ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿವ್ಯಾಂಗರಿಗೆ ಅನುಕಂಪವಲ್ಲ, ಸ್ವಾವಲಂಬನೆಗೆ ಆದ್ಯತೆ: ಬಿ.ಎಸ್.ಸುರೇಶ್

ಸುಮಾರು 2,000 ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಒಂದೇ ಸೂರಿನಡಿ ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯ ವಿತರಿಸುತ್ತಿರುವುದು ಸಂತಸದ ಸಂಗತಿ. ಹಿಂದೆ ವಿಕಲಚೇತನರ ಬಗ್ಗೆ ಸಮಾಜದಲ್ಲಿ ವಿಭಿನ್ನ ಭಾವನೆಗಳಿದ್ದವು. ಇದೀಗ ಅವರನ್ನು ಅನುಕಂಪದಿಂದ ನೋಡುವ ಬದಲು ಸಮಾಜದ ಮುಖ್ಯವಾಹಿನಿಗೆ ತಂದು ಸ್ವಾವಲಂಬಿಗಳನ್ನಾಗಿ ಮಾಡಬೇಕಾದ ಕಾಲ ಬಂದಿದೆ

ಚಿಕ್ಕಬಳ್ಳಾಪುರ: ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಅನುಕಂಪದ ದೃಷ್ಟಿಯಿಂದ ಸೌಲಭ್ಯ ಕಲ್ಪಿಸುವ ಬದಲು, ಅವರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಅವಕಾಶ ಮತ್ತು ಬೆಂಬಲ ನೀಡುವುದು ಸಮಾಜದ ಕರ್ತವ್ಯವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಅಲಿಂಕೋ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಮಾರು 2,000 ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಒಂದೇ ಸೂರಿನಡಿ ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯ ವಿತರಿಸುತ್ತಿರುವುದು ಸಂತಸದ ಸಂಗತಿ. ಹಿಂದೆ ವಿಕಲಚೇತನರ ಬಗ್ಗೆ ಸಮಾಜದಲ್ಲಿ ವಿಭಿನ್ನ ಭಾವನೆಗಳಿದ್ದವು. ಇದೀಗ ಅವರನ್ನು ಅನುಕಂಪದಿಂದ ನೋಡುವ ಬದಲು ಸಮಾಜದ ಮುಖ್ಯವಾಹಿನಿಗೆ ತಂದು ಸ್ವಾವಲಂಬಿಗಳನ್ನಾಗಿ ಮಾಡಬೇಕಾದ ಕಾಲ ಬಂದಿದೆ ಎಂದರು.

ಇದನ್ನೂ ಓದಿ: Chikkaballapur News: ವೈರತ್ವದಾಚೆ ಮನುಷ್ಯತ್ವ ಮೆರೆದ ಶಾಸಕ, ಸಂಸದ: ಶಾಂತಮ್ಮ ನಮ್ಮ ತಾಯಿಯಷ್ಟೇ ಶ್ರೇಷ್ಠ ಎಂದ ಶಾಸಕ ಪ್ರದೀಪ್ ಈಶ್ವರ್

ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ 1,673 ವಿವಿಧ ಸಾಧನ–ಸಲಕರಣೆಗಳನ್ನು ವಿತರಿಸ ಲಾಗುತ್ತಿದ್ದು, ವಿಕಲಚೇತನರು ಸ್ವಾವಲಂಬಿಗಳಾದಾಗ ಮಾತ್ರ ಸರ್ಕಾರದ ಆಶಯ ಈಡೇರಲಿದೆ ಎಂದು ಹೇಳಿದರು.

ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಉಳಿದ ಭಾಗಗಳಲ್ಲಿ ಆರು ತಿಂಗಳಲ್ಲಿ ಪೂರ್ಣಗೊಳಿಸಿ, ಒಂದು ವರ್ಷದೊಳಗೆ ಜಿಲ್ಲೆಗೆ ನೀರು ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಸಂಸದ ಡಾ.ಕೆ.ಸುಧಾಕರ್ ಅವರು ಸರ್ಕಾರದ ಬದ್ಧತೆಯ ಬಗ್ಗೆ ಅನುಮಾನಪಡಬೇಕಿಲ್ಲ ಎಂದರು.

ಹಿರಿಯ ನಾಗರಿಕರಿಗೆ ಘನತೆಯ ಬದುಕು ಕಲ್ಪಿಸುವುದು ಮಕ್ಕಳ ಜವಾಬ್ದಾರಿಯಾಗಿದೆ. ತಂದೆ–ತಾಯಿಗಳನ್ನು ನಿರ್ಲಕ್ಷಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ ತಿಳಿಸಿದರು.

17cbpm4eವಿಶೇಷಚೇತನರಿಗೆ ಸಾಧನೆ ಸಲಕರಣೆಗಳ ವಿತರಣೆ- (4) ok

ಸಂಸದರ ಮಾತು

ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ದಿವ್ಯಾಂಗರಲ್ಲಿ ಆತ್ಮವಿಶ್ವಾಸ ಮೂಡಿಸುವುದು ತಮ್ಮ ಪಾಲಿನ ಪುಣ್ಯದ ಕೆಲಸವಾಗಿದೆ. ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಡಿ 1,429 ಫಲಾನುಭವಿಗಳಿಗೆ 2,634 ವಿವಿಧ ಸಹಾಯಕ ಉಪಕರಣಗಳನ್ನು 1.29 ಕೋಟಿ ರೂಪಾಯಿ ವೆಚ್ಚದಲ್ಲಿ ವಿತರಿಸಲಾಗುತ್ತಿದೆ. ಪ್ರತಿಯೊಂದು ಉಪಕರಣವೂ ಸ್ವಾಭಿಮಾನಕ್ಕೆ ಬೆಂಬಲ ಹಾಗೂ ಸ್ವಾವಲಂಬನೆಗೆ ಶಕ್ತಿಯಾಗಿದೆ ಎಂದರು.

ಕಳೆದ ವರ್ಷ 1,500 ದಿವ್ಯಾಂಗರಿಗೆ ಸೌಲಭ್ಯ ದೊರೆಯದಿರುವುದಕ್ಕೆ ಕಾರಣವೇನು ಎಂಬುದನ್ನು ಜಿಲ್ಲಾಧಿಕಾರಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಅವರು, ಹಿಂದಿನ ಉಸ್ತುವಾರಿ ಸಚಿವರ ಕಾರ್ಯವೈಖರಿಯನ್ನು ಪರೋಕ್ಷವಾಗಿ ಟೀಕಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ಧಿ ವಿಚಾರದಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸ ಬೇಕು. ನಂದಿ ಮೆಡಿಕಲ್ ಕಾಲೇಜಿನ ಒಪಿಡಿ ಸಾರ್ವಜನಿಕರ ಸೇವೆಗೆ ತೆರೆದಿರುವುದು ಸಂತಸದ ವಿಚಾರ. ಮೆಡಿಕಲ್ ಕಾಲೇಜಿಗೆ ಕೇಂದ್ರದಿಂದ 175 ಕೋಟಿ ಹಾಗೂ ನರ್ಸಿಂಗ್ ಕಾಲೇಜಿಗೆ 15 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡಿದರೆ ನರ್ಸಿಂಗ್ ಕಾಲೇಜು ಆರಂಭಿಸಲು ಸಾಧ್ಯವಾಗಲಿದೆ ಎಂದರು.

ಕರ್ನಾಟಕವು  ರಾಷ್ಟçದ ಜಿಡಿಪಿಗೆ ಸುಮಾರು 8.4ಷ್ಟು ತನ್ನ ಪಾಲನ್ನು ಕೊಡುವ ಮೂಲಕ ಭಾರತ ದೇಶದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ 2ನೇ ರಾಜ್ಯ ನಮ್ಮದಾಗಿದೆ.ಕೇಂದ್ರವು ರಾಜ್ಯದಿಂದ ಶೇ 52ರಷ್ಟು ಪ್ರತಿಶತ ತೆರಿಗೆ ಪಡೆಯುತ್ತಿದೆ. ಅಂದರೆ ಜಿಎಸ್ಟಿ ಜಾರಿಯಿಂದಾಗಿ ಪ್ರತಿ ವರ್ಷ ರಾಜ್ಯಕ್ಕೆ 59274ಕೋಟಿ ನಷ್ಟವನ್ನು ಅನುಭವಿಸುವಂತಾಗಿದೆ. ಇದು ಫೆಡರಲ್ ಸಿಸ್ಟಂ.ನಾವೆಲ್ಲಾ ಒಪ್ಪಬೇಕು.

ರಾಜ್ಯ ಸರಕಾರ ಪ್ರತಿವರ್ಷ 4 ಕೋಟಿ 50 ಸಾವಿರ ತೆರಿಗೆಯ ರೂಪದಲ್ಲಿ ಕೇಂದ್ರಕ್ಕೆ ಕೊಡುತ್ತಿದ್ದೇವೆ. ಬದಲಿಯಾಗಿ ಕೇಂದ್ರವು ರಾಜ್ಯಕ್ಕೆ 10 ಪ್ರತಿಶತ ಅಂದರೆ 45 ಸಾವಿರದಷ್ಟು ವಾಪಸ್ಸು ಕೊಡುತ್ತಿದೆ. ಜತೆಗೆ 15 ಸಾವಿರ ಕೋಟಿ ಗ್ರಾಂಟ್ ಇನ್ ಏಡ್ ರೂಪದಲ್ಲಿ ಬರುತ್ತಿದೆ. ಅಂದರೆ ಒಂದು ರೂಪಾಯಿ ಕೇಂದ್ರಕ್ಕೆ ತೆರಿಗೆ ಕೊಟ್ಟರೆ ರಾಜ್ಯಕ್ಕೆ 15 ಪೈಸೆ ಕೊಡುತ್ತಾರೆ. ಹೀಗಾಗಿ ಸಂಸದರಿಗೆ ಮನವಿ ಮಾಡುತ್ತೇನೆ. ಉತ್ತರ ಪ್ರದೇಶಕ್ಕೆ 17.9ರಷ್ಟು, ಮಧ್ಯಪ್ರದೇಶಕ್ಕೆ 7.85, ಬಿಹಾರಕ್ಕೆ 10.05 ಕೊಡುವ ಕೇಂದ್ರವು ಅತಿ ಹೆಚ್ಚು ತೆರಿಗೆ ಕೊಡುವ ರಾಜ್ಯಕ್ಕೆ ಕಡಿಮೆ ನೀಡುತ್ತಿರುವ ಈ ಅನ್ಯಾಯ ತಪ್ಪಿಸಲು ಪ್ರಧಾನಿಗಳ ಮನವೊಲಿಸಬೇಕು ಎಂದ ಕಿವಿ ಹಿಂಡಿದರು.

ಶಾಸಕ ಪ್ರದೀಪ್ ಈಶ್ವರ್ ಮಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಎಡಿಐಪಿ ಮತ್ತು ಆರ್‌ವಿವೈ ಯೋಜನೆಯಡಿ 1,429 ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ 500 ಫಲಾನುಭವಿಗಳಿಗೆ ಒಟ್ಟು 37,37,018 ರೂಪಾಯಿ ಮೌಲ್ಯದ ಸಾಧನ–ಸಲಕರಣೆಗಳನ್ನು ವಿತರಿಸಿರುವುದು ಸಂತಸದ ವಿಚಾರ ಎಂದರು.

ನಂದಿ ಮೆಡಿಕಲ್ ಕಾಲೇಜಿನ ಹೊರರೋಗಿ ವಿಭಾಗಕ್ಕೆ ಸಂಸದ ಡಾ.ಕೆ.ಸುಧಾಕರ್ ಅವರ ತಾಯಿ ಶಾಂತಮ್ಮ ಅವರ ಹೆಸರಿಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಪ್ರಸ್ತಾವನೆ ಈಡೇರಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮನೆ ಬಾಗಿಲಿಗೆ ಸೌಲಭ್ಯ: ಡಿಸಿ

ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ 22,423 ವಿಕಲಚೇತನರು ಹಾಗೂ ಸುಮಾರು 1.02 ಲಕ್ಷ ಹಿರಿಯ ನಾಗರಿಕರಿದ್ದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದರು.

ಗ್ರಾಮ ಪಂಚಾಯಿತಿಗಳಿಗೆ ನೀಡಿರುವ ಸುಮಾರು 800 ಎಕರೆ ಭೂಮಿಯಲ್ಲಿ ದಿವ್ಯಾಂಗರು ಹಾಗೂ ಹಿರಿಯ ನಾಗರಿಕರಿಗೆ ನಿವೇಶನ ಒದಗಿಸುವ ಕುರಿತು ಕ್ರಮವಹಿಸಲಾಗುವುದು. ಇಂದಿನ ಕಾರ್ಯ ಕ್ರಮದಲ್ಲಿ 1,094 ದಿವ್ಯಾಂಗರಿಗೆ ಹಾಗೂ 335 ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಯಲುವಹಳ್ಳಿ ರಮೇಶ್, ಕೆ.ಎನ್.ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವೈ.ನವೀನ್ ಭಟ್, ಎಸ್ಪಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಭಾಸ್ಕರ್, ಅಲಿಂಕೋ ಮುಖ್ಯಸ್ಥ ಕೆ.ವಿ.ರಾಜೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.