ಚಿಕ್ಕಬಳ್ಳಾಪುರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ–2026ರ (SIR) ಹಿನ್ನೆಲೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿ ಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಅನಾಮಲಿ ಮತ್ತು ನೋ ಮ್ಯಾಪಿಂಗ್ ಎಂದು ಗುರುತಿಸಲಾದ 54,840 ಮತದಾರರಿಗೆ ನೋಟಿಸ್ ನೀಡಲಾಗಿದ್ದು, ಈ ಪೈಕಿ 21,577 ಮಂದಿಯ ವಿಚಾರಣೆ ಪೂರ್ಣಗೊಂಡಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಚಾರಣೆ ಪೂರ್ಣ ಗೊಂಡ 21,577 ಮಂದಿಯಲ್ಲಿ ಒಬ್ಬರ ಹೆಸರನ್ನು ಮಾತ್ರ ಮತದಾರರ ಪಟ್ಟಿಯಿಂದ ಕೈಬಿಡ ಲಾಗಿದೆ. ಉಳಿದ ಅರ್ಹ ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಗೊಳಿಸ ಲಾಗುವುದು ಎಂದರು.
ಮತದಾರರು ಈಗ ಏನು ಮಾಡಬೇಕು?
ನೋಟಿಸ್ ಪಡೆದವರು ಆತಂಕಪಡುವ ಅಗತ್ಯವಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಅರ್ಹತೆಯನ್ನು ದೃಢಪಡಿಸಿಕೊಳ್ಳಬಹುದು. ಈಗಾಗಲೇ ನೋಟಿಸ್ ಪಡೆದ 958 ಮಂದಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಅಂತಹವರನ್ನು ಮತ್ತೊಮ್ಮೆ ಸಂಪರ್ಕಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದನ್ನೂ ಓದಿ: Chikkaballapur News: ಮಾರುಕಟ್ಟೆ ಮೌಲ್ಯ ಪರಿಗಣಿಸಿ ಸೂಕ್ತ ಪರಿಹಾರ ನೀಡಲು ಕ್ರಮ: ಜಿ.ಪ್ರಭು
ವಿಕಲಚೇತನರು, ಹಿರಿಯ ನಾಗರಿಕರು ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರು ಖುದ್ದಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದಿದ್ದರೆ, ಅವರ ಕುಟುಂಬದ ಸದಸ್ಯರು ಅಗತ್ಯ ದಾಖಲೆಗಳೊಂದಿಗೆ ಅವರ ಪರವಾಗಿ ಹಾಜರಾಗಲು ಅವಕಾಶವಿದೆ. 500ಕ್ಕೂ ಹೆಚ್ಚು ಇಂತಹ ಮತದಾರರನ್ನು ಗುರುತಿಸಲಾಗಿದ್ದು, ಅವರ ಮನೆಗಳಿಗೆ ತೆರಳಿ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಹೊಸ ಮತದಾರರಿಗೆ ಅವಕಾಶ
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದ ಅರ್ಹರು ನಮೂನೆ–6 ಮೂಲಕ ಅರ್ಜಿ ಸಲ್ಲಿಸಬಹುದು. ವಿದೇಶದಲ್ಲಿರುವ ಭಾರತೀಯ ಮತದಾರರು ನಮೂನೆ–6ಎ ಮೂಲಕ ನೋಂದಾ ಯಿಸಿಕೊಳ್ಳಬಹುದು. ಚುನಾವಣಾ ಆಯೋಗದ ಪ್ರಕಾರ, ನಮೂನೆ–6 ಹೊಸ ಮತದಾರರ ನೋಂದಣಿಗೆ ಹಾಗೂ ನಮೂನೆ–6ಎ ವಿದೇಶಿ ಭಾರತೀಯ ಮತದಾರರ ನೋಂದಣಿಗೆ ಬಳಸ ಲಾಗುತ್ತದೆ.
ಸೆಪ್ಟೆಂಬರ್ 23 ಕೊನೆಯ ದಿನಾಂಕವಾಗಿರುವ ಹಿನ್ನೆಲೆಯಲ್ಲಿ ಅರ್ಹ ಯುವ ಮತದಾರರು ಸೇರಿದಂತೆ ಇದುವರೆಗೆ ಹೆಸರು ಸೇರ್ಪಡೆಯಾಗದವರು ಬಿಎಲ್‌ಒಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು. ಆನ್‌ಲೈನ್‌ನಲ್ಲಿಯೂ ಚುನಾವಣಾ ಆಯೋಗದ ಮತದಾರರ ಸೇವಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಮೇ ತಿಂಗಳಿನಿಂದ ಜಿಲ್ಲೆಯಲ್ಲಿ ನಮೂನೆ–6ರಡಿ 10,148 ಅರ್ಜಿಗಳು ಸ್ವೀಕರಿಸಲಾಗಿದ್ದು, ಈ ಪೈಕಿ 5,185 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಅರ್ಹರ ಹೆಸರುಗಳನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಮತದಾರರು ತಮ್ಮ ಹೆಸರು, ವಿಳಾಸ ಹಾಗೂ ಇತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿ, ಯಾವುದೇ ತಪ್ಪಿದ್ದರೆ ನಿಗದಿತ ಅವಧಿಯೊಳಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು ಎಂದು ಜಿ.ಪ್ರಭು ತಿಳಿಸಿದರು.
ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಭಾಸ್ಕರ್, ಸಹಾಯಕ ವಾರ್ತಾಧಿಕಾರಿ ಮಂಜುನಾಥ್ ಮತ್ತಿತರರು ಇದ್ದರು.