ಚಿಕ್ಕಬಳ್ಳಾಪುರ: ಹೆಚ್.ಎನ್.ವ್ಯಾಲಿ(H.N.Valley) ನೀರನ್ನು 3 ಹಂತದಲ್ಲಿ ಶುದ್ಧೀಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸಬೇಕು. ಕೃಷ್ಣಾನದಿ ನೀರು ಜಿಲ್ಲೆಗೆ ಹರಿಸಬೇಕು. ಎತ್ತಿನ ಹೊಳೆ ಕಾಮಗಾರಿ ತುರ್ತಾಗಿ ಮುಗಿಸಿ ಬಯಲು ಸೀಮೆಗಳಿಗೆ ಶುದ್ಧನೀರು ಹರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿ ಹರಿಕೃಷ್ಣ ಚಾರಿಟೇಬಲ್ ಟ್ರಸ್ಟ್, ಜೀವಜಲ ಜಾಗೃತಿ ವೇದಿಕೆ, ರೈತಪರ ಕನ್ನಡಪರ ಸಂಘಟನೆ ಸದಸ್ಯರು ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಜನಸಾಮಾನ್ಯರು ನಾಗರೀಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದ ಶನಿಮಹಾತ್ಮಾ ದೇವಾಲಯದಿಂದ ಅಂಬೇಡ್ಕರ್ ವೃತ್ತದವರೆಗೆ ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಅಪಾರ ಜನಸ್ತೋಮ ಖಾಲಿ ಕೊಡ ಹಿಡಿದು ವ್ಯವಸ್ಥೆಗೆ ಧಿಕ್ಕಾರ ಕೂಗುವ ಮೂಲಕ ಹಿಡಿ ಶಾಪ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರು ಶುದ್ಧ ನೀರು ಹರಿಸಿ, ಇಲ್ಲವಾದಲ್ಲಿ ಅಶುದ್ಧ ನೀರು ನಿಲ್ಲಿಸಿ(Run clean water, otherwise stop the dirty water) ಎಂದು ಘೋಷಣೆ ಹಾಕಿ ಪ್ರತಿಭಟಿಸಿದರು.
ಪ್ರತಿಭಟನಾ ನಿರತರನ್ನು ಉದ್ಧೇಶಿಸಿ ಮಾತನಾಡಿದ ಹರಿಕೃಷ್ಣ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಹರೀಶ್ ರೆಡ್ಡಿ ಮಾತನಾಡಿ, ರೇಷ್ಮೆ, ಹಾಲು ಹಣ್ಣು, ಹೂವು, ತರಕಾರಿ ಧವಸಧಾನ್ಯಗಳನ್ನು ಬೆಂಗಳೂರು ಸೇರಿದಂತೆ ನೆರೆಹೊರೆ ರಾಜ್ಯ ದೇಶಗಳಿಗೆ ಸರಬರಾಜು ಮಾಡುವ ಮಹತ್ತರ ಕಾರ್ಯ ವನ್ನು ನೂರಾರು ವರ್ಷಗಳಿಂದ ಮಾಡಿಕೊಂಡು ಬಂದಿರುವ ಜಿಲ್ಲೆಯ ಜನತೆಗೆ, ಬಳುವಳಿಯಾಗಿ ಹೆಚ್,ಎನ್, ವ್ಯಾಲಿ ಕೊಳಚೆ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ ಹರಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Chikkaballlapur News: ಜಿಲ್ಲಾ ಕೇಂದ್ರದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಕನ್ನಡ ಸೇನೆ ಸಂಘಟನೆ
3 ಹಂತದಲ್ಲಿ ಶುದ್ಧೀಕರಿಸಿ ಹರಿಸುವ ಕೆಲಸ ಮಾಡಿ ಎಂದು ಸರಕಾರಕ್ಕೆ ಮನವಿ ಮಾಡಿದರೂ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿಲ್ಲ ಎಂದು ಬೇಸರಿಸಿ ಮುಖ್ಯಮಂತ್ರಿಗಳಿಗೆ ಉಪ ಮುಖ್ಯ ಮಂತ್ರಿಗಳಿಗೆ ಬಾಟಲಿಗೆ ಹೆಬ್ಬಾಳ ನಾಗವಾರ ಕೆರೆಗಳ ನೀರನ್ನು ತುಂಬಿ ಕಳಿಸಲಾಗಿತ್ತು. ಸರಕಾರ ಈ ನೀರನ್ನು ಸ್ವೀಕರಿದ್ದರೂ, ಪ್ರತಿಕ್ರಿಯೆಯಾಗಿ ಏನನ್ನೂ ತಿಳಿಸಿಲ್ಲ. ಹೀಗಾಗಿ, ಸರಕಾರವನ್ನು ಎಚ್ಚರಿಸುವ ಸಲುವಾಗಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.
ದೇಶದ ನಾಗರೀಕರಿಗೆ ಶುದ್ಧ ನೀರು ಪಡೆಯುವುದು ನಮ್ಮ ಹಕ್ಕುಯಿದೆ. ಆಡಳಿತ ನಡೆಸುವ ಸರಕಾರ ಗಳು ಇದನ್ನು ಒದಗಿಸುವ ಕೆಲಸ ಮಾಡಬೇಕು. ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಘೋಷಣೆ ಮಾಡದಿರು ವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಭಾಗದ ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಈ ವಿಚಾರದಲ್ಲಿ ವೈಫಲ್ಯ ಕಂಡಿದ್ದಾರೆ. ಜವಾಬ್ದಾರಿಯುತ ನಾಗರೀಕರಾಗಿ ಇಂತಹ ಅನ್ಯಾಯ ಪ್ರತಿಭಟಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಕಿಡಿಕಾರಿದರು.
ಹರೀಶ್‌ರೆಡ್ಡಿ ಯಾರಿಗೂ ಹೆದರುವ ಮಗ ಅಲ್ಲ. ಕ್ಷೇತ್ರದ ಜನತೆ ನಮ್ಮಂತಹ ಯುವಕರನ್ನು ಬೆಂಬಲಿಸಿದ್ದೇ ಆದಲ್ಲಿ ಬಾಬಾ ಸಾಹೇಬರ ಮೇಲಾಣೆ ನಿಮ್ಮ ಮನೆಮಗನಾಗಿ ಕೆಲಸ ಮಾಡುತ್ತೇನೆ. ನಾನು ಪ್ಯಾಷನ್‌ಗಾಗಿ ಬಾಬಾ ಸಾಹೇಬರ ಪೋಟೋ ಬಳಸುವುದಿಲ್ಲ. ನಿಜವಾದ ಕಾಳಜಿಯಿಂದ ಅವರ ಸಂದೇಶದ ಹಾದಿಯಲ್ಲಿ ನಡೆಯುವ ಕೆಲಸ ಮಾಡುತ್ತೇವೆ ಎಂದರು.
ಮುಷ್ಟೂರು ಗ್ರಾಮದಲ್ಲಿ 4 ವರ್ಷದ ಮಗು ಬ್ಲಡ್ ಕ್ಯಾನ್ಸರ್ ನಿಂದ ಸಾವನ್ನಪ್ಪಿದೆ. ಈ ಕುಟುಂಬಕ್ಕೆ ಯಾರು ಆಗುತ್ತೀರಿ. ಈ ನೀರನ್ನು ಕುಡಿದರೆ ಕ್ಯಾನ್ಸರ್, ಸೇರಿ ನಾನಾ ಖಾಯಿಲೆಗಳು ಬರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ರೈತರು ಕಷ್ಟಪಟ್ಟು ಹಾಕಿದ ಬೋರ್ ಪೈಪ್‌ಗಳು ತೂತು ಬೀಳುತ್ತಿವೆ. ಅಮಾನಿ ಗೋಪಾಲಕೃಷ್ಣ ಕೆರೆಯ ಸುತ್ತ ಮುತ್ತಲೂ ನೂರಾರು ಬಗೆಯ ಸೊಳ್ಳೆಗಳು ಸಂತಾನೋ ತ್ಪತ್ತಿಯಲ್ಲಿ ತೊಡಗಿವೆ. ಈ ಕೆರೆಯ ಅಚ್ಚುಕಟ್ಟಿನಲ್ಲಿರುವ ಜನತೆ ಇದರಿಂದಾಗಿ ಹೈರಾಣಾಗಿದ್ದಾರೆ. ಈ ಭಾದೆ ನಿಮಗೆ ತಿಳಿಯಬೇಕಾದರೆ, ಮಾನ ಮರ್ಯಾದೆ ಇದ್ದರೆ ಇಡೀ ಸಚಿವ ಸಂಪುಟ ಬಂದು ಇಲ್ಲಿ ಮಲಗಬೇಕು. ಇಲ್ಲವಾದಲ್ಲಿ 3ನೇ ಹಂತದ ಶುದ್ಧೀಕರಣ ಮಾಡಬೇಕು ಎಂದು ಆಗ್ರಹಿಸಿದರು.
ಹಲವಾರು ವರ್ಷಗಳಿಂದ ಜಿಲ್ಲೆಗೆ ಶುದ್ಧನೀರು ಬೇಕು ಎಂದು ಹೋರಾಟ ಮಾಡಲಾಗುತ್ತಿದೆ. ಆದರೆ ಹೋರಾಟಗಾರರ ಬೇಡಿಕೆ ಈಡೇರಿಸಲು ಸರಕಾರಕ್ಕೆ ಮನಸ್ಸಿಲ್ಲ. 3ನೇ ಹಂತದ ಶುದ್ಧೀಕರಣದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿ ಎಂದರೆ ಕ್ಷೇತ್ರದ ಶಾಸಕರು ದಾವಣಗೆರೆ ಚುನಾವಣೆ ಅಖಾಡದಲ್ಲಿ ತೊಡೆ ತಟ್ಟುತ್ತಿದ್ದಾರೆ. ಸಂಸದರೇ ನಿಮ್ಮಲ್ಲಿ ಕೈಮುಗಿದು ಮನವಿ ಮಾಡುತ್ತೇವೆ. ನಿಮ್ಮನ್ನು ಜನತೆ ಭಗೀರಥ ಎನ್ನುತ್ತಾರೆ. ಈ ಮಾತು ಶಾಶ್ವತವಾಗಿ ಉಳಿಯಬೇಕಾದರೆ 3ನೇ ಹಂತದ ಶುದ್ಧೀಕರಣ ಮಾಡಿಸಬೇಕು. ಎತ್ತಿನ ಹೊಳೆ ಯೋಜನೆಯಿಂದ ಕೆರೆಗಳಿಗೆ ಶುದ್ಧನೀರು ಹರಿಸಬೇಕು.ಈ ಕೆಲಸ ಮಾಡುತ್ತೀರಿ ಎಂದು ಜನತೆಪರವಾಗಿ ಬೇಡುತ್ತಿದ್ದೇನೆ ಎಂದರು.
ಪರಿಸರವಾದಿ ಚೌಡಪ್ಪ ಮಾತನಾಡಿ, ಜಿಲ್ಲೆಯ ಮನವಿಗೆ ಸರಕಾರ ಬೆಲೆ ನೀಡಬೇಕು. ವಿಷದಿಂದ ಕೂಡಿರುವ ಹೆಚ್.ಎನ್.ವ್ಯಾಲಿ ನೀರನ್ನು ಹರಿಸುವುದು ಬೇಡ ಎಂದು 2019ರಿಂದ ಹೇಳುತ್ತಿದ್ದರೂ ನಿಲ್ಲಿಸಿಲ್ಲ.ಇನ್ನಾದರೂ ಇತ್ತ ಗಮನ ಹರಿಸಬೇಕು ಎಂದರು.
ಈ ವೇಳೆ ಜನದೀಶ್ ಚೌದರಿ, ಬಾಲಕುಂಟಹಳ್ಳಿ ಗಂಗಾಧರ್, ಮಂಜುನಾಥರೆಡ್ಡಿ, ಡಿ.ವಿ. ನಾರಾಯಣ ಸ್ವಾಮಿ, ಮುನಿರಾಜು, ವೆಂಕಟರೋಣಪ್ಪ, ಕನ್ನಡಪರ ರೈತಪರ ಸಂಘಟನೆಗಳು ಭಾಗಿಯಾಗಿದ್ದವು.