ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Muddenahalli News: ದೇಶದ ಎಲ್ಲ ರಾಜ್ಯಗಳಿಗೂ ವಿದ್ಯಾರ್ಥಿ ನಿಧಿ ವಿಸ್ತರಣೆಗೆ ಚಿಂತನೆ

ಭಾರತ ರಾಷ್ಟ್ರ ನಿರ್ಮಾಣ ವಿದ್ಯಾರ್ಥಿ ನಿಧಿ ಸಮಾವೇಶದ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಾವಿರಾರು ಮಕ್ಕಳು ಇನ್ನೂ ಈ ಯೋಜನೆಯ ನಿರೀಕ್ಷೆಯಲ್ಲಿದ್ದು, ಅವರಿಗೆ ಶಿಕ್ಷಣದ ನೆರವು ತಲುಪಿಸುವ ಉದ್ದೇಶದಿಂದ ಯೋಜನೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ

ಮುದ್ದೇನಹಳ್ಳಿ (ಚಿಕ್ಕಬಳ್ಳಾಪುರ): ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿರುವ ಭಾರತ ರಾಷ್ಟ್ರ ನಿರ್ಮಾಣ ವಿದ್ಯಾರ್ಥಿ ನಿಧಿ ಯೋಜನೆಯನ್ನು ತೆಲಂಗಾಣ ಸೇರಿದಂತೆ ದೇಶದ ಎಲ್ಲ ರಾಜ್ಯಗಳಿಗೆ ವಿಸ್ತರಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಅಭಿಯಾನ(One World One Family Campaign)ದ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಮಂಗಳವಾರ ನಡೆದ ಭಾರತ ರಾಷ್ಟ್ರ ನಿರ್ಮಾಣ ವಿದ್ಯಾರ್ಥಿ ನಿಧಿ ಸಮಾವೇಶದ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಾವಿರಾರು ಮಕ್ಕಳು ಇನ್ನೂ ಈ ಯೋಜನೆಯ ನಿರೀಕ್ಷೆಯಲ್ಲಿದ್ದು, ಅವರಿಗೆ ಶಿಕ್ಷಣದ ನೆರವು ತಲುಪಿಸುವ ಉದ್ದೇಶದಿಂದ ಯೋಜನೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುತ್ತಿರುವುದೇ ಈ ಯೋಜನೆಯ ಯಶಸ್ಸಿನ ಸಂಕೇತವಾಗಿದೆ. ದೇಶದ ಅಭಿವೃದ್ಧಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಇಂತಹ ಶಿಕ್ಷಣಾಧಾರಿತ ಯೋಜನೆಗಳು ಮಹತ್ವದ ಪಾತ್ರ ವಹಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Chinthamani News: ಗ್ರಾಮಗಳ ಅಭಿವೃದ್ಧಿಗಾಗಿ ನಿಲ್ಲದ ಹೋರಾಟ: ಮೂರನೇ ಹಂತದ ಪಾದಯಾತ್ರೆಗೆ ಅನುಮತಿ ಕೋರಿದ ಮಂಜುನಾಥ್

ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಆರನೇ ತರಗತಿಯಿಂದ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಒಂದರಿಂದ ಐದನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೂ ನೆರವು ನೀಡುವ ಉದ್ದೇಶದಿಂದ ವಿದ್ಯಾರ್ಥಿ ನಿಧಿ ಆರಂಭಿಸಲಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರ ಪ್ರೋತ್ಸಾಹ ಹಾಗೂ ರಾಷ್ಟ್ರೀಯ ಸೇವಾ ಭಾರತಿ ಮತ್ತು ಸ್ವಯಂಸೇವಕರ ಸಹಕಾರದಿಂದ ಕಳೆದ ಐದು ವರ್ಷ ಗಳಿಂದ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಬೌದ್ಧಿಕ ಪ್ರಮುಖ ಸುಧೀರ್ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳ ನಡುವೆ ಗುರುಕುಲ ಶಿಕ್ಷಣ ರಾಷ್ಟ್ರಕ್ಕೆ ಮಾದರಿಯಾಗಿದ್ದು, ವಿದ್ಯಾರ್ಥಿಗಳು ಮೊಬೈಲ್ ಸೇರಿದಂತೆ ಅನಗತ್ಯ ಆಕರ್ಷಣೆಗಳಿಂದ ದೂರ ವಿದ್ದರೆ ತಮ್ಮ ಗುರಿಯನ್ನು ಸುಲಭವಾಗಿ ತಲುಪಬಹುದು ಎಂದು ಸಲಹೆ ನೀಡಿದರು.

759870 ok

ಕ್ಷೇತ್ರೀಯ ಪ್ರಚಾರಕ ರಾಮ್ ಭಾರತ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಕೇವಲ ಅಕ್ಷರಜ್ಞಾನ ನೀಡುವ ಕೇಂದ್ರಗಳಾಗಿರದೆ ದೇಶಭಕ್ತಿ ಮತ್ತು ದೈವಭಕ್ತಿಯ ಮೌಲ್ಯಗಳನ್ನು ಬೆಳೆಸುವ ಕೇಂದ್ರ ಗಳಾಗಬೇಕು. ಈ ಎರಡರ ಸಮನ್ವಯದಿಂದಲೇ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದರು.

ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲದ ಶಿಕ್ಷಣ ವಿಭಾಗದ ಓಂಕಾರ್ ಸಾಯಿ ಹಾಗೂ ಗೌರವ್ ವಿದ್ಯಾರ್ಥಿ ನಿಧಿಯ ಫಲಾನುಭವಿಗಳಿಗೆ ಗುರುಕುಲ ಪ್ರವೇಶದ ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಭಾರತಿಯ ಉಪಾಧ್ಯಕ್ಷ ರಾಮೇನ್ ಶರ್ಮಾ, ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿತಾರ್ ವಾದಕ ಪಂಡಿತ್ ಶುಭೇಂದ್ರ ರಾವ್, ಪಿಯಾನೋ ವಾದಕ ಇಶಾನ್ ಲಿಯೊನಾರ್ಡ್ ರಾವ್ ಹಾಗೂ ಸೆಲೋ ವಾದಕಿ ಸಾಸ್ಕಿಯಾ ರಾವ್-ಡಿ ಹಾಸ್ ಅವರ ಸಂಗೀತ ಕಾರ್ಯಕ್ರಮ ಮೆಚ್ಚುಗೆ ಗಳಿಸಿತು.

ಪ್ರಾಥಮಿಕ ಹಂತದ ಮಕ್ಕಳಿಗೂ ವಿದ್ಯಾರ್ಥಿ ವೇತನ

ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಹಾಗೂ ರಾಷ್ಟ್ರೀಯ ಸೇವಾ ಭಾರತಿ ಸಹಯೋಗದಲ್ಲಿ ಜಾರಿಯಲ್ಲಿ ರುವ ಭಾರತ ರಾಷ್ಟ್ರ ನಿರ್ಮಾಣ ವಿದ್ಯಾರ್ಥಿ ನಿಧಿ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಜೂನ್‌ನಿಂದ ಮಾರ್ಚ್‌ವರೆಗೆ ಹತ್ತು ತಿಂಗಳು ತಿಂಗಳಿಗೆ 300ರಿಂದ 600 ರೂಪಾಯಿವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ಪ್ರಸ್ತುತ ಯೋಜನೆ ರಾಜ್ಯದ 31 ಜಿಲ್ಲೆಗಳ 240 ತಾಲ್ಲೂಕುಗಳಿಗೆ ವಿಸ್ತರಿಸಿದ್ದು, 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಆಯ್ಕೆ, ಶೈಕ್ಷಣಿಕ ಪ್ರಗತಿ ಮತ್ತು ಮಾರ್ಗದರ್ಶನದ ಹೊಣೆಯನ್ನು ರಾಷ್ಟ್ರೀಯ ಸೇವಾ ಭಾರತಿ ಸ್ವಯಂಸೇವಕರು ನಿರ್ವಹಿ ಸುತ್ತಿದ್ದಾರೆ.