ಚಿಕ್ಕಬಳ್ಳಾಪುರ: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಯುವಕರಿಗೆ ಆಧುನಿಕ ತಂತ್ರಜ್ಞಾನ ಹಾಗೂ ಜಾಗತಿಕ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಅವರನ್ನು ದೇಶದ ಅಭಿವೃದ್ಧಿಯ ಭಾಗವಾಗಿಸುವುದು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಕನಸಿನ ಆಶಯಗಳಿಗೆ ಪೂರಕವಾಗಿದೆ ಎಂದು ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’(One World One Family Mission) ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಸರ್ ಎಂ.ವಿಶ್ವೇಶ್ವರಯ್ಯ ಅವರ 165ನೇ ಜನ್ಮದಿನದ ಅಂಗವಾಗಿ ಮಂಗಳವಾರ ಮುದ್ದೇನಹಳ್ಳಿ ಯಲ್ಲಿರುವ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದ ಅವರು, ದೇಶದ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು.
ಇದನ್ನೂ ಓದಿ: Chikkaballapur News: ಅರಿತ್‌ಮೆಟಿಕ್ ಜೀನಿಯಸ್ ಸ್ಪರ್ಧೆಯಲ್ಲಿ 1800 ವಿದ್ಯಾರ್ಥಿಗಳ ಭಾಗಿ
ಮುದ್ದೇನಹಳ್ಳಿಯಂತಹ ಗ್ರಾಮೀಣ ಪ್ರದೇಶದಿಂದಲೇ ಅಚಲ ಸಂಕಲ್ಪ, ಶಿಸ್ತು ಮತ್ತು ಪರಿಶ್ರಮದ ಮೂಲಕ ದೇಶ ಹೆಮ್ಮೆಪಡುವ ಎಂಜಿನಿಯರ್ ಆಗಿ ವಿಶ್ವೇಶ್ವರಯ್ಯ ಬೆಳೆದರು. ಅವರ ಬದುಕು, ಸಾಧನೆ ಮತ್ತು ದೂರದೃಷ್ಟಿ ಇಂದಿನ ಯುವಜನತೆಗೆ ಪ್ರೇರಣೆಯಾಗಿದ್ದು, ಗ್ರಾಮೀಣ ಪ್ರತಿಭೆಗೂ ಸೂಕ್ತ ಅವಕಾಶ ದೊರೆತರೆ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅವರ ಜೀವನ ತೋರಿಸಿಕೊಟ್ಟಿದೆ ಎಂದರು.
ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ಮುದ್ದೇನಹಳ್ಳಿಯಲ್ಲಿ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ವತಿಯಿಂದ ರೂರಲ್‌ಶೋರ್ಸ್ ಸಹಯೋಗದೊಂದಿಗೆ ಜುಲೈನಲ್ಲಿ ಆರಂಭಿಸಿರುವ ‘ಸರ್ ಎಂ.ವಿಶ್ವೇಶ್ವರಯ್ಯ ರೂರಲ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸ್ಕಿಲ್ ಆ್ಯಂಡ್ ಎಕ್ಸ್‌ಪೀರಿಯನ್ಸ್ (RAISE)’ ಕೇಂದ್ರದ ಕುರಿತು ವಿವರಿಸಿದರು.
RAISE ಕೇಂದ್ರದಲ್ಲಿ ಗ್ರಾಮೀಣ ಯುವಕರಿಗೆ ಜನರೇಟಿವ್ ಎಐ ಸೇರಿದಂತೆ ಆಧುನಿಕ ತಂತ್ರಜ್ಞಾನ ಗಳ ಕುರಿತು ತರಬೇತಿ ನೀಡಲಾಗುತ್ತಿದ್ದು, ಪ್ರಾಯೋಗಿಕ ಯೋಜನೆಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ, ಉದ್ಯಮಗಳೊಂದಿಗೆ ಸಂಪರ್ಕ ಹಾಗೂ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಯುವಕರನ್ನು ಜಾಗತಿಕ ಡಿಜಿಟಲ್ ಉದ್ಯೋಗಗಳಿಗೆ ಸಜ್ಜುಗೊಳಿಸುವುದು ಕೇಂದ್ರದ ಪ್ರಮುಖ ಉದ್ದೇಶವಾಗಿದೆ ಎಂದರು.
ಗ್ರಾಮೀಣ ಪ್ರತಿಭೆಯನ್ನು ಜಾಗತಿಕ ಡಿಜಿಟಲ್ ಆರ್ಥಿಕತೆಯೊಂದಿಗೆ ಸಂಪರ್ಕಿಸಿ, ಗ್ರಾಮಗಳಲ್ಲಿಯೇ ತಂತ್ರಜ್ಞಾನ ಆಧಾರಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು RAISE ಕೇಂದ್ರದ ಗುರಿಯಾಗಿದೆ. ನಗರ ಮತ್ತು ಗ್ರಾಮೀಣ ಯುವಕರ ನಡುವೆ ಅವಕಾಶಗಳ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಒಂದು ಸಣ್ಣ ಪ್ರಯತ್ನವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ಅವರ ಮೊಮ್ಮಗ ಸತೀಶ್ ಮೋಕ್ಷಗೊಂಡಂ ಅವರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು. ಪ್ರಶಾಂತಿ ಬಾಲ ಮಂದಿರ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಎನ್.ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.