Bagepally News: 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ; ಬೆಂಬಲಕ್ಕೆ ಮನವಿ
29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಸಂಹಿತೆಗಳ ಮೂಲಕ ಯೂನಿಯನ್ ರಹಿತ ವಾತಾ ವರಣ ನಿರ್ಮಿಸಲು ಯತ್ನಿಸಲಾಗುತ್ತಿದೆ. ಇದರ ಪರಿಣಾಮವಾಗಿ ಶೇ. 90 ರಷ್ಟು ಕಾರ್ಮಿಕರು ವೇತನ, ಇಎಸ್‌ಐ, ಪಿಎಫ್, ಗ್ರಾಚ್ಯುಟಿ, ಬೋನಸ್ ಸೇರಿದಂತೆ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ
-
ಬಾಗೇಪಲ್ಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳು ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ವಿರೋಧಿಸಿ ಫೆಬ್ರವರಿ 12 ರಂದು ವಿವಿಧ ಸಂಘಟನೆಗಳಿಂದ ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸು ವಂತೆ ಬಾಗೇಪಲ್ಲಿ ತಾಲ್ಲೂಕು ಕಾರ್ಮಿಕ ಸಂಘಗಳ ಸಮಿತಿ ಮುಖಂಡ ಎಂ.ಪಿ.ಮುನಿ ವೆಂಕಟಪ್ಪ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ತಾಲ್ಲೂಕು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ಸಂಯುಕ್ತ ಕರ್ನಾಟಕ ಹೋರಾಟ ಹಾಗೂ ಬಾಗೇಪಲ್ಲಿ ತಾಲ್ಲೂಕು ಜನಪರ ಚಳವಳಿಗಳ ಒಕ್ಕೂಟ ಜಂಟಿಯಾಗಿ ಕರೆ ನೀಡುತ್ತಿದ್ದೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳ ಮೇಲೆ ನೇರ ದಾಳಿ ಆಗಿದ್ದು, ಇದು ಕೇವಲ ಆರ್ಥಿಕವಲ್ಲ ರಾಜಕೀಯ ದಾಳಿಯೂ ಆಗಿದೆ ಎಂದು ಎಂದು ಹೇಳಿದರು.
29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಸಂಹಿತೆಗಳ ಮೂಲಕ ಯೂನಿಯನ್ ರಹಿತ ವಾತಾವರಣ ನಿರ್ಮಿಸಲು ಯತ್ನಿಸಲಾಗುತ್ತಿದೆ. ಇದರ ಪರಿಣಾಮವಾಗಿ ಶೇ. 90 ರಷ್ಟು ಕಾರ್ಮಿಕರು ವೇತನ, ಇಎಸ್‌ಐ, ಪಿಎಫ್, ಗ್ರಾಚ್ಯುಟಿ, ಬೋನಸ್ ಸೇರಿದಂತೆ ಮೂಲಭೂತ ಹಕ್ಕುಗಳಿಂದ ವಂಚಿತ ರಾಗುತ್ತಿದ್ದಾರೆ ಎಂದರು.
ಜೀವನೋಪಾಯ ವೇತನದ ಭರವಸೆ ನೀಡದೇ, ಕನಿಷ್ಠ ವೇತನದ ಬದಲಿಗೆ ತಳಮಟ್ಟದ ಕೂಲಿ ಯನ್ನು ನಿಗದಿಪಡಿಸಲಾಗಿದ್ದು, ಎಲ್ಲಾ ವಲಯಗಳಲ್ಲಿ ವೇತನ ಹೆಚ್ಚಳಕ್ಕೆ ಅಡೆತಡೆ ನಿರ್ಮಿಸ ಲಾಗಿದೆ. ಮಾಲೀಕರ ಲಾಭಾಂಶ ಹೆಚ್ಚಿದರೂ ಕಾರ್ಮಿಕರ ವೇತನದ ಪಾಲು ಗಣನೀಯವಾಗಿ ಇಳಿಕೆಯಾಗಿದೆ. ಸಂಘ ರಚಿಸುವ ಹಕ್ಕು, ಸಾಮೂಹಿಕ ಚೌಕಾಸಿ ಶಕ್ತಿ ಹಾಗೂ ಮುಷ್ಕರದ ಹಕ್ಕಿನ ಮೇಲೂ ಕಠಿಣ ನಿರ್ಬಂಧ ಹೇರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಿ.ಟಿ.ಮುನಿಸ್ವಾಮಿ, ಚನ್ನರಾಯಪ್ಪ, ಬಿಳ್ಳೂರು ನಾಗರಾಜು, ವಾಲ್ಮೀಕಿ ಅಶ್ವತ್ಥಪ್ಪ, ಜಿ.ಕೃಷ್ಣಪ್ಪ, ದೇವಿಕುಂಟೆ ಶ್ರೀನಿವಾಸ್, ಮುಸ್ತಫಾ, ಸೋಮಶೇಖರ್, ಮುನಿಯಪ್ಪ ಹಾಗೂ ಬಿಸಿಯೂಟ ಮಹಿಳಾ ನೌಕರರು ಹಾಜರಿದ್ದರು.