ಗೌರಿಬಿದನೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ(Mahatma Gandhiji Jayanti) ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಸಿಸಿ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಸ್ವಚ್ಛ ಭಾರತ ಜಾಗೃತಿ ರ್ಯಾಲಿ ಹಾಗೂ ಬೀದಿ ನಾಟಕ ಪ್ರದರ್ಶನ ನಡೆಯಿತು.
ಕಾಲೇಜು ಆವರಣದಿಂದ ಆರಂಭವಾದ ರ್ಯಾಲಿ ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸಂಚರಿಸಿತು. ಎನ್‌ಸಿಸಿ ಕೆಡೆಟ್‌ಗಳು ಪ್ಲಾಸ್ಟಿಕ್ ಮುಕ್ತ ಪರಿಸರ, ನೈರ್ಮಲ್ಯ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಫಲಕಗಳನ್ನು ಪ್ರದರ್ಶಿಸಿ ಘೋಷಣೆಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಇದನ್ನೂ ಓದಿ: Gauribidanur News: ವೃತ್ತಿಯ ಬಗ್ಗೆ ಅಭಿಮಾನವಿರಲಿ: ಸ್ವಾಮಿ ವೀರೇಶಾನಂದ ಸರಸ್ವತಿ
ನಗರದ ಪ್ರಮುಖ ಸಾರ್ವಜನಿಕ ಸ್ಥಳದಲ್ಲಿ ನಡೆದ ಬೀದಿ ನಾಟಕದ ಮೂಲಕ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸುವುದು, ನೈರ್ಮಲ್ಯ ಕಾಪಾಡುವುದು ಹಾಗೂ ಪರಿಸರ ಸಂರಕ್ಷಣೆಯ ಮಹತ್ವ ವನ್ನು ಮನವರಿಕೆ ಮಾಡಿಕೊಡಲಾಯಿತು. ರ್ಯಾಲಿಯುದ್ದಕ್ಕೂ ಕೆಡೆಟ್‌ಗಳು ಸಾರ್ವಜನಿಕರು ಹಾಗೂ ವರ್ತಕರೊಂದಿಗೆ ಸಂವಾದ ನಡೆಸಿ ಏಕಬಳಕೆ ಪ್ಲಾಸ್ಟಿಕ್ ಬಳಕೆ ತ್ಯಜಿಸಿ, ನಗರವನ್ನು ಸ್ವಚ್ಛವಾಗಿಡುವಂತೆ ಮನವಿ ಮಾಡಿದರು.
ಗಾಂಧೀಜಿ ಅವರ ಸ್ವಚ್ಛ ಭಾರತದ ಆಶಯವನ್ನು ಸಾಕಾರಗೊಳಿಸುವ ಜೊತೆಗೆ ವಿದ್ಯಾರ್ಥಿ ಯುವ ಜನರಲ್ಲಿ ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎನ್‌ಸಿಸಿ ಅಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ನೂರಾರು ಕೆಡೆಟ್‌ಗಳು ಭಾಗವಹಿಸಿದ್ದರು.