ಚಿಂತಾಮಣಿ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ(Bangalore North University) ನಡೆಸಿದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಚಿಂತಾಮಣಿ ನಗರದ ಇಬ್ಬರು ವಿದ್ಯಾರ್ಥಿನಿ ಯರು ಅತ್ಯುತ್ತಮ ಸಾಧನೆ ಮಾಡಿದ್ದು,ಅವರಿಗೆ ತಾಲೂಕು ಬಲಿಜ ಜನಾಂಗದ ಸೇವಾ ಟ್ರಸ್ಟ್ ವತಿಯಿಂದ ಆತ್ಮೀಯ ವಾಗಿ ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿನಿಯರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ಹಾಗೂ ಹಾರಗಳನ್ನು ಹಾಕಿ ಸನ್ಮಾನಿಸಲಾಯಿತು.
ಇದನ್ನೂ ಓದಿ: Chinthamani News: ಜೂ.5 ರಂದು ರೈತ ಸಂಘದಿಂದ ವಿಧಾನ ಸೌಧ ಮುತ್ತಿಗೆ
ಚಿಂತಾಮಣಿ ನಗರದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾದ ಡಿ.ಅಂಜಲಿ ಅವರು ಎಂಕಾಂ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಹಾಗೂ ಎಂಎಸ್ಸಿ ಭೌತಶಾಸ್ತ್ರದಲ್ಲಿ ನಾಲ್ಕನೇ ರ್ಯಾಂಕ್ ಪಡೆದ ರುಚಿತಾ ಡಿ.ಎಂ.ಅವರನ್ನು ಅತ್ಯಂತ ಸಡಗರದಿಂದ ಸನ್ಮಾನಿಸಲಾಯಿತು. ಚಿಂತಾಮಣಿ ನಗರದ ಗಜಾನನ ವೃತ್ತದ ಆಚಾರಿ ಕಾಂಪ್ಲೆಕ್ಸ್ನಲ್ಲಿರುವ ಕರ್ನಾಟಕ ಪ್ರದೇಶ ಬಲಿಜ ಸಂಘದ ನಿರ್ದೇಶಕರಾದ ಕುಂಟಿಗಡ್ಡೆ ಲಕ್ಷ್ಮಣ್ ಅವರ ಕಚೇರಿ ಯಲ್ಲಿ ಈ ಸರಳ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ತಾಲೂಕು ಬಲಿಜ ಜನಾಂಗದ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಮುರಗಮಲ್ಲ ಲಕ್ಷ್ಮೀ ನಾರಾಯಣ ರೆಡ್ಡಿ ಅವರು ಮಾತನಾಡಿ, ನಮ್ಮ ಸಮುದಾಯದ ಹೆಣ್ಣು ಮಕ್ಕಳು ಸರ್ಕಾರಿ ಕಾಲೇಜಿನಲ್ಲಿ ಓದಿ ಇಡೀ ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ. ಈ ವಿದ್ಯಾರ್ಥಿನಿಯರು ಮುಂದಿನ ದಿನಗಳಲ್ಲಿ ಮತ್ತಷ್ಟು ಉನ್ನತ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಅತ್ಯುತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಕುಂಟಿಗಡ್ಡೆ ಲಕ್ಷ್ಮಣ್,ಪದಾಧಿಕಾರಿಗಳಾದ ಕಾಗತಿ ಅಶ್ವಥ್, ಸಿ.ಎನ್. ವೆಂಕಟಚಲಪತಿ, ನವೀನ್, ವೇಣು, ದಯಾನಂದ, ಸಿ.ಎನ್.ಮುರಳಿ, ಪ್ರಭು, ಮಂಜುನಾಥ್, ಕೆ.ಇ.ಬಿ.ಲಕ್ಷ್ಮಯ್ಯ ಸೇರಿದಂತೆ ಸಮುದಾಯದ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.