ಚಿಂತಾಮಣಿ: ಸಂವಿಧಾನದ ಅಡಿಯಲ್ಲಿ ನಾವೆಲ್ಲಾ ನೌಕರರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ನಮ್ಮ ನೌಕರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಸಮನ್ವಯತೆ ಮತ್ತು ಹೊಂದಾಣಿಕೆಯಿಂದ ಸಮಾಜ ನಿರ್ಮಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಆದರೆ ಪ್ರಸ್ತುತ ಕೆ.ಇ.ಬಿ. ಅನ್ನು ಖಾಸಗೀಕರಣ ಮಾಡಲು ಹೊರಟಿರುವುದು ಅತ್ಯಂತ ಕಳವಳಕಾರಿ ಸಂಗತಿ ಯಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ ಸಿ/ಎಸ್ ಟಿ ನೌಕರರ ಸಮನ್ವಯ ಸಮಿತಿ ಚಿಂತಾಮಣಿ ತಾಲೂಕು ಘಟಕದ ಅಧ್ಯಕ್ಷರಾದ ನರಸಿಂಹಯ್ಯ ಎಂ ಕೆ ಹೇಳಿದರು.
ಇಂದು ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ಎಸ್ ಸಿ/ಎಸ್ ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಖಾಸಗೀ ಕರಣ ಮಾಡುವುದರಿಂದ ಕೇವಲ ಕೆಲವೇ ಕೆಲವು ಕುಟುಂಬಗಳು ಮಾತ್ರ ಆರ್ಥಿಕವಾಗಿ ಮುಂದು ವರಿಯಲು ಸಾಧ್ಯವಾಗುತ್ತದೆ. ಇದರಿಂದ ಇಡೀ ದೇಶಕ್ಕೆ ಮತ್ತು ಸಾಮಾನ್ಯ ಜನರಿಗೆ ದೊಡ್ಡ ಮಟ್ಟದ ನಷ್ಟ ಉಂಟಾಗಲಿದ್ದು, ಬಡತನ ಮತ್ತಷ್ಟು ಹೆಚ್ಚಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಈ ಖಾಸಗೀಕರಣ ಪ್ರಕ್ರಿಯೆಯನ್ನು ತಡೆಯಬೇಕಾಗಿದೆ"ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: Chinthamani News: ಕೈವಾರದಲ್ಲಿ ಆರಾಧನೆ ಪ್ರಯುಕ್ತ ಹೋಮ
ರಾಜ್ಯಾದ್ಯಂತ ಎಸ್‌ಸಿ/ಎಸ್‌ಟಿ ನೌಕರರ ಬಂಧುಗಳು ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸು ತ್ತಿದ್ದು, ಮುಂದಿನ ದಿನಗಳಲ್ಲಿ ಹೋರಾಟದ ದಿನಾಂಕವನ್ನು ನಿಗದಿಪಡಿಸಿ ಉಗ್ರ ಹೋರಾಟಗಳನ್ನು ಕೈಗೊಳ್ಳಲಾಗುವುದು ಎಂದು ನರಸಿಂಹಯ್ಯ ಎಂ.ಕೆ ಅವರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಉಪಾಧ್ಯಕ್ಷರಾದ ಎಸ್ ಪ್ರದೀಪ್ ಮಾತನಾಡಿ, ಚಿಂತಾಮಣಿ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ಹಾಗೂ ಕಿರುಕುಳಗಳು ನಡೆಯುತ್ತಿವೆ ಎಂದು ತೀವ್ರವಾಗಿ ಖಂಡಿಸಿದರು.
ಇತ್ತೀಚೆಗೆ ಆರೋಗ್ಯ ಇಲಾಖೆಯ ಆಂಬ್ಯುಲೆನ್ಸ್ ಚಾಲಕ ಹಾಗೂ ಸರ್ಕಾರಿ ನೌಕರರ ಸಂಘದ ಸದಸ್ಯರಾದ ಮಂಜುನಾಥ್ ಅವರನ್ನು ಯಾವುದೇ ಪೂರ್ವ ನೋಟಿಸ್ ನೀಡದೆ ಬಟ್ಲಹಳ್ಳಿ ಪೊಲೀಸರು ಠಾಣೆಗೆ ಕರೆದೊಯ್ದು ಕಿರುಕುಳ ನೀಡಿರುವ ಘಟನೆ ಪ್ರಸ್ತಾಪಿಸಿದ ಅವರು, ಈ ನಡೆಯನ್ನು ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಒಬ್ಬ ಸರ್ಕಾರಿ ನೌಕರನನ್ನು ಕರ್ತವ್ಯದ ಸಮಯ ದಲ್ಲಿ ವಶಕ್ಕೆ ಪಡೆಯುವ ಮುನ್ನ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳ ಅನುಮತಿ ಪಡೆಯಬೇಕೆಂಬ ಕನಿಷ್ಠ ನಿಯಮವನ್ನೂ ಪೊಲೀಸರು ಪಾಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ದರು.
ಇದೇ ವೇಳೆ, ಮುಂಬರುವ ದಿನಗಳಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ನೌಕರರ ಮೇಲೆ ಇಂತಹ ಘಟನೆಗಳು ಮರುಕಳಿಸಿದರೆ, ತಾಲೂಕಿನ ಎಲ್ಲಾ ಸಿಬ್ಬಂದಿಗಳು ಒಂದಾಗಿ ಸಾಂದರ್ಭಿಕ ರಜೆ ಹಾಕಿ,ತಾಲೂಕು ಕಚೇರಿ ಮುಂದೆ ಬೃಹತ್ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಈ ಕುರಿತು ಶೀಘ್ರದಲ್ಲೇ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಮತ್ತು ಬಟ್ಲಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ ಸುಮಾರು 150 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾ ನಿಸಲಾಗಿದೆ. ಸ್ಥಳೀಯ ಶಾಸಕರು ಹಾಗೂ ಸಮಿತಿಯ ರಾಜ್ಯ ಅಧ್ಯಕ್ಷರಾದ ಡಿ.ಶಿವಶಂಕರ್ ಅವರ ದಿನಾಂಕವನ್ನು ಪಡೆದು ಶೀಘ್ರದಲ್ಲೇ ಈ ಕಾರ್ಯಕ್ರಮದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಎಂ ನಂಜುಂಡಪ್ಪ, ಕೋಶಾಧ್ಯಕ್ಷರಾದ ಶಿವಪ್ರಸಾದ್ ಕೆಎಂ, ಎನ್ ನರಸಿಂಹಪ್ಪ, ತಿಮ್ಮಯ್ಯ, ರಾಧಮ್ಮ, ನಾಗರತ್ನಮ್ಮ, ಮಂಜುನಾಥ್ ಕೆ ಇ ಬಿ,ಬಿ ಎಂ ಶ್ರೀನಿವಾಸ್, ಶ್ರೀಧರ್, ರೆಡ್ಡಪ್ಪ, ಆರ್ ಶ್ರೀನಿವಾಸ್, ನರಸಿಂಹಪ್ಪ ಎಂ ಕೆ, ಸೇರಿದಂತೆ ಮತ್ತಿತರರು ಇದ್ದರು.