ಚಿಕ್ಕಬಳ್ಳಾಪುರ: ಗ್ರಾಮೀಣ ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಿ, ಅವರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಗುಡಿಬಂಡೆ ತಾಲ್ಲೂಕಿನ ಸೋಮನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಂಜೀವಿನಿ ಮಾಸಿಕ ಸಂತೆಯನ್ನು ಆಯೋಜಿಸಲಾಗಿತ್ತು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ನಾಗಮಣಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ ಸಹಯೋಗದಲ್ಲಿ ಸಂತೆ ನಡೆಯಿತು.
ಇದನ್ನೂ ಓದಿ: Chikkaballapur News: ಬೂದುಗುಂಬಳ, ಹೂವು, ಹಣ್ಣು, ಸಿಹಿ ಖರೀದಿಗೆ ಮುಗಿಬಿದ್ದ ಜನತೆ; ಪ್ರಮುಖ ರಸ್ತೆಗಳಲ್ಲಿ ಹಬ್ಬದ ಕಳೆ
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಪೂಜಾ ಸಾಮಗ್ರಿಗಳು, ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು ಹಾಗೂ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ನೇರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬಕ್ಕೆ ಅಗತ್ಯವಾದ ವಿವಿಧ ಸಾಮಗ್ರಿಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವುದರಿಂದ ಮಧ್ಯವರ್ತಿಗಳ ಅವಲಂಬನೆ ಕಡಿಮೆಯಾಗಲಿದೆ. ಜತೆಗೆ ಉತ್ಪನ್ನಗಳ ಮಾರಾಟ ಹೆಚ್ಚಳ, ಆದಾಯ ವೃದ್ಧಿ ಹಾಗೂ ಮಹಿಳೆಯರ ಉದ್ಯಮಶೀಲತೆಯ ಬೆಳವಣಿಗೆಗೆ ನೆರವಾಗಲಿದೆ. ಗ್ರಾಮೀಣ ಮಹಿಳೆಯರಲ್ಲಿರುವ ಕೌಶಲ ಮತ್ತು ಸೃಜನಶೀಲತೆಯನ್ನು ಗುರುತಿಸಿ, ಅವರು ಸ್ವಂತ ಉದ್ಯಮಗಳನ್ನು ಬೆಳೆಸಿಕೊಳ್ಳಲು ಇಂತಹ ಸಂತೆಗಳು ಉತ್ತಮ ವೇದಿಕೆಯಾಗಿವೆ.
ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಗ್ರಾಹಕರು ನೇರವಾಗಿ ಖರೀದಿಸಲು ಅವಕಾಶ ದೊರೆಯುವುದರೊಂದಿಗೆ ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ. ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸುವುದು ಹಾಗೂ ಅವರ ಜೀವನೋ ಪಾಯವನ್ನು ಬಲಪಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಸಂಜೀವಿನಿ ಡೇ-ಎನ್ಆರ್ಎಲ್ಎಂ ಸಿಬ್ಬಂದಿ ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.