ಚಿಕ್ಕಬಳ್ಳಾಪುರ: ಬೇಸಿಗೆಯ ಝಳ ದಿನೇ ದಿನೇ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಬಿಸಿಲಿ ನಲ್ಲಿಯೇ ನಿಂತು ವ್ಯಾಪಾರ ಮಾಡಿ ಹೊಟ್ಟೆ ಹೊರೆಯುತ್ತಿರುವ ಬೀದಿಬದಿ ವ್ಯಾಪಾರಿಗಳ ನೆರವಿಗೆ ಜಯ್ ಫೌಂಡೇಷನ್(Jay Foundation) ಸಂಸ್ಥಾಪಕ ಅಧ್ಯಕ್ಷ ಜಯಕುಮಾರ್ ನಿಂತಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿದೆ.
ಹೌದು. ಗುರುವಾರ ನಗರದ ಬಿಬಿ ರಸ್ತೆ, ಬಜಾರ್ ರಸ್ತೆ, ಎಂ.ಜಿ ರಸ್ತೆಯಲ್ಲಿರುವ ಸುಮಾರು 500ಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳ ಬಳಿ ತೆರಳಿದ ಜಯಕುಮಾರ್ ಅವರಿಗೆ ಹೊಚ್ಚ ಹೊಸ ಛತ್ರಿ ವಿತರಿಸಿ ಅವರ ಯೋಗಕ್ಷೇಮ ವಿಚಾರಿಸಿ ಸಾಂತ್ವನ ಹೇಳಿದರು.
ಮಾನವೀಯ ಕಾಳಜಿಯಿಂದ ನಗರದಲ್ಲಿನ ಬೀದಿಬದಿ ವ್ಯಾಪಾರಿಗಳ ಕಷ್ಟವನ್ನು ಅರಿತ ಜಯ್ ಪೌಂಡೇಷನ್ ಸ್ವಯಂಪ್ರೇರಣೆಯಿಂದ ಛತ್ರಿಗಳ ವಿತರಣೆಗೆ ಮುಂದಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ಇದನ್ನೂ ಓದಿ: Chikkaballapur News: ಅಂಬೇಡ್ಕರ್ ಗುರುವಾಗಿ ಪಡೆದ ಯಾವ ಚಳವಳಿಗೆ ಎಂದೂ ಸಾವಿಲ್ಲ: ಡಾ.ಎಂ.ವೆಂಕಟಸ್ವಾಮಿ
ಈ ಸಂದರ್ಭದಲ್ಲಿ ಮಾತನಾಡಿದ ಜಯಕುಮಾರ್, ಬಿಸಿಲಿನ ತಾಪದಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅವರು ನೆರಳಲ್ಲಿ ನಿಂತು ವ್ಯಾಪಾರ ಮಾಡಿ ಜೀವನ ನಡೆಸು ವಂತಾಗಲಿ ಎನ್ನುವ ಕಾರಣದಿಂದ ಈ ಸಣ್ಣ ಪ್ರಯತ್ನ ಮಾಡಿದ್ದೇನೆ. ನನ್ನಂತೆ ಇತರರೂ ಅಶಕ್ತರ ನೆರವಿಗೆ ನಿಲ್ಲುವ ಕೆಲಸ ಮಾಡಬೇಕಿದೆ. ಆಗಲೇ ಸಮ ಸಮಾಜದ ಆಶಯ ಈಡೇರಲು ಸಾಧ್ಯ.
ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರೊಂದಿಗೆ ಮಾತನಾಡಿ ಅವರಿಗೆ ಬೇಕಾದ ಮೂಲ ಸೌಕರ್ಯಗಳಲ್ಲಿ ನನ್ನ ಕೈಯಿಂದ ಆಗುವ ಕೆಲಸವನ್ನು ಮಾಡಿಕೊಡಲಿದ್ದೇನೆ. ತಳ್ಳುವ ಗಾಡಿಗಳಿಗೆ ಲೈಸೆನ್ಸ್ ಮಾಡಿಕೊಡುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ನಗರಸಭೆ ಅಧಿಕಾರಿ ಗಳು ಇದಕ್ಕೆ ತಗಲುವ ವೆಚ್ಚ ತಿಳಿಸಿದರೆ ಒಟ್ಟಾಗಿ ಎಲ್ಲರಿಗೂ ನೆಮ್ಮದಿಯಿಂದ ವ್ಯಾಪಾರ ಮಾಡಿಕೊಳ್ಳಲು ಅವನುವಾಗುವಂತೆ ಅವಕಾಶ ಮಾಡಿಕೊಡಲಿ ಎಂದರು.
ಶುಕ್ರವಾರ ನನ್ನ ತಾಯಿಯವರ ಜನ್ಮದಿನವಿದ್ದು ಅದರ ಅಂಗವಾಗಿ ನಗರದಲ್ಲಿನ ಎಲ್ಲ ಬೀದಿಬದಿ ವ್ಯಾಪಾರಿಗಳಿಗೆ ಆರೋಗ್ಯ ವಿಮೆ ಮಾಡಿಸಿಕೊಡಲಾಗುವುದು ಎಂದ ಅವರು ಛತ್ರಿ ವಿತರಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಮಾತ್ರವಲ್ಲದೆ ಗೌರಿಬಿದನೂರು ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳಿಗೂ ವಿಸ್ತರಿಸಲಾಗುವುದು ಎಂದರು.