ಚಿಕ್ಕಬಳ್ಳಾಪುರ: “ಮುಂದಿನ ಕಾಲ ಬಹಳ ಕಠೋರವಾಗಿರಲಿದೆ. ಅಂತಹ ಕಾಲಕ್ಕೆ ಹಾಡುಗಳೇ ಉತ್ತರವಾಗಬೇಕು. ಹಾಡುಗಳು ನಾಳೆಗಳಿಗೆ ಕಣ್ಣಾಗಬೇಕು” ಎಂದು ಕರ್ನಾಟಕ ಜಾನಪದ ಅಕಾಡೆಮಿ(Karnataka Janapada Academy) ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ನಗರದಲ್ಲಿ ಇಂಡಿಯನ್ ಫೋಕ್ ಬ್ಯಾಂಡ್ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ‘ಗೊಲ್ಲಹಳ್ಳಿ ಗಾನಯಾನ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾಲ್ಕೈದು ದಶಕಗಳಲ್ಲಿ ತಾವು ಬರೆದ ಅರಿವಿನ ಪದಗಳು, ಪರಿಸರದ ಪದಗಳು, ಬದುಕಿನ ಹಾಡುಗಳು ಹಾಗೂ ಜನಪದ ಗೀತೆಗಳನ್ನು ಯುವಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಗಾನಯಾನ ರೂಪುಗೊಂಡಿದೆ ಎಂದರು.
“ಇಂದು ಕಠಿಣತೆ ಮತ್ತು ಕ್ರೌರ್ಯದಿಂದ ಕೂಡಿದ ಪದಗಳು ನಮ್ಮ ಕಿವಿಗಳನ್ನು ತಟ್ಟುತ್ತಿವೆ. ಇಂತಹ ಪದಗಳನ್ನು ತಿರಸ್ಕರಿಸಿ ಈ ನೆಲದ ಪದಗಳನ್ನು, ಪ್ರಕೃತಿಯ ಗೀತೆಗಳನ್ನು, ನೀರಿನ ಬದುಕಿನ ಹಾಡುಗಳನ್ನು ಮತ್ತೆ ಹಾಡಬೇಕು. ಅವುಗಳನ್ನು ಮಕ್ಕಳ ಮನಸ್ಸಿನಲ್ಲಿ ನಾಟಬೇಕು. ಅದಕ್ಕೆ ಈ ಕಾರ್ಯಕ್ರಮ ಮುನ್ನಡೆ ಬರೆಯಲಿ” ಎಂದು ಆಶಿಸಿದರು.
ಇದನ್ನೂ ಓದಿ: Karnataka Janapada Academy: ಗೊಲ್ಲಹಳ್ಳಿಗೆ ತವರ ಬಾಗೀನ: ಗಾನಯಾನದ ಮೂಲಕ ಹಾಡಿನ ಗೌರವ
ಹಾಡಿನ ಪರಂಪರೆ ನಿಂತುಹೋಗಬಹುದೆAಬ ಕೊರಗು ತಮ್ಮಲ್ಲಿತ್ತು. ಆದರೆ ಹೊಸಪೀಳಿಗೆ “ನೀವು ನಿರಾಶರಾಗಬೇಡಿ, ನಾವಿದ್ದೇವೆ” ಎಂಬ ಧೈರ್ಯವನ್ನು ಗಾನಯಾನದ ಮೂಲಕ ತೋರಿಸಿದೆ. ಅನೇಕರು ಇಂತಹ ಸಾಹಿತ್ಯವನ್ನು ಉಸಿರಾಗಿಸಿಕೊಂಡು ಹೊಸದಾಗಿ ಬರೆಯುತ್ತಿದ್ದಾರೆ. ಹೊಸ ಗಾಯಕರು ಹಾಡುತ್ತಿದ್ದಾರೆ. ಇದು ಸಂತೋಷದ ಸಂಗತಿ ಎಂದರು.
ಹಾಡುಗಾರರು ತಮ್ಮ ಬೆಳವಣಿಗೆಯ ಜತೆಗೆ ಸಮಾಜಕ್ಕೂ ಕೊಡುಗೆ ನೀಡುವ ನೈತಿಕ ಜವಾಬ್ದಾರಿ ಹೊಂದಿದ್ದಾರೆ. “ನಿಮ್ಮ ಬೆಳವಣಿಗೆಗೆ ಈ ಸಮಾಜ ಸಾಕಷ್ಟು ಕೊಟ್ಟಿದೆ ಎಂಬುದನ್ನು ಮರೆಯ ಬಾರದು. ಸಾಸಿವೆ ಕಾಳಿನಷ್ಟಾದರೂ ಸಮಾಜಕ್ಕೆ ಒಳ್ಳೆಯದನ್ನು ಮಾಡಿ” ಎಂದು ಯುವ ಕಲಾವಿದರಿಗೆ ಕಿವಿಮಾತು ಹೇಳಿದರು.
ಸಂಸ್ಕೃತಿಗೆ ಜಾತಿ, ಬಣ್ಣ, ಧರ್ಮದ ಗಡಿಗಳಿಲ್ಲ. ಜಂಬೆಬಾಲು ಸೇರಿದಂತೆ ಕಲಾವಿದರು ದೇಶ-ವಿದೇಶಗಳಲ್ಲಿ ಕರ್ನಾಟಕದ ನೆಲಮೂಲ ಸಂಸ್ಕೃತಿಯನ್ನು ಪರಿಚಯಿಸುತ್ತಿರುವುದು ಹೆಮ್ಮೆಯ ಸಂಗತಿ. ಜಾತಿ-ಧರ್ಮದ ಗಡಿಗಳನ್ನು ದಾಟುವ ಶಕ್ತಿ ಹಾಡಿಗಿದೆ ಎಂದರು.
ದಸಂಸ ಸಂಪರ್ಕದಲ್ಲಿದ್ದ ದಿನಗಳನ್ನು ಸ್ಮರಿಸಿದ ಅವರು, ಅಂದು ಬೆರಳೆಣಿಕೆಯಷ್ಟು ಹಾಡುಗಾರ ರಿದ್ದರು. ತಾವು, ಪಿಚ್ಚಳ್ಳಿ ಶ್ರೀನಿವಾಸ್ ಸೇರಿದಂತೆ ಹಲವರು ಹಾಡುತ್ತಿದ್ದೆವು. ಆಗ ಬಿತ್ತಿದ ಹಾಡುಗಳು ಇಂದು ಸಾವಿರಾರು ಹಾಡುಗಾರರನ್ನು ಸೃಷ್ಟಿಸಿವೆ ಎಂದರು.
ಜನಪದರು ತಮ್ಮ ಬದುಕಿನ ಜತೆಗೆ ಜೀವಜಂತು, ಪ್ರಕೃತಿ ಮತ್ತು ಸುತ್ತಲಿನ ಪರಿಸರದ ಬಗ್ಗೆಯೂ ಕಾಳಜಿ ಹೊಂದಿದ್ದರು. ಇಂದು ಕೆರೆ-ಕುಂಟೆಗಳ ಒತ್ತುವರಿ, ನೀರಿನ ಕೊರತೆ ಹಾಗೂ ಪರಿಸರ ಮಾಲಿನ್ಯದಿಂದ ನಮ್ಮ ಮೂಲಗಳೇ ನಾಶವಾಗುತ್ತಿವೆ. “ಮತ್ತೆ ನಾವು ನಮ್ಮ ಬೇರುಗಳನ್ನು ಹುಡುಕಬೇಕಿದೆ. ಇಲ್ಲವಾದರೆ ನಾವೂ ನಾಮಾವಶೇಷವಾಗುವ ಅಪಾಯವಿದೆ” ಎಂದು ಎಚ್ಚರಿಸಿದರು.
ರಿಯಾಲಿಟಿ ಶೋಗಳ ಮೂಲಕ ಕೃತಕವಾಗಿ ನಗಿಸುವ, ಅಳಿಸುವ ಮತ್ತು ಚಪ್ಪಾಳೆ ಹೊಡೆಸುವ ಮನರಂಜನೆಯಿಂದ ಅಸತ್ಯವನ್ನು ಸತ್ಯದಂತೆ ಬಿಂಬಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಟೀಕಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಮಾತನಾಡಿ, ಅಕ್ಷರವನ್ನು ಕೆಲವರ ಸ್ವತ್ತಾಗಿಸದೆ ಜನರ ಬಳಿಗೆ ಕೊಂಡೊಯ್ಯುವ ಸಾಮಾಜಿಕ ಜವಾಬ್ದಾರಿಯನ್ನು ಶಿವಪ್ರಸಾದ್ ತಮ್ಮದೇ ರೀತಿಯಲ್ಲಿ ನಿರ್ವಹಿಸಿದ್ದಾರೆ. ಸಂಕಷ್ಟಗಳ ನಡುವೆಯೂ ಅವರ ಪ್ರತಿಭೆ ಕುಗ್ಗಲಿಲ್ಲ. ‘ಗೊಲ್ಲಹಳ್ಳಿ ಗಾನಯಾನ’ ಯುವಪೀಳಿಗೆಗೆ ಹೊಸ ಚೈತನ್ಯ ನೀಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಸರಕಾರಿ ಮಹಿಳಾ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯದ ಬಿಇಡಿ ಕಾಲೇಜು, ಗೋಲ್ಡನ್ ಗ್ಲೀಮ್ಸ್ ಕಾಲೇಜು ಹಾಗೂ ವಿಷ್ಣುಪ್ರಿಯ ಕಾಲೇಜಿನ ವಿದ್ಯಾರ್ಥಿಗಳು ಗೊಲ್ಲಹಳ್ಳಿ ಶಿವಪ್ರಸಾದ್ ಅವರ ಹಾಡುಗಳನ್ನು ಹಾಡಿ ಗಮನ ಸೆಳೆದರು. ಗ.ನ.ಅಶ್ವತ್ಥ್, ಮುನಿರೆಡ್ಡಿ, ಗೊಲ್ಲಹಳ್ಳಿ ನಾರಾಯಣಸ್ವಾಮಿ, ಬಿ.ವಿ.ಆನಂದ್, ಅರಣ್ ವೆ.ಚಿ., ಚಂದ್ರು, ಮಹೇಶ್, ಶೈಲಜಾ, ನಂದೀಶ್ ಮತ್ತಿತರರು ಭಾಗವಹಿಸಿ ದ್ದರು.
ಮೂಲಗಳನ್ನು ಕಳೆದುಕೊಂಡರೆ ನಾವೂ ನಾಮಾವಶೇಷ
“ಒಂದು ಕಾಲದಲ್ಲಿ ಕಾಯಿ, ಕಸರು, ನಾರು, ಬೇರು ಹಾಗೂ ಕೆರೆ-ಕಾಲುವೆಗಳ ನೀರನ್ನು ಅವಲಂಬಿಸಿ ಜನ ಬದುಕುತ್ತಿದ್ದರು. ಇಂದು ಕೆರೆ-ಕುಂಟೆಗಳು ಒತ್ತುವರಿಯಾಗಿವೆ. ನೀರು ಪಾತಾಳಕ್ಕಿಳಿದಿದ್ದು, ಬೋರ್‌ವೆಲ್‌ಗಳ ಮೂಲಕ ನೀರು ಪಡೆಯುವ ಪರಿಸ್ಥಿತಿ ಬಂದಿದೆ.
ಅನ್ನ-ಆಹಾರ ವಿಷವಾಗುತ್ತಿದೆ, ನೀರು ಕಲುಷಿತವಾಗುತ್ತಿದೆ, ಗಾಳಿ ಮಲಿನವಾಗುತ್ತಿದೆ. ಇಂತಹ ದುರಿತಕಾಲದಲ್ಲಿ ಗಾನಯಾನ ನಡೆಯುತ್ತಿದೆ. ನಮ್ಮ ಪದಗಳು ಸತ್ಯವನ್ನು ಅನಾವರಣ ಗೊಳಿಸಬೇಕು. ಮತ್ತೆ ನಮ್ಮ ಬೇರುಗಳನ್ನು ಹುಡುಕುವ ಕೆಲಸವಾಗಬೇಕು” ಎಂದು ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ಶಿವಪ್ರಸಾದ್ ಅಕ್ಷರವನ್ನು ಜನರ ಬಳಿಗೆ ಕೊಂಡೊಯ್ದವರು’
ಶಿಕ್ಷಣ ಮತ್ತು ಜ್ಞಾನದ ಹಕ್ಕು ಎಲ್ಲರಿಗೂ ಸಮಾನವಾಗಿರದ ಕಾಲದ ಸಾಮಾಜಿಕ ಪರಿಣಾಮಗಳು ಇಂದಿಗೂ ಚರ್ಚೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಅಕ್ಷರವನ್ನು ಕೆಲವರ ಸ್ವತ್ತಾಗಿಸದೆ ಜನರ ಬಳಿಗೆ ಕೊಂಡೊಯ್ಯುವುದು ಸಾಮಾಜಿಕ ಜವಾಬ್ದಾರಿ. ಶಿವಪ್ರಸಾದ್ ತಮ್ಮದೇ ರೀತಿಯಲ್ಲಿ ಆ ಕೆಲಸ ಮಾಡಿದ್ದಾರೆ” ಎಂದು ರಾಜಪ್ಪ ದಳವಾಯಿ ಹೇಳಿದರು.
ಅಂಬೇಡ್ಕರ್ ಅವರನ್ನು ಸ್ಮರಿಸುವುದು ಪ್ರತಿಮೆಗೆ ಮಾಲಾರ್ಪಣೆ ಮಾಡುವುದಷ್ಟೇ ಅಲ್ಲ; ಸಮಾನತೆ, ಸ್ವಾತಂತ್ರ‍್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಿಕ ಮೌಲ್ಯಗಳನ್ನು ಬದುಕಿನಲ್ಲಿ ಉಳಿಸುವುದಾಗಿದೆ ಎಂದರು.
ಅಂತರರಾಷ್ಟ್ರೀಯ ಜಂಬೆ ಕಲಾವಿದ ಬಾಲು ಜಂಬೆ ಅವರು ಹಾಗೂ ಅವರ ತಂಡ ಜಂಬೆ ವಾದನ ಗಮನ ಸೆಳೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್,ನಿವೃತ್ತ ಸಹಾಯಕ ನಿರ್ದೇಶಕ ವೆಂಕಟಾಚಲಯ್ಯ, ದಲಿತ ಸಂಘರ್ಷ ಸಮಿತಿ, ಕನ್ನಡ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಿವಿಧ ಸಾಂಸ್ಕೃತಿಕ ತಂಡಗಳ ಪದಾಧಿಕಾರಿಗಳು, ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.