಿ ಯಿಂದ ನಾವೆಲ್ಲರು ಒಂದೇ ಎನ್ನುವ ತತ್ವದ ಅಡಿಯಲ್ಲಿ ಜೀವನ ಸಾಗಿಸುವುದು ಪ್ರತಿ ಯೊಬ್ಬರ ಕರ್ತವ್ಯವಾಗಿದೆ. ದುಡಿದುದರಲ್ಲಿ ದಾನ, ಧರ್ಮ ಮಾಡುವುದರಿಂದ ಜೀವನ ದಲ್ಲಿ ನೆಮ್ಮದಿ ದೊರೆಯಲಿದೆ ಎಂದರು.
ಮಾನವೀಯತೆ, ಸಹನೆ ಮತ್ತು ದೈವಭಕ್ತಿಯ ಸಂಕೇತವಾಗಿರುವ ರಂಜಾನ್ ಕೇವಲ ಮುಸ್ಲಿಂ ಸಮುದಾಯದ ಹಬ್ಬವಲ್ಲ; ಅದು ಶಿಸ್ತು, ಆತ್ಮಾವಲೋಕನ ಮತ್ತು ಮೌಲ್ಯಗಳ ಪುನರ್ ಸ್ಥಾಪನೆಯ ಮಹಾನ್ ಕಾಲಘಟ್ಟ. ಇಸ್ಲಾಮಿಕ್ ಕ್ಯಾಲೆಂಡರ್ನ ಒಂಬತ್ತನೇ ತಿಂಗಳಾದ ಈ ಮಾಸವು ಮನುಷ್ಯನ ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನ ದಲ್ಲಿ ರೂಪಿಸುವ ಅಪೂರ್ವ ಅವಕಾಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಡಿ.ಪಿ. ಸದಸ್ಯ ಪಿ. ಮಂಜುನಾಥರೆಡ್ಡಿ, ರಿಜ್ವಾನ್ ಸಾಬ್, ಪುರಸಭೆ ಸದಸ್ಯರಾದ ಜಬೀವುಲ್ಲಾ, ಸರ್ದಾರ್ ಪಾಷ, ಮಹ್ಮದ್ ನೂರುಲ್ಲಾ, ನಿಜಾಮುದ್ದಿನ್ ಬಾಬು, ಮನ್ಸೂರ್, ಮಹ್ಮದ್ ಅಕ್ರಮ್, ಅಬ್ದುಲ್ ರೆಹಮಾನ್, ಗಪೂರ್, ಸಾದೀಕ್, ಜಬೀರ್, ಅಂಜಾದ್, ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.