ಚಿಕ್ಕಬಳ್ಳಾಪುರ: ನಿಸ್ವಾರ್ಥ ಪ್ರೇಮವೇ ನಿಜವಾದ ಧರ್ಮವಾಗಿದ್ದು, ಅದೇ ಸಮಾಜವನ್ನು ಮುನ್ನಡೆಸುವ ಅಪಾರ ಶಕ್ತಿಯಾಗಿದೆ. ತಾವು ಯಾವುದೇ ಪವಾಡ ಪುರುಷರಲ್ಲ; ಮಾನವ ಸೇವೆಯೇ ತಮ್ಮ ಬದುಕಿನ ಧ್ಯೇಯ ಎಂದು ಸದ್ಗುರು ಮಧುಸೂದನ ಸಾಯಿ ಹೇಳಿದರು.
ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರೊಂದಿಗೆ ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನ ಸಮಗ್ರ ಬೆಳವಣಿಗೆಗೆ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಹಾಗೂ ಆನಂದಮಯ ಕೋಶಗಳ ವಿಕಾಸ ಅಗತ್ಯವಾಗಿದೆ. ಆಹಾರ, ಆರೋಗ್ಯ, ಶಿಕ್ಷಣ ಮತ್ತು ಆಧ್ಯಾತ್ಮಿಕತೆಯನ್ನು ಸಮನ್ವಯಗೊಳಿಸಿದಾಗ ಮಾತ್ರ ಆನಂದಮಯ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಪ್ರಪಂಚ ಇಂದು ವಿಜ್ಞಾನದಲ್ಲಿ ಚಂದ್ರಲೋಕ ತಲುಪಿದರೂ ಹಸಿವು ಮತ್ತು ಬಡತನವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗದಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಶ್ರೀಮಂತರ ಮನೋಭಾವ ಪರಿವರ್ತನೆಗೊಳಿಸಿ ನಿರ್ಗತಿಕರಿಗೆ ನೆರವಾಗುವ ಉದ್ದೇಶದಿಂದ 'ಫೀಡ್ ದ ವರ್ಲ್ಡ್' ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಹೇಳಿದರು. ಆಫ್ರಿಕಾ, ನೈಜೀರಿಯಾ ಮಾತ್ರವಲ್ಲದೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಯೂ ಹಸಿವು ಮತ್ತು ನಿರ್ಗತಿಕರ ಸಮಸ್ಯೆ ಇದೆ ಎಂದು ಅವರು ಉಲ್ಲೇಖಿಸಿದರು.
ಇದನ್ನೂ ಓದಿ: Chikkaballapur News: ಅಂಬೇಡ್ಕರ್ ವಿಚಾರಗಳ ಅನುಷ್ಠಾನವೇ ದೇಶದ ಪ್ರಗತಿಗೆ ಮಾರ್ಗ: ಯಶ್ವಂತ್ ಅಂಬೇಡ್ಕರ್
ಸದ್ಗುರು ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ 'ಎಂಪವರಿಂಗ್ ಮೈಂಡ್ಸ್' ಯೋಜನೆಯಡಿ 27 ಕ್ಯಾಂಪಸ್‌ಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಶೇ.75 ರಷ್ಟು ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಮಹಿಳಾ ಸಬಲೀಕರಣಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ವೇದಜ್ಞಾನವು ಕೇವಲ ಧಾರ್ಮಿಕ ಅಧ್ಯಯನವಲ್ಲ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಜೀವನ ಶಿಕ್ಷಣವಾಗಿದೆ. ಆದ್ದರಿಂದ ವೈದ್ಯಕೀಯ ಶಿಕ್ಷಣದಲ್ಲಿಯೂ ವೇದಾಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೇವಲ ಪುಸ್ತಕ ಜ್ಞಾನವಷ್ಟೇ ಸಾಕಾಗುವುದಿಲ್ಲ; ಮಸ್ತಕ ಜ್ಞಾನ ಹಾಗೂ ಆಧ್ಯಾತ್ಮಿಕ ಶಿಕ್ಷಣವೂ ಅಗತ್ಯ. ಅದು ವೈದ್ಯರಲ್ಲಿ ಸೇವಾಭಾವ ಬೆಳೆಸುತ್ತದೆ ಎಂದು ಅಭಿಪ್ರಾಯಪಟ್ಟರು.
ಪರ ಮತ್ತು ಅಪರ ವಿದ್ಯೆ ಎರಡೂ ಸಮಾನವಾಗಿ ಮುಖ್ಯವಾಗಿದ್ದು, ಆತ್ಮಬಲವು ಆಧ್ಯಾತ್ಮಿಕ ವಿದ್ಯೆಯಿಂದ ಮಾತ್ರ ಸಾಧ್ಯ. ಸಮಾಜದ ಅವಕಾಶ ವಂಚಿತರಿಗೆ ನೆರವಾಗುವುದರಲ್ಲಿ ನಿಜವಾದ ಸಂತೋಷವಿದೆ. ಒಂದು ದೀಪದಿಂದ ಮತ್ತೊಂದು ದೀಪ ಬೆಳಗುವಂತೆ ಶಿಕ್ಷಣ, ಆರೋಗ್ಯ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸತ್ಯಸಾಯಿ ಆಶೀರ್ವಾದದಿಂದ ಕ್ರಾಂತಿ ಸಾಧ್ಯವಾಗಲಿದೆ ಎಂದು ಸದ್ಗುರು ಮಧುಸೂದನ ಸಾಯಿ ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ಸೇವಾ ಚಟುವಟಿಕೆ ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
"ದಿವ್ಯ ಸಂಜೆ" ಸಂವಾದ ಸರಣಿಯ ಮೊದಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಖ್ಯಾತ ನಟ ಸುಚೇಂದ್ರ ಪ್ರಸಾದ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. “ಎಲ್ಲರೂ ನಮ್ಮವರೇ ಇಲ್ಲಿ ಯಾರೂ ಬೇರೆಯವರಲ್ಲ ಎನ್ನುವ ಸಂಕಲ್ಪದಿಂದ ನಾನು ಕೆಲಸ ಮಾಡುತ್ತಿದ್ದೇನೆ. ಸೇವೆಯು ನನಗೆ ಆಯ್ಕೆ ಯಲ್ಲ. ತಾಯಿಗೆ ಮಗುವಿನ ಬಗ್ಗೆ ಇರುವಂಥದ್ದೇ ಪ್ರೇಮ, ನಿಸ್ವಾರ್ಥ ಮನೋಭಾವದಿಂದ ನಾನು ಕಾರ್ಯನಿರ್ವಹಿಸುತ್ತಿದ್ದೇನೆ” ಎಂದು ತಮ್ಮ ನಿಲುವನ್ನು ಪುನರುಚ್ಚರಿಸಿದರು.
"ಊಟ, ನಿದ್ರೆ, ಸಂಸಾರ ಇಷ್ಟನ್ನೇ ಮಾಡಿದರೆ ಮನುಷ್ಯ ಪಶು ಆಗ್ತಾನೆ. ಹೀಗಾಗಿ ಮನುಷ್ಯನಾಗಿ ಹುಟ್ಟಿದ ಮೇಲೆ ಧರ್ಮವನ್ನು ಪಾಲಿಸಬೇಕು. ಧರ್ಮ ಎಂದರೆ ಮಸೀದಿ, ಮಂದಿರಕ್ಕೆ ಹೋಗುವುದು ಅಲ್ಲ. ನಿಸ್ವಾರ್ಥ ಸೇವೆಯೇ ಧರ್ಮ"' ಎಂದು ಬಣ್ಣಿಸಿದರು.
“ನಾನು ಛತ್ತೀಸಗಡದಲ್ಲಿ ಹುಟ್ಟಿದರೂ ಕನ್ನಡ ತಾಯಿಯ ಮಡಿಲಲ್ಲಿ ಬೆಳೆಯುತ್ತಿದ್ದೇನೆ. ಅನ್ನ ಅಕ್ಷರ ಆರೋಗ್ಯ ಸೇವೆಗಳನ್ನು ಉಚಿತವಾಗಿ ಕೊಡಬೇಕು ಎನ್ನುವುದಕ್ಕೆ ಸತ್ಯ ಸಾಯಿ ಬಾಬಾ ಅವರೇ ಪ್ರೇರಣೆ. ಅವರು ಸುಸ್ಥಿರ ಸಂಸ್ಥೆಗಳನ್ನು ಕಟ್ಟಿದ್ದರಿಂದಲೇ ನಾನು ಒಂದು ಹಂತಕ್ಕೆ ಬರಲು ಸಾಧ್ಯವಾಯಿತು. ನನಗೆ ಬಾಬಾ ಅವರಿಂದ ಏನು ಸಿಕ್ಕಿದೆಯೋ ಅದನ್ನೇ ನಾನು ಸಮಾಜಕ್ಕೆ ಕೊಡಲು ಪ್ರಯತ್ನಿಸುತ್ತಿರುವೆ” ಎಂದು ವಿವರಿಸಿದರು.
“ಭಾರತೀಯ ಪರಂಪರೆಯಲ್ಲಿ ಅನ್ನ, ಅಕ್ಷರ ಮತ್ತು ಅರೋಗ್ಯ ಸೇವೆಗೆ ಎಂದಿಗೂ ಶುಲ್ಕ ಇರಲಿಲ್ಲ. ಹಣವಿದ್ದವರು ಮಾತ್ರವೇ ಓದಬೇಕು, ಶ್ರೀಮಂತರ ಜೀವ ಮಾತ್ರ ಉಳಿಯಬೇಕು ಎನ್ನುವುದು ಸರಿಯಾಗುತ್ತದೆಯೇ? ಹೀಗೆ ನಿರ್ಧರಿಸಲು ನಾವು ಯಾರು” ಎಂದು ಪ್ರಶ್ನಿಸಿದರು.
“ನಮ್ಮ ಸೇವಾ ಅಭಿಯಾನಕ್ಕೆ ಕರ್ನಾಟಕ, ಭಾರತಗಳಿಂದ ಮಾತ್ರವಲ್ಲ ವಿದೇಶಗಳಿಂದಲೂ ಸ್ಪಂದನೆಯಿದೆ. ನಾವು ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡಿದರೆ ಜನರು ಖಂಡಿತ ಜೊತೆಯಾಗುತ್ತಾರೆ. ಪ್ರೇಮವೇ ನನ್ನ ಶಕ್ತಿ” ಎಂದು ಆಶಯ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ನೂರಾರು ನಾಗರಿಕರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ "ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್" ನಿರ್ವಹಿಸುತ್ತಿರುವ ಸೇವಾ ಚಟುವಟಿಕೆಗಳ ಅಗಾಧತೆಯ ಪರಿಚಯ ಮಾಡಿಕೊಂಡರು.
ಕಾರ್ಯಕ್ರಮವು ನಲ್ಲಕದಿರೇನಹಳ್ಳಿ ಕ್ಯಾಂಪಸ್‌ನ ವೈದಿಕ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರ ಶ್ರೀಸೂಕ್ತ ಪಾರಾಯಣದೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಕೊನೆಯಲ್ಲಿ "ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ" ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯಾಕರ್ಷಕ ವಾದ್ಯಗೋಷ್ಠಿ (ಆರ್ಕೆಸ್ಟ್ರಾ) ಪ್ರಸ್ತುತಪಡಿಸಿದರು.
ಮರುಕಳಿಸಿತು ಧನ್ಯಜೀವಗಳ ನೆನಪು: ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಎನ್.ನರಸಿಂಹಮೂರ್ತಿ, ಸತ್ಯ ಸಾಯಿ ಗ್ರಾಮದ ಆರಂಭದ ದಿನಗಳಲ್ಲಿ ಕೈಜೋಡಿಸಿ ಸಹಕರಿಸಿದ ದೇಶ ನಂಜಪ್ಪ, ಶ್ರೀರಾಮಶೆಟ್ಟಿ, ಕಂಟೇನಹಳ್ಳಿ ನಾರಾಯಣಪ್ಪ, ಲಕ್ಷ್ಮಣಯ್ಯ, ಬೊಂಬು ನಂಜಪ್ಪ ಸೇರಿದಂತೆ ಹಲವು ಧನ್ಯಜೀವಗಳನ್ನು ನೆನಪಿಸಿಕೊಂಡರು.
“ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಅಭಿಯಾನದಲ್ಲಿ ನೀವು ಕೈಜೋಡಿಸಿದರೆ ಇಡೀ ವಿಶ್ವಕ್ಕೆ ಸೇವೆ ಸಲ್ಲಿಸಿದಂತೆ ಆಗುತ್ತೆ” ಎಂದು ವಿವರಿಸಿದರು.
ಸತ್ಯ ಸಾಯಿ ಗ್ರಾಮವು ಮೂವರು ದಿವ್ಯ ಪುರುಷರ ಅನುಗ್ರಹ, ಆಶೀರ್ವಾದಗಳ ತ್ರಿವೇಣಿ ಸಂಗಮ. ಸಂಸ್ಥೆಯನ್ನು ಸ್ಥಾಪಿಸಿದವರು ಶ್ರೀ ಮಡಿಯಾಲ ನಾರಾಯಣ ಭಟ್, ದೈವೀ ಪುರುಷ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ, ಕಳೆದ 15 ವರ್ಷಗಳಲ್ಲಿ ಸತ್ಯ ಸಾಯಿ ಗ್ರಾಮವು ವಿಶ್ವದಾದ್ಯಂತ ನಡೆಯು ತ್ತಿರುವ ಸೇವಾ ಯಜ್ಞದ ಕೇಂದ್ರವಾಗಲು ಕಾರಣ ಸದ್ಗುರು ಶ್ರೀ ಮಧುಸೂದನ ಸಾಯಿ ಎಂದು ಮಹತ್ವ ಕಾರ್ಯಚಟುವಟಿಕೆಗಳ ಹಿಂದಿರುವ ಶಕ್ತಿಗಳಿಗೆ ಧನ್ಯವಾದ ಅರ್ಪಿಸಿದರು.
ಸಂಸ್ಥೆ ಸಕಲವನ್ನೂ ಕೊಟ್ಟಿದೆ: ಸಂಸ್ಥೆಯ ವಿದ್ಯಾರ್ಥಿನಿಯೂ ಆಗಿರುವ ಶಿಡ್ಲಘಟ್ಟ ತಾಲ್ಲೂಕಿನ ತೇಜಸ್ವಿನಿ ಮಾತನಾಡಿ, “ಈ ಸಂಸ್ಥೆಗೆ ನಾನು ಕೇವಲ ಉಟ್ಟ ಬಟ್ಟೆಯೊಂದಿಗೆ ಬಂದೆ. ನನಗೆ ಊಟ, ವಸತಿ, ವಸ್ತ್ರ ಸೇರಿ ಎಲ್ಲವನ್ನೂ ಸಂಸ್ಥೆಯೇ ಕೊಟ್ಟಿದೆ. ವೈದ್ಯೆಯಾಗಬೇಕು ಎನ್ನುವ ಕನಸು ಈ ಸಂಸ್ಥೆಯಲ್ಲಿ ನನಸಾಗುತ್ತಿದೆ. ಸಂಸ್ಥೆಗೆ ಯಾರೇ ಯಾವುದೇ ರೀತಿ ಮಾಡಿದ ಸಹಾಯವು ಎಂದಿಗೂ ವ್ಯರ್ಥವಾಗುವುದಿಲ್ಲ” ಎಂದು ಹೇಳಿದರು.
ಮುದ್ದೇನಹಳ್ಳಿ ಬಾಲಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಡಾ ಟಿ.ಸಿ.ನಿಕೇತನ್ ಸ್ವಾಗತಿಸಿದರು.