ಚಿಕ್ಕಬಳ್ಳಾಪುರ: ನಗರಕ್ಕೆ ಹೊಂದಿಕೊಂಡಂತಿರುವ ಅಗಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಕುಪ್ಪೆ ಗ್ರಾಮಕ್ಕೆ ಒದಗಿದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಹೌದು. ಬನ್ನಿಕುಪ್ಪೆ ಗ್ರಾಮದ ಜನರಿಗೆ ಒಂದೆಡೆ ಹೆಚ್.ಎನ್.ವ್ಯಾಲಿ (H N Valley) ನೀರಿನ ಕಾರಣವಾಗಿ ವಿಪರೀತ ಸೊಳ್ಳೆಕಾಟ, ಮತ್ತೊಂದೆಡೆ ಚಿಕ್ಕಬಳ್ಳಾಪುರ ನಗರದ ಯುಜಿಡಿ ಪ್ಲಾಂಟ್‌ನ ದುರ್ನಾತದಿಂದ ಬದುಕು ಅಸಹನೀಯವಾಗಿದೆ.
ಈ ಗ್ರಾಮದ ಪ್ರತಿಯೊಂದು ಮನೆಯ ವಾಸಿಯೂ ಕೂಡ ಸೊಳ್ಳೆಗಳ ಕಾಟದಿಂದ ರೋಸಿ ಹೋಗಿದ್ದಾರೆ. ಇಲ್ಲಿ ಮನೆಗೆ ಬಾಗಿಲಿರುವಂತೆ ಸೊಳ್ಳೆ ಪರದೆಯ ಪರ್ಯಾಯ ಬಾಗಿಲೂ ಇಟ್ಟುಕೊಳ್ಳುವಂತಾಗಿದೆ.
ಹಿಂದೆ ಈ ಗ್ರಾಮಕ್ಕೆ ಕೋಚಿಮುಲ್ ನಿರ್ದೇಶಕರಾಗಿದ್ದ ಭರಣಿ ವೆಂಕಟೇಶ್ ಹಾಕಿಸಿ ಕೊಟ್ಟಿದ್ದ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದೆ. ಪರಿಣಾಮ ಜನ ಹೆಚ್.ಎನ್. ವ್ಯಾಲಿ ನೀರಿನ ಅಂತರ್ಜಲ ಬಳಸುತ್ತಿದ್ದು ಆತಂಕಕ್ಕೆ ಒಳಗಾಗಿದ್ದರು.
ಇದನ್ನೂ ಓದಿ: Chikkaballapur News: ಸೇವಾ ಮನೋಭಾವದಲ್ಲಿ ಮೆರೆಯಿಸಿದ ಸಚಿವ ಡಾ.ಎಂ.ಸಿ.ಸುಧಾಕರ್ ಜನ್ಮದಿನಾಚರಣೆ
ಈ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವರದಿಯಾದ ಪರಿಣಾಮ ಹೆಚ್.ಎನ್.ವ್ಯಾಲಿ ನೀರಿನ ಬಗ್ಗೆ ಜನರಲ್ಲಿ ಅಪನಂಬಿಕೆ ಉಂಟಾಗಿತ್ತು. ಇದನ್ನು ಮನಗಂಡ ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್‌ರೆಡ್ಡಿ ಮಾ.19ರ ಗುರುವಾರ ಯುಗಾದಿ ಹಬ್ಬವಿದ್ದರೂ ಬನ್ನಿಕುಪ್ಪೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರ ಜತೆಗೆ ಈ ಬಗ್ಗೆ ಆಪ್ತ ಸಮಾಲೋಚನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು ಗ್ರಾಮಸ್ಥರ ಕೋರಿಕೆಯ ಮೇಲೆ ನಮ್ಮ ಟ್ರಸ್ಟ್ ವತಿಯಿಂದ ಟ್ಯಾಂಕರ್‌ಗಳ ಮೂಲಕ ನಿತ್ಯವೂ ಈ ಬನ್ನಿಕುಪ್ಪೆ ಗ್ರಾಮಕ್ಕೆ ಕೊಳವೆ ಬಾವಿಗಳಿಂದ ಶುದ್ಧ ಕುಡಿಯುವ ನೀರು ಒದಗಿಸುವ ಕೆಲಸ ಮಾಡಲಾಗುವುದು.
ಗ್ರಾಮಸ್ಥರೆಲ್ಲರೂ ಕೂಡಿಕೊಂಡು ತಮ್ಮ ಅಗತ್ಯಗಳಿಗೆ ತಕ್ಕಂತೆ ಟ್ಯಾಂಕರ್‌ಗಳಲ್ಲಿ ನೀರು ಪಡೆಯಬಹುದು.ಅದಕ್ಕೆ ಬೇಕಾದ ಹಣಕಾಸಿನ ನೆರವನ್ನು ನಾನು ಭರಿಸುತ್ತೇನೆ. ಮನುಷ್ಯ ಮನುಷ್ಯರಿಗೆ ನೆರವಾಗುವುದೇ ಮನುಷ್ಯತ್ವ ಎನಿಸಿಕೊಳ್ಳುತ್ತದೆ ಎಂದರು. ಮುಂದಿನ ದಿನಗಳಲ್ಲಿ ಇಲ್ಲಿ ಶುದ್ಧಕುಡಿಯುವ ನೀರಿನ ಘಟಕ ಸ್ಥಾಪಿಸಲು ಕೂಡ ನೆರವು ನೀಡಲಾಗು ವುದು ಎಂದರು.
ಇದು ಬರೀ ಸಂದೀಪ್‌ರೆಡ್ಡಿ ಒಬ್ಬನ ತಲೆಗೆ ಬಂದಿರುವ ವಿಚಾರವಲ್ಲ, ಬದಲಿಗೆ ನೂರಾರು ನೀರಾವರಿ ಹೋರಾಟಗಾರರು, ಸಹೃದಯ ಮನಸ್ಸುಗಳ, ಜನಪರ ಕೆಲಸ ಮಾಡುವ ಒಳ್ಳೆಯ ಜನ ಅವರ ಮನಸ್ಸಿನಲ್ಲಿರುವುದನ್ನು ನನ್ನ ತಲೆಗೆ ತುಂಬಿ ನನ್ನ ಕಳಿಸಿದ್ದಾರೆ. ಸಂದೀಪ್ ರೆಡ್ಡಿ ಒಂದು ಮುಖ ಅಲ್ಲ. ಹತ್ತು ಹಲವು ನೂರಾರು ಸಹೃದಯರ ಭಾವನೆಗಳ ಸಮ್ಮಿಲನ ಈ ಸಂದೀಪ್‌ರೆಡ್ಡಿ. ಚುನಾವಣೆ ಬಂದಿದೆ ಎಂದೋ ಅಥವಾ ರಾಜಕೀಯ ಲಾಭಕ್ಕಾಗಿ ನಾನು ಈ ಕೆಲಸ ಮಾಡುತ್ತಿಲ್ಲ. ಚುನಾವಣೆ ಅಂತ ಅಂದುಕೊಂಡರೂ ಸಹ ಇಂತಹ ಪ್ರಖರವಾದ ವಿಚಾರ ಮತ್ತು ಸಮಸ್ಯೆಗಳಿಗೆ ಸ್ಪಂದಿಸದವರನ್ನು ಜನಪ್ರತಿನಿಧಿಗಳು ಎಂದು ಹೇಳಿಕೊಳ್ಳಲೂ ಅಸಹ್ಯವಾಗುತ್ತದೆ ಎಂದರು.
ಹೆಚ್.ಎನ್.ವ್ಯಾಲಿ ನೀರಿನಲ್ಲಿ ನೈಟ್ರೇಟ್ ಮತ್ತು ಪಾಸ್ಪರೇಟ್ ಅಂಶಗಳು ಹೆಚ್ಚಿವೆ ಎಂಬು ದನ್ನು ಜಲವಿಜ್ಞಾನಿಗಳು ಹೇಳಿದ್ದಾರೆ. ಇದರಿಂದ ಯಾವ್ಯಾವ ಖಾಯಿಲೆಗಳು ಬರುತ್ತವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
3 ಜಿಲ್ಲೆಗಳಲ್ಲಿ ಹೆಚ್.ಎನ್.ವ್ಯಾಲಿ ನೀರಿನಿಂದ ಆಗುವ ಸಮಸ್ಯೆ ಬಗ್ಗೆ ಸುಪ್ರಿಂಕೋಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡರು ಜಲಾಗ್ರಹ ಆಂದೋಲನದ ಮೂಲಕ ಸರಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದಾರೆ. ನಾನು ಈ ನೀರಿನ ಬಗ್ಗೆ ಮಾಡಿರುವ ಆರೋಪದ ಬಗ್ಗೆ ನನ್ನ ಬಳಿ ದಾಖಲೆಯಿದೆ.ಬೀಜ ನಿಗಮದ ಅಧ್ಯಕ್ಷ ಆಂಜಿನಪ್ಪ, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ನೀರಾವರಿ ಹೋರಾಟ ಗಾರರು ಕೂಡ 3ನೇ ಹಂತದ ಶುದ್ಧೀಕರಣದ ಬಗ್ಗೆ ಯಾಕೆ ಮಾತನಾಡಿದ್ದಾರೆ.
ಇದನ್ನು ಮೀರಿ ಕೆಲವರು ಇದು ಶುದ್ಧ ನೀರು ಎಂದು ಹೇಳುವುದು ತಪ್ಪು. ಹೌದು ಅವರು ಕುಡಿದಿದ್ದು ನೀರೇ ಆದರು ಎಂತಹ ನೀರು ಎಂಬುದು ಅವರಿಗೆ ಬಿಟ್ಟ ವಿಚಾರ. ನನ್ನ ಟಾರ್ಗೆಟ್ ಯಾರೋ ಒಬ್ಬ ವ್ಯಕ್ತಿಯಲ್ಲ. ತಾತ್ವಿಕ ವಿಚಾರ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದೇನೆ ಎಂದರು.
ಶಾಸಕ ಪ್ರದೀಪ್ ಈಶ್ವರ್ ತಾವೇ ಮುಂದೆ ನಿಂತು 3ನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಿ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗಲು ಮುಂದಾಗಬೇಕು. ಶಾಸಕರ ಮುಂದಾಳತ್ವದಲ್ಲಿ ಯಾವುದೇ ಹೋರಾಟಕ್ಕೆ ನಾವು ಸಿದ್ದರಿದ್ದೇವೆ.
ಸರಕಾರ ಯಾವುದೇ ಆಗಿರಲಿ ಅವರ ಹೆಸರು ಚಿರಾಯುವಾಗಿ ಉಳಿಯಲಿ. ಇದಾಗಬೇಕಾದರೆ 3ನೇ ಹಂತದ ಶುದ್ದೀಕರಣ ಮಾಡಸಲು ಮುಖ್ಯಮಂತ್ರಿಗಳ ಮನವೊಲಿಸಲಿ. ಬಿಜೆಪಿ ಶಾಸಕರೊಂದಿಗೆ ನೂರಾರು ಮುಖಂಡರ ಜತೆಗೂಡಿ ಅವರ ಜನತೆ ನಾನು ಹೋಗಲು ಸಿದ್ಧ ಎಂದು ಸಂದೀಪ್ ರೆಡ್ಡಿ ಮನವಿ ಮಾಡಿದರು.