ಚಿಂತಾಮಣಿ: ರೇಷ್ಮೆ ಕೃಷಿ ಮಹಾವಿದ್ಯಾಲಯ(College of Sericulture)ದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ದಾಸರತಿಮನಹಳ್ಳಿ ಗ್ರಾಮದಲ್ಲಿ ಮಣ್ಣು ಪರೀಕ್ಷೆಯ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಿದರು.
ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಿರುನಾಟಕ, ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಚಿತ್ರಗಳ ಮೂಲಕ ಮಣ್ಣಿನ ಮಾದರಿ ಸಂಗ್ರಹಣೆ, ಪರೀಕ್ಷೆ ನಡೆಸುವ ವಿಧಾನ ಮತ್ತು ಮಣ್ಣಿನ ಆರೋಗ್ಯ ಕಾಪಾಡುವ ಕ್ರಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿದರು. ಮಣ್ಣು ಪರೀಕ್ಷೆಯ ಆಧಾರದ ಮೇಲೆ ಬೆಳೆಗೆ ಅಗತ್ಯವಿರುವ ಗೊಬ್ಬರದ ಪ್ರಮಾಣವನ್ನು ನಿಖರವಾಗಿ ಬಳಸುವುದರಿಂದ ಅನಗತ್ಯ ವೆಚ್ಚ ತಗ್ಗಿ, ಉತ್ಪಾದನೆ ಮತ್ತು ಆದಾಯ ಹೆಚ್ಚುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Chinthamani News: 34 ವರ್ಷಗಳ ಕಳಂಕರಹಿತ ಸೇವೆ ಸಲ್ಲಿಸಿದ ಪೋಸ್ಟ್ ಮಾಸ್ಟರ್ ಇಸ್ಮಾಯಿಲ್‌ಗೆ ಆತ್ಮೀಯ ಬೀಳ್ಕೊಡುಗೆ
ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನ ವಿಭಾಗದ ಡಾ.ನಳಿನ ಸಿ.ಎನ್., ಕೃಷಿ ವಿಸ್ತರಣಾ ವಿಭಾಗದ ಡಾ.ಸುನೀತಾ ಹಾಗೂ ಜೀವರಸಾಯನ ಶಾಸ್ತ್ರ ವಿಭಾಗದ ಡಾ. ಮಂಜುನಾಥ್ ಗೌಡ ರೈತರಿಗೆ ಮಾರ್ಗದರ್ಶನ ನೀಡಿದರು. ನಿವೃತ್ತ ಪ್ರಾಂಶುಪಾಲ ತಿಪ್ಪಾರೆಡ್ಡಿ ಸಹ ಭಾಗವಹಿಸಿದ್ದರು.
ಗ್ರಾಮದ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸುಮಾರು 60ಕ್ಕೂ ಹೆಚ್ಚು ರೈತರು ಮತ್ತು ಗ್ರಾಮಸ್ಥರು ಶಿಬಿರದಲ್ಲಿ ಪಾಲ್ಗೊಂಡು ಮಣ್ಣಿನ ಮಾದರಿ ಸಂಗ್ರಹಣೆ, ಪರೀಕ್ಷೆಯ ವಿಧಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳು ಹಾಗೂ ತಜ್ಞರೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಗ್ರಾಮಸ್ಥರ ಸಹಕಾರಕ್ಕೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು.