Chikkaballapur News: ಅಂಬೇಡ್ಕರ್ ಗುರುವಾಗಿ ಪಡೆದ ಯಾವ ಚಳವಳಿಗೆ ಎಂದೂ ಸಾವಿಲ್ಲ: ಡಾ.ಎಂ.ವೆಂಕಟಸ್ವಾಮಿ
ದಲಿತ ಜನಾಂಗಗಳಿಗಾಗಿ ಸೇವೆ ಸಲ್ಲಿಸಿದ ಕಾರಣಕ್ಕೆ ನನಗೆ ದಲಿತ ಚೇತನ ಪ್ರಶಸ್ತಿ ನೀಡಿದ್ದಾರೆ. ದಸಂಸ ಹುಟ್ಟಿ 50 ವರ್ಷಗಳ ಆಯುಷ್ಯ ಕಳೆದಿದೆ. ಈ ನಡುವೆ ಚಿರಸ್ಥಾಯಿಯಾಗಿ ಉಳಿಯು ವಂತಹ ಚಾರಿತ್ರಿಕ ಹೋರಾಟಗಳನ್ನು ಮಾಡಿದೆ. ಮುಂದೆಯೂ ಕೂಡ 50 ವರ್ಷ ಖಚಿತವಾಗಿ ಈ ಹೋರಾಟ ಮುನ್ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕ್ರಮದಲ್ಲಿ ಡಾ.ಎಂ.ವೆಂಕಟಸ್ವಾಮಿ ಅವರಿಗೆ ದಲಿತ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು. -
ಚಿಕ್ಕಬಳ್ಳಾಪುರ: ಅಂಬೇಡ್ಕರ್ ಅವರನ್ನು ಗುರುವಾಗಿ ಪಡೆದು ನಿರ್ದಿಷ್ಟ ಗುರಿ ಹೊಂದಿ ರುವ ಯಾವುದೇ ಜನಪರ ಚಳವಳಿಗಳಿಗೆ ಸೋಲಾಗಲಿ, ಸಾವಾಗಲಿ ಇರಲು ಸಾಧ್ಯವೇ ಇಲ್ಲ ಎಂದು ದಲಿತ ಚೇತನ ಪ್ರಶಸ್ತಿ ಪುರಸ್ಕೃತ ಹಿರಿಯ ನಾಯಕ ಡಾ.ಎಂ.ವೆಂಕಟಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ದಲಿತ ಸಂಘಟನೆಗಳ ಒಕ್ಕೂಟ ಏರ್ಪಡಿ ಸಿದ್ದ ಡಾ.ಎಂ.ವೆಂಕಟಸ್ವಾಮಿ ಅವರಿಗೆ ದಲಿತ ಚೇತನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ದಲಿತ ಜನಾಂಗಗಳಿಗಾಗಿ ಸೇವೆ ಸಲ್ಲಿಸಿದ ಕಾರಣಕ್ಕೆ ನನಗೆ ದಲಿತ ಚೇತನ ಪ್ರಶಸ್ತಿ ನೀಡಿದ್ದಾರೆ. ದಸಂಸ ಹುಟ್ಟಿ 50 ವರ್ಷಗಳ ಆಯುಷ್ಯ ಕಳೆದಿದೆ. ಈ ನಡುವೆ ಚಿರಸ್ಥಾಯಿ ಯಾಗಿ ಉಳಿಯುವಂತಹ ಚಾರಿತ್ರಿಕ ಹೋರಾಟಗಳನ್ನು ಮಾಡಿದೆ. ಮುಂದೆಯೂ ಕೂಡ 50 ವರ್ಷ ಖಚಿತವಾಗಿ ಈ ಹೋರಾಟ ಮುನ್ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಮಗೆ ನಮ್ಮ ಹೋರಾಟಕ್ಕೆ ನಿರ್ದಿಷ್ಟ ಗುರಿಯಿತ್ತು. ಅಂಬೇಡ್ಕರ್ ಎಂಬ ಗುರುವಿದ್ದರು. ಈಗ ಎಲ್ಲವೂ ತುರ್ತಾಗಿಯೇ ಆಗಬೇಕಿದೆ. ಸಂಘಕ್ಕೆ ಸೈದ್ಧಾಂತಿಕ ಬದ್ಧತೆ ಬೇಕು. ದಸಂಸದ ಇಂತಹ ಕಾರ್ಯಕ್ರಮಗಳು ಸಮುದಾಯ ಕಟ್ಟುವ ಆತ್ಮಾವಲೋಕನದ ಕಾರ್ಯಕ್ರಮ ಗಳಾಗಬೇಕು ಎಂದು ಕರೆ ನೀಡಿದರು.
ನನ್ನ ವಯಸ್ಸು 72 ಆಗಿದ್ದರೂ ಇಂದಿಗೂ ಕೂಡ ಅಂಬೇಡ್ಕರ್ ವಿಚಾರಕ್ಕೆ ಬದ್ಧವಾಗಿರುವ ಯಾವುದೇ ಕಾರ್ಯಕ್ರಮಗಳಿಗೆ ನನ್ನ ಬೆಂಬಲವಿದೆ. ಎಲ್ಲಾ ಸಂಘಟನೆಗಳನ್ನು ಒಟ್ಟು ಗೂಡಿಸಿ ಕಾರ್ಯಕ್ರಮ ಮಾಡುವ ಮೂಲಕ ದಸಂಸ ನಡೆದು ಬಂದ ಹಾದಿಯನ್ನು ಮೆಲುಕು ಹಾಕುವ ಕೆಲಸ ಆಗಬೇಕು ಎಂದರು.
ದಲಿತ ಚಳವಳಿಗೆ 50 ವರ್ಷ ಸಂದಿರುವ ಸಂದರ್ಭದ ಸವಿನೆನಪಿಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಆಯೋ ಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ದಲಿತ ಚೇತನ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರು ವುದು ಅತ್ಯಂತ ಸಂತೋಷ ತಂದಿದೆ ಎಂದರು.
ನಗಗೀಗ 72 ವರ್ಷ ನನ್ನ ಹೋರಾಟಕ್ಕೆ 60 ವರ್ಷ ತುಂಬಿದೆ, ಶ್ರೀನಿವಾಸಪುರದ ಹಾಸ್ಟೆಲ್ ನಲ್ಲಿ 6ನೇ ತರಗತಿ ಓದುತ್ತಿರುವಾಗ ಕಲ್ಲು ಮಣ್ಣು ಸ್ವಚ್ಛ ಮಾಡದೆ ಮಾಡುತ್ತಿದ್ದ ಮುದ್ದೆ
ಊಟವನ್ನು ಪ್ರಶ್ನಿಸಿದ್ದಕ್ಕೆ ವಾರ್ಡನ್ ಹೊಡೆದಿದ್ದರು. ಆಗ ಕೈಯಲ್ಲಿ ಮುದ್ದೆ ಹಿಡಿದೇ ಬಿಡಿಒ ಕಚೇರಿಯವರೆಗೆ ಹೋರಾಟ ಪ್ರಾರಂಭ ಮಾಡಿದ್ದೇ. ಈ ಮುದ್ದೆ ಚಳವಳಿ ಮೂಲಕ ವಾರ್ಡನ್ ಮೇಲೆ ಶಿಸ್ತುಕ್ರಮವಾಗುವಂತೆ ಮಾಡಿದ್ದೆ. ಇಲ್ಲಿಂದ ನನ್ನ ಹೋರಾಟ ಪ್ರಾರಂಭ. ಆಗ ಡಿಎಸ್‌ಎಸ್‌ನ ಎನ್.ಶಿವಣ್ಣ ಅವರ ತಾಯಿ ನಮ್ಮ ಹಾಸ್ಟೆಲ್‌ನಲ್ಲಿ ಆಹಾರ ಧಾನ್ಯ ಸ್ವಚ್ಛ ಮಾಡುವ ಕೆಲಸಕ್ಕೆ ಸೇರಿದ್ದರು ಎಂದು ಸ್ಮರಿಸಿದರು.
ನಂತರ ಪದವಿಯಲ್ಲಿದ್ದಾಗ 10ನೇ ತರಗತಿ ಮುನಿವೆಂಕಟಪ್ಪನ ಕೊಲೆ ಆಗುತ್ತದೆ. ಕಾರಣ ಜೀತಗಾರನ ಮಗ ಎಸ್‌ಎಸ್‌ಎಲ್‌ಸಿ ಪ್ರಥಮದರ್ಜೆಯಲ್ಲಿ ಪಾಸಾಗಿರುತ್ತಾನೆ. ಪಟೇಲನ ಮಗ ಪೇಲ್ ಆಗಿರುತ್ತಾನೆ.ಇದನ್ನು ಸಹಿಸದೆ ಪಟೇಲ ಮುನಿವೆಂಕಟಪ್ಪನನ್ನು ಕೊಲೆ ಮಾಡಿ ಬೋರ್‌ವೆಲ್‌ನಲ್ಲಿ ಹಾಕಿ ಬಿಟ್ಟಿರುತ್ತಾನೆ. ಆಗ ದಸಂಸ ಹುಟ್ಟಿರಲಿಲ್ಲ. ನಚಿಕೇತ ನಿಲಯ ದಲ್ಲಿನ ವಿದ್ಯಾರ್ಥಿಗಳನ್ನೆಲ್ಲಾ ಒಂದುಗೂಡಿಸಿಕೊಂಡು ಈ ಘಟನೆ ಖಂಡಿಸಿ ವಿದ್ಯಾರ್ಥಿ ಚಳವಳಿ ಪ್ರಾರಂಭಿಸಲಾಯಿತು. ಆಗ ಕೋಟಿಗಾನಹಳ್ಳಿ ರಾಮಯ್ಯ, ಎನ್.ವೆಂಕಟೇಶ್,ನನ್ನ ಹೋರಾಟಕ್ಕೆ ಕೈ ಜೋಡಿಸಿದ್ದರು ಎಂದು ಸ್ಮರಿಸಿದರು.
ಪ್ರೊ.ಬಿ.ಕೃಷ್ಣಪ್ಪ ನೇತೃತ್ವದಲ್ಲಿ ಹುಟ್ಟಿಕೊಂಡ ದಸಂಸದಲ್ಲಿ ವಿದ್ಯಾರ್ಥಿ ನಾಯಕನಾಗಿ ದ್ದಾಗ ರಾಮ್‌ದಾಸ್ ಅಠವಳೆ, ಸವಿತಾ ಅಂಬೇಡ್ಕರ್ ಅವರನ್ನು ಕೋಲಾರಕ್ಕೆ ಕರೆಸಿ ನಚಿಕೇತ ನಿಲಯದಲ್ಲಿ ರಾಜ್ಯ ಮಟ್ಟದ ಪ್ರಥಮ ವಿದ್ಯಾರ್ಥಿ ಸಮ್ಮೇಳನ ಆಯೋಜನೆ, ಟೌನ್‌ಹಾಲ್ ಸರ್ಕಲ್‌ನಲ್ಲಿ ದಲೇಕ ಜಿಲ್ಲಾ ಸಮ್ಮೇಳನ ನಡೆಸಿದ್ದು, ಮಾಲೂರು ಹುಣಸೀ ಕೋಟೆ ಶೇಷಗಿರಿಯಪ್ಪನ ಕೊಲೆ ಖಂಡಿಸಿ ಬಿ.ಕೃಷ್ಣಪ್ಪ ನೇತೃತ್ವದಲ್ಲಿ ಐತಿಹಾಸಿಕ ಕಾಲ್ನಡಿಗೆ ಜಾಥಾ, ಗೌರಿಬಿದನೂರಿನ ಹೆಚ್.ನಾಗಸಂದ್ರ ಜೀತ ವಿಮುಕ್ತಿ ಹೋರಾಟ, ಸೇರಿ ನಿರಂತರ 53 ವರ್ಷಗಳ ದಲಿತ ಹೋರಾಟವು ಇಂದು ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿ ರುವ ದಲಿತ ಚೇತನ ಪ್ರಶಸ್ತಿ ಕೊಡಮಾಡುವವರೆಗೆ ಬಂದು ನಿಂತಿದೆ ಎಂದರು. ಸೈದ್ಧಾಂತಿಕ ಕಾರಣಕ್ಕೆ ದಸಂಸ ದಿಂದ ಹೊರಗೆ ಬಂದೆ.
80ರ ದಶಕದಲ್ಲಿ ದಸಂಸದಲ್ಲಿ ಉಂಟಾದ ಸೈದಾಂತಿಕ ಸಂಘರ್ಷದಿಂದ ಹೊರ ಬಂದು, ಅಂಬೇಡ್ಕರ್ ಅವರೇ ಸಂಸ್ಥಾಪಿಸಿದ್ದ ಎಸ್‌ಎಸ್‌ಡಿ, ಆರ್‌ಪಿಐ, ಬಿಎಸ್‌ಐ, ಪಿಇಎಸ್ ಸಂಘಟನೆಗಳನ್ನು ರಾಜ್ಯದಲ್ಲಿ ಮರುಸ್ಥಾಪಿಸಿ ಅವುಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟ ದಲ್ಲಿ ಮುನ್ನಡೆಸಿ ಅನೇಕ ಯುವ ನಾಯಕರನ್ನು ಹುಟ್ಟು ಹಾಕಿದ್ದೇನೆ.
60 ವರ್ಷ ಭರ್ತಿಯಾಗಿ ಬೀದಿ ಹೋರಾಟಗಳನ್ನು ಮಾಡಿ ಸಾಕಾಗಿದೆ. ನಮ್ಮಿಂದಾಗಿ ವಿಧಾನಸೌಧ, ಪಾರ್ಲಿಮೆಂಟ್ ಪ್ರವೇಶ ಪಡೆದವರು, ವಾಪಸ್ಸು ಬೀದಿಗೆ ಬಂದು ಹೋರಾಟ ಮಾಡಲಿ, ನಾವು ಪಾರ್ಲಿಮೆಂಟಿಗೆ, ವಿಧಾಸೌಧಕ್ಕೆ ಹೋಗುವ ಕೆಲಸ ಮಾಡೋಣ. ದಲಿತ ಚಳವಳಿಗಳು ಬೀದಿ ಬದಿಯ ಪ್ರತಿಭಟನೆಗಳಲ್ಲಿಯೇ ಕಳೆದು ಹೋಗದೆ ಈ ಜನಾಂಗಗಳು ಆಳುವ ವರ್ಗವಾಗಲು ದಲಿತ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಹೋರಾಟವು ಸದ್ಯದ ಅಗತ್ಯವಾಗಿದೆ ಎಂದರು.
ಬೀದಿ ಹೋರಾಟ ಸಾಕು ವಿಧಾನ ಸೌಧ ಪಾರ್ಲಿಮೆಂಟ್ ಹೋರಾಟ ಮಾಡೋಣ. ಹೋರಾಟಗಾರರು ವಿಧಾನ ಸೌಧಕ್ಕೆ ಹೋಗಬೇಕು.ನಾವು ನೀಡುವವರು ಆಗಬೇಕು, ಬೇಡುವವರು ಆಗಬಾರದು.ಆಳುವ ವರ್ಗ ಆಗಬೇಕು. ಹೀಗಾಗಿ ಸುತ್ತೋಲೆ ಹಾಕಲಾಗಿದೆ ಎಂದು ಕರೆ ನೀಡಿದರು.
ಇಂದು ವಿಷಮಯ ಪರಿಸ್ಥಿತಿಯಿದೆ. ನಾವು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಅಂಬೇಡ್ಕರ್ ಸಿದ್ಧಾಂತ ಮೈಗೂಡಿಸಿಕೊಂಡು ಸಾಗಬೇಕು. 101 ಜಾತಿ ಜಗಳ ರೋಸಿ ಹೋಗಿದೆ. 101 ಎಸ್ಸಿ ಮತ್ತು 51 ಎಸ್ಟಿ ಒಟ್ಟುಗೂಡಿ ಸಾಗಬೇಕಿದೆ. ಒಳಮೀಸಲಾತಿ ಎಂಬು ದು ಮೇಲ್ಜಾತಿಗಳ ಹುನ್ನಾರವಿದು.ಇದಕ್ಕೆ ಬಲಿಯಾಗಬೇಡಿ. ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ಹೋರಾಟ ಪ್ರಾರಂಭ ಆಗಿದೆ. ಇದನ್ನು ಸಮರ್ಥವಾಗಿ ಮುನ್ನಡೆಸೋಣ, ಈ 50 ವರ್ಷ ಚಳವಳಿಗಾಗಿ ಜೀವತೇದ ಎಲ್ಲಾ ಹೋರಾಟಗಾರರಿಗೆ ಸನ್ಮಾನ ಆಗಬೇಕಿದೆ ಎಂದರು.
ಸುಧಾ ವೆಂಕಟೇಶ್ ಮಾತನಾಡಿ ದಸಂಸದ ಜೀವಸೆಲೆಯಾಗಿ, ಹೋರಾಟಕ್ಕೆ ಜೀವ ತುಂಬಿದ್ದ ಸಿದ್ದಲಿಂಗಯ್ಯ ಅವರ ಹೊಲೆ ಮಾದಿಗರ ಹಾಡು ಕೃತಿಗೂ 50 ವರ್ಷ ಆಗಿದೆ. ದಸಂಸ ಸಂಘಟನೆಗೂ 50 ವರ್ಷ ಆಗಿದೆ. ಈ ಹೊತ್ತಿನಲ್ಲಿ ಚಳವಳಿಗಳ ಸಂಗಾತಿ ಡಾ.ಎಂ. ವೆಂಕಟಸ್ವಾಮಿ ಅವರನ್ನು ಸನ್ಮಾನಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ನಚಿಕೇತ ನಿಲಯದಿಂದ ನಾನು ಇವರನ್ನು ನೋಡಿಕೊಂಡು ಬೆಳೆದಿದ್ದೇವೆ. ಇವರ ಮನಸ್ಸು ಹೋರಾಟ ಎರಡೂ ಚಿನ್ನವೇ.. ಅಪ್ಪಟ ಅಂಬೇಡ್ಕರ್ ವಾದಿಯಾಗಿ ಸಂಘಟನೆಗಳಿಗೆ ಜೀವ ತುಂಬಿದ್ದಾರೆ.ಇವರ ಗರಡಿಯಲ್ಲೇ ಬೆಳೆದು ತಿಂದ ಮನೆಗೆ ದ್ರೋಹ ಬಗೆಯುವುದು ಸರಿಯಲ್ಲ. ಗುರು ಗುರಿಯಿಲ್ಲದ ಸಂಘಟನೆಗಳ ಸಂಖ್ಯೆ ಬೆಳೆಯುತ್ತಿವೆ.ಇವರಿಗೆಲ್ಲಾ ನೀವು ಗುರುಸ್ಥಾನದಲ್ಲಿದ್ದು ದಾರಿ ತೋರಬೇಕಿದೆ ಎಂದರು.
ಗಾಯಕ ಗಾ.ನ.ಅಶ್ವತ್ಥ್ ಮಾತನಾಡಿ, ವೆಂಕಟಸ್ವಾಮಿ ಅಪ್ಪಟ ಅಂಬೇಡ್ಕರ್ ಚಿಂತನೆಗಳ ನಂಬಿದ ಹೋರಾಟಗಾರ. ನಮ್ಮಂತಹವರ ಹೃದಯಗಳಲ್ಲಿ ಇವರು ಇರುವ ಕಾರಣ ದಸಂಸ ಹೋರಾಟಗಳು ಇನ್ನೂ ಜೀವಂತವಾಗಿವೆ. ಒಳಮೀಸಲಾತಿ ವಿಚಾರದಲ್ಲಿ ಕಚ್ಚಾಟ ಬೇಡ. ತಾಯಿ ಸಂಸ್ಕೃತಿಯ ಬಹುದೊಡ್ಡ ಮಾದರಿ ಅಂಬೇಡ್ಕರ್. ನಾವೆಲ್ಲಾ ಮನುಷ್ಯ ಜಾತಿಗೆ ಸೇರಿದವರು ಎಂಬುದನ್ನು ಮರೆಯದಿರೋಣ ಎಂದರು.
ಇಂಗ್ಲಿಷ್ ಶಿಕ್ಷಣ ಇಂದು ಕನ್ನಡ ಶಾಲೆಗಳಲ್ಲಿ ಪ್ರಾರಂಭವಾಗಿರುವುದರ ಹಿಂದೆ ವೆಂಕಟ ಸ್ವಾಮಿಯವರ ಹೋರಾಟ ಕಾರಣ.ವ್ಯಕ್ತಿ ಆರಾಧನೆ ಬೇಡ. ಅಪ್ಪಟ ಅಂಬೇಡ್ಕರ್ ವಾದಿಗಳನ್ನು ಗುರಿತಿಸಿ ಅವರನ್ನು ಗೌರವಿಸಿ ಶುಭಾಶಯಗಳು ಹೇಳೋಣ ಎಂದರು.
ದಸಂಸ ಜಿಲ್ಲಾ ಸಂಚಾಲಕ ಬಿ.ವಿ.ಆನಂದ್ ಮಾತನಾಡಿ ಡಾ.ಎಂ.ವೆಂಕಟಸ್ವಾಮಿ ಅಣ್ಣ ನವರು ಕಷ್ಟಗಳಿಗೆ ಮರುಗುವ ಗುಣವುಳ್ಳ ನಾಯಕ.ಅವರ ವ್ಯಕ್ತಿತ್ವಕ್ಕೆ ದಸಂಸ ಕೊಡುಗೆ ಯೂ ಅಪಾರವಾಗಿದೆ. ಇವರು ಚಳವಳಿಗಳ ಸ್ಪೂರ್ತಿಯ ಚಿಲುಮೆ.ತಳ ಸಮುದಾಯಗಳ ಸ್ಪೂರ್ತಿ. ಕೆಲವರು ಹೊರಗೆ ಅಂಬೇಡ್ಕರ್ ವಾದಿ, ಮನೆಯೊಳಗೆ ಮನುವಾದಿ ಗಳಾಗಿರು ತ್ತಾರೆ. ಇಂತಹವರು ಅಂಬೇಡ್ಕರ್ ಅವರನ್ನು ದೇವರಾಗಿಸಿದ್ದಾರೆ. ಅವರ ತತ್ವಾದರ್ಶ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು. ಬುದ್ಧನ ಆರಾಧಿಸಬೇಕು ಎಂದರು.
*
ಬಲಗೈ ಜಾತಿಗಳ ಒಕ್ಕೂಟದ ಸಲಹಾ ಸಮಿತಿ ಅಧ್ಯಕ್ಷ ಏಡುಕೊಂಡಲ ಶ್ರೀನಿವಾಸ್ ಮಾತನಾಡಿ, ದಲಿತ ಸಂಘಟನೆಗಳ ಹುಟ್ಟಿಗೆ ಕಾರಣವಾದ ಡಾ.ಎಂ.ವೆಂಕಟಸ್ವಾಮಿ 72 ತುಂಬಿದ್ದರೂ ಚಿರಯುವಕನಂತೆ ಇಂದಿಗೂ ಹೋರಾಟಗಳೊಂದಿಗೆ ಜೀವಿಸುತ್ತಿದ್ದಾರೆ. ನಮಗಾಗಿ ದುಡಿದ ಹಿರಿಯರನ್ನು ಸ್ಮರಿಸುವುದು ನಮ್ಮ ಅಂಬೇಡ್ಕರ್ ವಶಂಸ್ಥರ ಮೂಲ ಗುಣ. ಇನ್ನೊಮ್ಮೆ ಸಕಲೆಂಟು ಸಮುದಾಯದೊಡಗೂಡಿ ಕನ್ನಡ ಭವನದಲ್ಲಿ ಅದ್ಧೂರಿ ಯಾಗಿ ಕಾರ್ಯಕ್ರಮ ಮಾಡಿ ಅಲ್ಲಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸೋಣ.
ನಾಗಸೇನಾ ಬುದ್ಧ ವಿಹಾರದ ಉಳಿವಿಗೆ ಕಾರಣವಾಗಿ ಬಡಮಕ್ಕಳ ಶಿಕ್ಷಣಕ್ಕೆ ದಾರಿದೀಪ ವಾಗಿದ್ದಾರೆ. ಈ ವಿಚಾರದಲ್ಲಿ ಅವರನ್ನು ವಿದ್ಯಾಭೀಷ್ಮ ಎಂದರೆ ತಪ್ಪಾಗಲಾರದು. ಮುಂದಿನ ದಿನಗಳಲ್ಲಿ ನಾಗಸೇನಾ ಶಾಲೆಗೆ ಬೇಕಾದ ಆರ್ಥಿಕ ನೆರವನ್ನು ನಾನು ಕೊಡಲು ಬದ್ಧನಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಡಾ.ಎಂ.ವೆಂಕಟ ಸ್ವಾಮಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆ ದಲಿತ ಚಳವಳಿಗೆ 50 ವರ್ಷ ತುಂಬಿರುವ ಹೊತ್ತಿನಲ್ಲಿ ಡಾ.ಎಂ.ವೆಂಕಟಸ್ವಾಮಿ ಅವರಿಗೆ ದಲಿತ ಚೇತನ ಪ್ರಶಸ್ತಿ ಪ್ರಧಾನ ಮಾಡಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಮುಖಂಡ ಸುದಾ ವೆಂಕಟೇಶ್, ಡಾ.ಶ್ರೀನಿವಾಸ್, ಬಿ.ವಿ.ಆನಂದ್, ಎಸ್‌ಎಸ್‌ಡಿ ರಾಜ್ಯ ಉಪಾಧ್ಯಕ್ಷ ಪಿಳ್ಳರಾಜು ಬೋಸು, ಬೆಂಗ್ರಾ. ಜಿಲ್ಲಾಧ್ಯಕ್ಷ ಚಂದ್ರಶೇಖರ್, ರಾಜ್ಯ ಮಹಿಳಾ ಅಧ್ಯಕ್ಷ ಶೋಭ,ಸಮುದಾಯದ ಮುಖಂಡ ವೆಂಕಟ್.ಡಿ. ಮತ್ತಿತರರು ಇದ್ದರು.