Chikkaballapur News: ವೈರತ್ವದಾಚೆ ಮನುಷ್ಯತ್ವ ಮೆರೆದ ಶಾಸಕ, ಸಂಸದ: ಶಾಂತಮ್ಮ ನಮ್ಮ ತಾಯಿಯಷ್ಟೇ ಶ್ರೇಷ್ಠ ಎಂದ ಶಾಸಕ ಪ್ರದೀಪ್ ಈಶ್ವರ್
ಇದು ರಾಜಕೀಯ ಹೊರತಾದ ಮನವಿ. ಸಂಸದರ ತಾಯಿ ನಮ್ಮೂರಿನ ಹೆಣ್ಣುಮಗಳು. ಅವರು ನಮ್ಮ ತಾಯಿಯಷ್ಟೇ ಶ್ರೇಷ್ಠರು. ಅವರ ಹೆಸರನ್ನು ಒಪಿಡಿಗೆ ಇಟ್ಟರೆ ನನಗೆ ಹೆಚ್ಚು ಸಂತೋಷವಾಗುತ್ತದೆ” ಇದು ನನ್ನ ಸಂಕಲ್ಪವೂ ಆಗಿತ್ತು ಎಂದು ಶಾಸಕ ಹೇಳಿದ ಮಾತು ಕಾರ್ಯಕ್ರಮದ ವಾತಾವರಣವನ್ನೇ ಬದಲಿಸಿತು.
ಶಾಸಕ ಮತ್ತು ಸಂಸದರು ಒಂದೇ ವೇದಿಕೆಯಲ್ಲಿರುವ ಸಂತೋಷದ ಚಿತ್ರ.. -
ಚಿಕ್ಕಬಳ್ಳಾಪುರ: ರಾಜಕೀಯ ವೇದಿಕೆಯಲ್ಲಿ ಪರಸ್ಪರ ಆರೋಪ–ಪ್ರತ್ಯಾರೋಪಗಳ ಮೂಲಕವೇ ಗಮನ ಸೆಳೆಯುತ್ತಿದ್ದ ಶಾಸಕ ಪ್ರದೀಪ್ ಈಶ್ವರ್(Pradeep Eshwar) ಮತ್ತು ಸಂಸದ ಡಾ.ಕೆ.ಸುಧಾಕರ್(Dr K Sudhakar), ಗುರುವಾರ ತಾಯಿಯ ನೆನಪು ಹಾಗೂ ಜನರ ಆರೋಗ್ಯದ ವಿಚಾರದಲ್ಲಿ ಒಂದೇ ಭಾವನೆ ಹಂಚಿಕೊಂಡ ಅಪರೂಪದ ಕ್ಷಣಕ್ಕೆ ಜಿಲ್ಲಾ ಕ್ರೀಡಾಂಗಣ ಸಾಕ್ಷಿಯಾಯಿತು.
ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರದೀಪ್ ಈಶ್ವರ್, ಸರಕಾರಿ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಆರಂಭವಾಗಿರುವ ಹೊರರೋಗಿಗಳ ವಿಭಾಗಕ್ಕೆ ಸಂಸದ ಡಾ.ಕೆ.ಸುಧಾಕರ್ ಅವರ ತಾಯಿ ಶಾಂತಮ್ಮ ಅವರ ಹೆಸರಿಡುವ ಪ್ರಸ್ತಾವನೆಯನ್ನು ಉಸ್ತುವಾರಿ ಸಚಿವ ಬೈರತಿ ಸುರೇಶ್(Byrati Suresh) ಮುಂದಿಟ್ಟು ಸಹಕರಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: Chinthamani News: ಅಂಬೇಡ್ಕರ್ ಪ್ರತಿಮೆಗೆ ಪೂಜೆಗಿಂತ ಆಶಯಗಳ ಅಳವಡಿಕೆಯೇ ನಿಜವಾದ ಗೌರವ: ಇಒ ಆನಂದ್
“ಇದು ರಾಜಕೀಯ ಹೊರತಾದ ಮನವಿ. ಸಂಸದರ ತಾಯಿ ನಮ್ಮೂರಿನ ಹೆಣ್ಣುಮಗಳು. ಅವರು ನಮ್ಮ ತಾಯಿಯಷ್ಟೇ ಶ್ರೇಷ್ಠರು. ಅವರ ಹೆಸರನ್ನು ಒಪಿಡಿಗೆ ಇಟ್ಟರೆ ನನಗೆ ಹೆಚ್ಚು ಸಂತೋಷ ವಾಗುತ್ತದೆ” ಇದು ನನ್ನ ಸಂಕಲ್ಪವೂ ಆಗಿತ್ತು ಎಂದು ಶಾಸಕ ಹೇಳಿದ ಮಾತು ಕಾರ್ಯಕ್ರಮದ ವಾತಾವರಣವನ್ನೇ ಬದಲಿಸಿತು.
ಈ ಮಾತಿಗೆ ಪ್ರತಿಕ್ರಿಯಿಸಿದ ಸಂಸದ ಡಾ.ಕೆ.ಸುಧಾಕರ್, ಶಾಸಕರ ಒಳ್ಳೆಯ ಮನಸ್ಸಿಗೆ ಕೃತಜ್ಞತೆ ಸಲ್ಲಿಸಿದರು. ತಮ್ಮ ತಾಯಿ ಶಾಂತಮ್ಮ ಅವರನ್ನು ಸ್ಮರಿಸಿದ ಅವರು, “ಆ ಸಂದರ್ಭದಲ್ಲಿ ಪೆರೇಸಂದ್ರ ಭಾಗದಲ್ಲಿ ಆಸ್ಪತ್ರೆ ಸೌಲಭ್ಯವಿದ್ದಿದ್ದರೆ ನಮ್ಮ ತಾಯಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿತ್ತು. ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಈ ಭಾಗಕ್ಕೆ ವೈದ್ಯಕೀಯ ಕಾಲೇಜು ತರಬೇಕೆಂಬ ಕನಸು ಕಂಡಿದ್ದೆ. ಶಾಸಕನಾಗಿ, ಬಳಿಕ ಸಚಿವನಾಗುವ ಅವಕಾಶ ದೊರೆತಾಗ ವೈದ್ಯಕೀಯ ಕಾಲೇಜು ತರುವ ಮೂಲಕ ಆ ಕನಸನ್ನು ನನಸು ಮಾಡಿದೆ” ಎಂದು ಹೇಳಿದರು.
ಮೆಡಿಕಲ್ ಕಾಲೇಜು ಆರಂಭವಾಗಿ ಮೂರು ವರ್ಷ ಕಳೆದರೂ ಒಪಿಡಿ ಆರಂಭವಾಗಿರಲಿಲ್ಲ. ಇದೀಗ ತಡವಾಗಿಯಾದರೂ ಒಪಿಡಿ ಸೇವೆ ಆರಂಭವಾಗುತ್ತಿರುವುದು ಸಂತಸ ತಂದಿದೆ ಎಂದರು.
“ನಮ್ಮ ತಾಯಿಯ ಹೆಸರನ್ನು ಬೋರ್ಡ್ ಮೇಲೆ ಹಾಕದಿದ್ದರೂ ಪರವಾಗಿಲ್ಲ. ಈಗಾಗಲೇ ಅವರು ಎಲ್ಲಿದ್ದಾರೋ ಅಲ್ಲಿಯೇ ಸಂತೋಷಪಡುತ್ತಿದ್ದಾರೆ. ನೂರಾರು ವೈದ್ಯರು, ನರ್ಸ್ಗಳು ಹಾಗೂ ಸಾವಿ ರಾರು ರೋಗಿಗಳಿಗೆ ಚಿಕಿತ್ಸೆ ದೊರೆಯುವ ವ್ಯವಸ್ಥೆ ನಿರ್ಮಾಣವಾಗಿರುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವ” ಎಂಬ ಸಂಸದರ ಮಾತು ಭಾವನಾತ್ಮಕವಾಗಿತ್ತು.
ಹೆಸರಿನ ಗೌರವಕ್ಕಿಂತ ಜನರ ಆರೋಗ್ಯ ಸೇವೆಯೇ ಮುಖ್ಯ ಎಂಬ ಸಂದೇಶ ಸಂಸದರ ಮಾತಿನಲ್ಲಿ ವ್ಯಕ್ತವಾದರೆ, ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಎದುರಾಳಿಯ ತಾಯಿಯನ್ನು ತಮ್ಮ ತಾಯಿಯಷ್ಟೇ ಗೌರವದಿಂದ ಸ್ಮರಿಸಿದ ಶಾಸಕರ ಮಾತು ಗಮನ ಸೆಳೆಯಿತು.
ಸಾಮಾನ್ಯವಾಗಿ ರಾಜಕೀಯ ವೇದಿಕೆಯಲ್ಲಿ ಪರಸ್ಪರ ಭಿನ್ನ ನಿಲುವುಗಳೊಂದಿಗೆ ಕಾಣಿಸಿಕೊಳ್ಳು ತ್ತಿದ್ದ ಇಬ್ಬರು ನಾಯಕರು, ಈ ಸಂದರ್ಭದಲ್ಲಿ ವೈಯಕ್ತಿಕ ಗೌರವ ಮತ್ತು ಸಾರ್ವಜನಿಕ ಹಿತದ ನೆಲೆಯಲ್ಲಿ ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿದ್ದು ಕಾರ್ಯಕ್ರಮದ ವಿಶೇಷ ಕ್ಷಣವಾಗಿ ದಾಖಲಾಗಿತು.