ಬಾಗೇಪಲ್ಲಿ: ಪಟ್ಟಣದಲ್ಲಿ ಪುರಸಭೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಡೆಯಲು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಕಸ ತುಂಬಿದ ಜಾಗಗಳನ್ನು ಸ್ವಚ್ಛಗೊಳಿಸಿ, ಅಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ "ಇಲ್ಲಿ ಕಸ ಹಾಕಬಾರದು" ಎಂದು ಬರೆಯುವ ಮೂಲಕ ಜನರಲ್ಲಿ ಅರಿವು ಮೂಡಿಸಿದರು.
ಪಟ್ಟಣದ ಮುಖ್ಯ ರಸ್ತೆ, ಸಾರ್ವಜನಿಕ ಜಾಗಗಳಲ್ಲಿ ಸ್ಥಳೀಯರು, ಹೋಟೆಲ್,ಚಿಕನ್ ಅಂಗಡಿ ಯವರು ತ್ಯಾಜ್ಯವನ್ನು ರಸ್ತೆಯಲ್ಲಿ ಎಸೆಯುತ್ತಿದ್ದು, ಇದನ್ನು ತಪ್ಪಿಸಲು ಪುರಸಭೆ ಸಿಬ್ಬಂದಿ ತ್ಯಾಜ್ಯ ತುಂಬಿದ ಜಾಗ ಸ್ವಚ್ಛಗೊಳಿಸಿ ರಂಗೋಲಿ ಹಾಕುತ್ತಿದ್ದಾರೆ. ಬಳಿಕ ಸುತ್ತಮುತ್ತಲ ಅಂಗಡಿ, ಹೋಟೆಲ್ ಗಳ ಮಾಲೀಕರಿಗೆ ಕಸವನ್ನು ರಸ್ತೆಯಲ್ಲಿ ಎಸೆಯುವಂತಿಲ್ಲ. ತ್ಯಾಜ್ಯ ಎಸೆಯುವ ಕೃತ್ಯ ಮುಂದುವರಿ ದರೆ ಪುರಸಭೆ ವತಿಯಿಂದ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ರಂಗೋಲಿ ಬಿಡಿಸಿದ ಜಾಗದಲ್ಲಿ "ಇಲ್ಲಿ ಕಸ ಹಾಕಬಾರದು" ಎಂದು ಬರೆದು, ಮತ್ತೊಮ್ಮೆ ಕಸ ಹಾಕಿದವರಿಗೆ ದಂಡ ಪ್ರಯೋಗ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಮಾತನಾಡಿ, ಪಟ್ಟಣದ ಎಲ್ಲ ವಾರ್ಡ್‌ಗಳು ಪ್ರಮುಖ ರಸ್ತೆಗಳಲ್ಲಿ ನಿತ್ಯ ಪುರಸಭೆ ವಾಹನ ತೆರಳಿ ಕಸ ಸಂಗ್ರಹಿಸುತ್ತದೆ. ಬೆಳಗಿನ ಜಾವದಿಂದಲೇ ವಾಹನ ಮನೆಯ ಮುಂದೆ ಬಂದು ಕಸ ನೀಡುವಂತೆ ಮನವಿ ಮಾಡುತ್ತದೆ. ಆದಾಗ್ಯೂ ಕೆಲವರು ಕಸವನ್ನು ರಸ್ತೆಯಲ್ಲಿ ಸುರಿಯುವ ಪರಿಪಾಠ ಮುಂದುವರಿಸಿದ್ದಾರೆ.
ಇದನ್ನೂ ಓದಿ: Bagepally News: 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ; ಬೆಂಬಲಕ್ಕೆ ಮನವಿ
ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯದಂತೆ ಎಷ್ಟು ಬಾರಿ ತಿಳಿಸಿ ಹೇಳಿದರೂ ಪ್ರಯೋಜನ ವಾಗಿಲ್ಲ. ಕಸ ಎಸೆಯುವ ಜಾಗವನ್ನು ಪುರಸಭೆ ಸಿಬ್ಬಂದಿಯೇ ಸ್ವಚ್ಛಗೊಳಿಸಿ, ನಿಗದಿತ ಜಾಗದಲ್ಲಿ ರಂಗೋಲಿ ಹಾಕಲಾಗುತ್ತದೆ. ಇದೇ ವೇಳೆ ಅಕ್ಕಪಕ್ಕದ ಮನೆಗಳು, ಅಂಗಡಿ, ಹೋಟೆಲ್‌ನವರಿಗೆ ಇಲ್ಲಿ ಕಸ ಹಾಕಬಾರದು ಎಂಬ ಎಚ್ಚರಿಕೆ ಸಹ ನೀಡುತ್ತದೆ. ಇಷ್ಟಾಗಿಯೂ ಕಸ ಹಾಕುವುದು ಮುಂದು ವರಿಸಿದರೆ ಮುಂದಿನ ಹಂತದ ಕ್ರಮ ವಹಿಸಲು ಪುರಸಭೆ ನಿರ್ಧರಿಸಿದ್ದು,
ಹೀಗೆ ಪಟ್ಟಣದ ನಾನಾ ಕಡೆಗಳಲ್ಲಿ ಕಸ ಹಾಕುವ ಜಾಗವನ್ನು ಗುರುತಿಸಿ ಸ್ವಚ್ಛಗೊಳಿಸುವ ಕಾರ್ಯ ಕ್ಕೆ ಮುಂದಾಗಿದೆ. ಪಟ್ಟಣದ ತ್ಯಾಜ್ಯ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಪಟ್ಟಣದ ಮುಖ್ಯ ರಸ್ತೆಗಳು, ವೃತ್ತಗಳು, ಬಡಾವಣೆಗಳಲ್ಲಿ ಬೀದಿಯಲ್ಲಿ ಬಿಸಾಡುವ ಕಸವನ್ನು ನಿಯಂತ್ರಿಸಲು ಪುರಸಭೆ ಸಿಬ್ಬಂದಿ ರಂಗೋಲಿಯ ಮೊರೆ ಹೋಗಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆಯೋ ಕಾದು ನೋಡಬೇಕಿದೆ.
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿಗಳಾದ ಸಿ.ಕೆ.ಮಾರೇ ಗೌಡ, ಶಿವಪ್ಪ, ಚಿಕ್ಕ ಗಂಗರತ್ನಮ್ಮ, ಗಂಗೋತ್ರಿ, ಮಂಜುಳಾ, ಆಯುಷಾ,ಆಲಿಸಾಬ್ ಇತರರು ಹಾಜರಿದ್ದರು.