Chikkaballapur News: ಅಂಬೇಡ್ಕರ್ ವಿಚಾರಗಳ ಅನುಷ್ಠಾನವೇ ದೇಶದ ಪ್ರಗತಿಗೆ ಮಾರ್ಗ: ಯಶ್ವಂತ್ ಅಂಬೇಡ್ಕರ್
ಡಾ. ಅಂಬೇಡ್ಕರ್ ಅವರ ಕನಸು ಕೇವಲ ಸಂವಿಧಾನ ರಚನೆಯಷ್ಟೇ ಅಲ್ಲ; ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಯನ್ನು ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವುದಾಗಿತ್ತು. ಇಂದಿನ ಯುವಜನತೆ ಶಿಕ್ಷಣವನ್ನು ಶಕ್ತಿಯನ್ನಾಗಿ ಮಾಡಿಕೊಂಡು ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಗುಣ ಮತ್ತು ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
-
ಚಿಕ್ಕಬಳ್ಳಾಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿಗೂ ದೇಶಕ್ಕೆ ಅತ್ಯಂತ ಪ್ರಸ್ತುತವಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವಲ್ಲಿ ಇನ್ನೂ ಸಾಕಷ್ಟು ಕೆಲಸ ಆಗಬೇಕಿದೆ ಎಂದು ಅಂಬೇಡ್ಕರ್ ಅವರ ಮೊಮ್ಮಗ ಯಶ್ವಂತ್ ಅಂಬೇಡ್ಕರ್ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ನಗರದ ಜೈ ಭೀಮ್ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಇರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಡಾ. ಅಂಬೇಡ್ಕರ್ ಅವರ ಕನಸು ಕೇವಲ ಸಂವಿಧಾನ ರಚನೆಯಷ್ಟೇ ಅಲ್ಲ; ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಯನ್ನು ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವುದಾಗಿತ್ತು. ಇಂದಿನ ಯುವಜನತೆ ಶಿಕ್ಷಣವನ್ನು ಶಕ್ತಿಯನ್ನಾಗಿ ಮಾಡಿಕೊಂಡು ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಗುಣ ಮತ್ತು ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದೇಶದಲ್ಲಿ ಸಾಮಾಜಿಕ ನ್ಯಾಯದ ಪಯಣ ಇನ್ನೂ ಪೂರ್ಣಗೊಂಡಿಲ್ಲ. ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶಗಳು ದೊರೆಯುವಂತೆ ಸರ್ಕಾರಗಳು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪರಿಣಾಮಕಾರಿ ನೀತಿಗಳನ್ನು ಜಾರಿಗೆ ತರಬೇಕು ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ಟಿಕೆಟ್‌ಗಾಗಿ ಅಲ್ಲ, ಜನಸೇವೆಯೇ ನನ್ನ ಸಂಕಲ್ಪ: ಸಂದೀಪ್ ಬಿ. ರೆಡ್ಡಿ
ಮೀಸಲಾತಿ ವ್ಯವಸ್ಥೆ ಕುರಿತು ಮಾತನಾಡಿದ ಅವರು, ಅದು ಕೇವಲ ಸೌಲಭ್ಯವಲ್ಲ, ಐತಿಹಾಸಿಕ ಸಾಮಾಜಿಕ ಅನ್ಯಾಯವನ್ನು ಸರಿಪಡಿಸುವ ಸಂವಿಧಾನಾತ್ಮಕ ವ್ಯವಸ್ಥೆಯಾಗಿದೆ. ಅದರ ಬಗ್ಗೆ ನಡೆಯುವ ಚರ್ಚೆಗಳು ಸಂವಿಧಾನದ ಆಶಯದ ನೆಲೆಯಲ್ಲಿ ಸಾಗಬೇಕು ಎಂದರು.
ಇಂದಿನ ರಾಜಕೀಯದಲ್ಲಿ ಡಾ. ಅಂಬೇಡ್ಕರ್ ಅವರ ಹೆಸರನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಆದರೆ ಅವರ ವಿಚಾರಗಳು, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳು ಆಡಳಿತದಲ್ಲಿ ಸಂಪೂರ್ಣವಾಗಿ ಪ್ರತಿಫಲಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂವಿಧಾನದ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಕೇವಲ ಸರ್ಕಾರದ ಹೊಣೆಗಾರಿಕೆ ಅಲ್ಲ. ಪ್ರತಿಯೊಬ್ಬ ನಾಗರಿಕನು ಸಂವಿಧಾನವನ್ನು ಗೌರವಿಸಿ, ಕಾನೂನಿನ ಆಳ್ವಿಕೆಯನ್ನು ಬೆಂಬಲಿಸಿ, ಸಹಬಾಳ್ವೆ ಮತ್ತು ಸಹೋದರತ್ವವನ್ನು ಪಾಲಿಸುವ ಜವಾಬ್ದಾರಿ ಹೊಂದಿದ್ದಾನೆ ಎಂದು ಹೇಳಿದರು.
ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ದಲಿತ ಸಮುದಾಯ ಶಿಕ್ಷಣ, ಭೂಮಿ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಗಳು ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಮ್ಮ ರಾಜಕೀಯ ಜೀವನಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಸ್ವಾಭಿಮಾನ, ಸಂವಿಧಾನಬದ್ಧ ಹೋರಾಟ ಮತ್ತು ಪ್ರಜಾಪ್ರಭುತ್ವದ ತತ್ವಗಳು ನಿರಂತರ ಪ್ರೇರಣೆಯಾಗಿವೆ ಎಂದು ತಿಳಿಸಿದರು.
ದೇಶದಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಹಾಗೂ ಧಾರ್ಮಿಕ ಧ್ರುವೀಕರಣ ಕಡಿಮೆ ಮಾಡಲು ಸಂವಿಧಾನದ ಮೌಲ್ಯಗಳನ್ನು ಬಲಪಡಿಸುವುದು, ಶಿಕ್ಷಣದ ಮೂಲಕ ಸಾಮಾಜಿಕ ಸಾಮರಸ್ಯ ಬೆಳೆಸುವುದು ಹಾಗೂ ಎಲ್ಲ ಸಮುದಾಯಗಳ ನಡುವೆ ಪರಸ್ಪರ ವಿಶ್ವಾಸವನ್ನು ವೃದ್ಧಿಸುವುದು ಅಗತ್ಯ ಎಂದು ಯಶ್ವಂತ್ ಅಂಬೇಡ್ಕರ್ ಹೇಳಿದರು.
ಈ ವೇಳೆ ಡಿಸಿಪಿ ಸಿದ್ದರಾಜು ಕೆ.ಜಿ ಶ್ರೀನಿವಾಸ್ ನಿಕಟಪೂರ್ವ ಉಪಾಧ್ಯಕ್ಷರು ಸರ್ಕಾರಿ ನೌಕರರ ಸಂಘ ಹಾಗೂ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರು , ಟಿ.ಟಿ ನರಸಿಂಹಪ್ಪ ರಾಜ್ಯ ಪರಿಷತ್ ಸದಸ್ಯರು ನೌಕರರ ಸಂಘ ,ಡಾ. ಗೋವಿಂದಪ್ಪ, ಡಾ. ಶಾಮ್ ಸುಂದರ್, ಡಾ. ಮುನಿಯಪ್ಪ, ಶಿಕ್ಷಕರಾದ ರವಿ ನಾರಾಯಣಸ್ವಾಮಿ, ಕೃಷ್ಣಪ್ಪ ,ಅನಿಲ್ ಕುಮಾರ್ ,ಪ್ರಸಾದ್ ನಿವೃತ್ತ ಡ್ರೈವರ್, ನಾರಾಯಣಸ್ವಾಮಿ, ತ್ಯಾಗರಾಜು, ಸೇರಿ ಅನೇಕ ಅಂಬೇಡ್ಕರ್ ಅಭಿಮಾನಿಗಳು ಸೇರಿದ್ದರು