Chikkaballapur News: ಬೂದುಗುಂಬಳ, ಹೂವು, ಹಣ್ಣು, ಸಿಹಿ ಖರೀದಿಗೆ ಮುಗಿಬಿದ್ದ ಜನತೆ; ಪ್ರಮುಖ ರಸ್ತೆಗಳಲ್ಲಿ ಹಬ್ಬದ ಕಳೆ
ಆಯುಧ ಪೂಜೆಯಂದು ಮನೆಗಳಲ್ಲಿ ಬಳಸುವ ಉಪಕರಣಗಳು, ಕೃಷಿ ಸಲಕರಣೆಗಳು, ಯಂತ್ರೋ ಪಕರಣಗಳು, ವ್ಯಾಪಾರ ಮಳಿಗೆಗಳಲ್ಲಿನ ಸಾಧನಗಳು ಹಾಗೂ ವಾಹನಗಳನ್ನು ಸ್ವಚ್ಛಗೊಳಿಸಿ ಪೂಜಿಸುವ ಸಂಪ್ರದಾಯವಿದೆ. ಹೀಗಾಗಿ ವಾಹನಗಳಿಗೆ ಅಲಂಕಾರ ಮಾಡಲು ಬೇಕಾದ ಹೂವಿನ ಹಾರಗಳು, ಬೂದುಗುಂಬಳ, ನಿಂಬೆಹಣ್ಣು, ಕುಂಬಳಕಾಯಿ, ಬಾಳೆಕಂದು, ತೆಂಗಿನಕಾಯಿ ಹಾಗೂ ಇತರ ಪೂಜಾ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಿತ್ತು
-
ಚಿಕ್ಕಬಳ್ಳಾಪುರ: ನಾಡಿನ ಸಾಂಪ್ರದಾಯಿಕ ಹಬ್ಬಗಳಾದ ಆಯುಧಪೂಜೆ ಮತ್ತು ವಿಜಯದಶಮಿ ಸಂಭ್ರಮಕ್ಕೆ ಜಿಲ್ಲಾದ್ಯಂತ ಸಿದ್ಧತೆಗಳು ಭರದಿಂದ ಸಾಗಿದ್ದು, ಹಬ್ಬಕ್ಕೆ ಅಗತ್ಯವಾದ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿದೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂದಿದ್ದು, ಹೂವು, ಹಣ್ಣು, ಬೂದುಗುಂಬಳ, ತೆಂಗಿನಕಾಯಿ, ಬಾಳೆಕಂದು, ಮಾವಿನ ಎಲೆ ಹಾಗೂ ಸಿಹಿತಿಂಡಿಗಳ ಖರೀದಿ ಭರಾಟೆಯಿಂದ ನಡೆಯಿತು.
ನಗರದ ಬಿ.ಬಿ. ರಸ್ತೆ, ಬಜಾರ್ ರಸ್ತೆ, ಗಂಗಮ್ಮ ಗುಡಿ ರಸ್ತೆ ಹಾಗೂ ಸಂತೆ ಮಾರುಕಟ್ಟೆ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ವ್ಯಾಪಾರಿಗಳು ಹಬ್ಬದ ಸಾಮಗ್ರಿಗಳನ್ನು ಅಂಗಡಿಗಳ ಮುಂದೆ ಜೋಡಿಸಿ ಮಾರಾಟಕ್ಕೆ ಇಟ್ಟಿದ್ದರು. ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ಆಗಮಿಸಿದ ಜನರು ತಮ್ಮ ಮನೆಗಳು, ಅಂಗಡಿಗಳು, ಕಚೇರಿಗಳು ಹಾಗೂ ವಾಹನಗಳ ಪೂಜೆಗೆ ಬೇಕಾದ ವಸ್ತುಗಳನ್ನು ಖರೀದಿ ಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ರಸ್ತೆ ಬದಿಗಳಲ್ಲಿಯೂ ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿದ್ದು, ಮಾರುಕಟ್ಟೆ ಪ್ರದೇಶಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
ಇದನ್ನೂ ಓದಿ: Chikkaballapur News: ನೂರಾರು ಸುಮಂಗಲಿಯರಿಂದ ಲಲಿತಾ ಸಹಸ್ರನಾಮ ಪಠಣ; ನಾಡಿನ ಒಳಿತಿಗಾಗಿ ಪ್ರಾರ್ಥನೆ
ಪೂಜಾ ಸಾಮಗ್ರಿಗಳಿಗೆ ಹೆಚ್ಚಿದ ಬೇಡಿಕೆ: ಆಯುಧ ಪೂಜೆಯಂದು ಮನೆಗಳಲ್ಲಿ ಬಳಸುವ ಉಪಕರಣಗಳು, ಕೃಷಿ ಸಲಕರಣೆಗಳು, ಯಂತ್ರೋಪಕರಣಗಳು, ವ್ಯಾಪಾರ ಮಳಿಗೆಗಳಲ್ಲಿನ ಸಾಧನಗಳು ಹಾಗೂ ವಾಹನಗಳನ್ನು ಸ್ವಚ್ಛಗೊಳಿಸಿ ಪೂಜಿಸುವ ಸಂಪ್ರದಾಯವಿದೆ. ಹೀಗಾಗಿ ವಾಹನಗಳಿಗೆ ಅಲಂಕಾರ ಮಾಡಲು ಬೇಕಾದ ಹೂವಿನ ಹಾರಗಳು, ಬೂದುಗುಂಬಳ, ನಿಂಬೆಹಣ್ಣು, ಕುಂಬಳಕಾಯಿ, ಬಾಳೆಕಂದು, ತೆಂಗಿನಕಾಯಿ ಹಾಗೂ ಇತರ ಪೂಜಾ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಿತ್ತು. ಮನೆಗಳ ಮುಂಭಾಗದಲ್ಲಿ ತಳಿರು ತೋರಣ ಕಟ್ಟಲು ಮಾವಿನ ಎಲೆ ಮತ್ತು ಹೂವು ಗಳನ್ನು ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿತ್ತು.
ವಿಜಯದಶಮಿ ಹಿನ್ನೆಲೆಯಲ್ಲಿ ದೇವರ ಪೂಜೆ, ಮನೆಮಂದಿಯೊಂದಿಗೆ ಹಬ್ಬ ಆಚರಣೆ ಹಾಗೂ ಸಿಹಿತಿಂಡಿಗಳ ವಿನಿಮಯಕ್ಕೆ ಸಿದ್ಧತೆಗಳು ನಡೆದವು. ಹೂವಿನ ಅಂಗಡಿಗಳಲ್ಲಿ ವಿವಿಧ ಬಗೆಯ ಹೂವುಗಳು ಗಮನ ಸೆಳೆದರೆ, ಹಣ್ಣುಗಳ ಮಳಿಗೆಗಳಲ್ಲಿ ಬಾಳೆಹಣ್ಣು, ಸೇಬು, ದಾಳಿಂಬೆ ಸೇರಿದಂತೆ ವಿವಿಧ ಹಣ್ಣುಗಳನ್ನು ಜನರು ಖರೀದಿಸುತ್ತಿದ್ದರು. ಸಿಹಿತಿಂಡಿಗಳ ಅಂಗಡಿಗಳಲ್ಲಿಯೂ ಗ್ರಾಹಕರ ಓಡಾಟ ಹೆಚ್ಚಾಗಿತ್ತು.
ಬೆಲೆ ಏರಿಕೆಯ ನಡುವೆಯೂ ಖರೀದಿ ಉತ್ಸಾಹ: ಹಬ್ಬದ ದಿನಗಳಲ್ಲಿ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಕೆಲವು ಪೂಜಾ ಸಾಮಗ್ರಿಗಳ ಬೆಲೆ ಏರಿಕೆಯಾಗಿರುವ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದರು. ವಿಶೇಷವಾಗಿ ಹೂವು, ಹಣ್ಣು ಮತ್ತು ಇತರ ಅಲಂಕಾರಿಕ ವಸ್ತುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಹೆಚ್ಚಿರುವುದರಿಂದ ಅಗತ್ಯಕ್ಕೆ ತಕ್ಕಂತೆ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಕೆಲವರು ತಿಳಿಸಿದರು. ಹಬ್ಬದ ಸಮಯದಲ್ಲಿ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಮಾರುಕಟ್ಟೆ ದರಗಳ ಮೇಲೆ ನಿಗಾ ವಹಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಇನ್ನೊಂದೆಡೆ, ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಚಟುವಟಿಕೆಗಳು ಚುರುಕುಗೊಂಡಿದ್ದರಿಂದ ಬೀದಿ ಬದಿ ವ್ಯಾಪಾರಿಗಳು, ಹೂವು ಮತ್ತು ಹಣ್ಣು ಮಾರಾಟಗಾರರು ಹಾಗೂ ಸಿಹಿತಿಂಡಿ ವ್ಯಾಪಾರಿಗಳಲ್ಲಿ ವಹಿವಾಟಿನ ನಿರೀಕ್ಷೆ ಹೆಚ್ಚಾಗಿತ್ತು.
ಆರ್ಥಿಕ ಸಂಕಷ್ಟದ ನಡುವೆಯೂ ಹಬ್ಬದ ಸಂಭ್ರಮ
ಕೃಷಿ ಚಟುವಟಿಕೆಗಳು ಹಾಗೂ ಆರ್ಥಿಕ ಪರಿಸ್ಥಿತಿಯ ಸವಾಲುಗಳ ನಡುವೆಯೂ ಜನರು ಸಂಪ್ರ ದಾಯಕ್ಕೆ ಅನುಗುಣವಾಗಿ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಮನೆ, ವಾಹನ, ಅಂಗಡಿ ಹಾಗೂ ಕಚೇರಿಗಳನ್ನು ಸ್ವಚ್ಛಗೊಳಿಸಿ ಅಲಂಕರಿಸುವುದರೊಂದಿಗೆ ಪೂಜೆಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದರು. ಕುಟುಂಬದ ಸದಸ್ಯರು ಒಟ್ಟಾಗಿ ಹಬ್ಬ ಆಚರಿಸುವ ಉತ್ಸಾಹ ಮಾರುಕಟ್ಟೆ ಗಳಲ್ಲಿಯೂ ಪ್ರತಿಫಲಿಸಿತು.
ಒಟ್ಟಾರೆ, ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಹೆಚ್ಚಾಗಿದ್ದು, ವ್ಯಾಪಾರ ವಹಿವಾಟು ಗರಿಗೆದರಿದೆ. ಸಂಪ್ರದಾಯ, ಭಕ್ತಿ ಹಾಗೂ ಕುಟುಂಬದ ಸಂಭ್ರಮದೊಂದಿಗೆ ಹಬ್ಬವನ್ನು ಸ್ವಾಗತಿಸಲು ಜಿಲ್ಲೆಯ ಜನತೆ ಸಜ್ಜಾಗಿದ್ದಾರೆ.