ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka Janapada Academy: ಗೊಲ್ಲಹಳ್ಳಿಗೆ ತವರ ಬಾಗೀನ: ಗಾನಯಾನದ ಮೂಲಕ ಹಾಡಿನ ಗೌರವ

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳಷ್ಟೇ ಅಲ್ಲದೆ ರಾಜ್ಯದ ಹಲವು ಭಾಗಗಳ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸಿ, ಅವರ ಬೆಳವಣಿಗೆಗೆ ಪ್ರೇರಣೆಯಾದ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಬಹುಮುಖ ಪ್ರತಿಭೆಯ ಸಾಂಸ್ಕೃತಿಕ ವ್ಯಕ್ತಿತ್ವ. ಗಡಿಗಳ ಮಿತಿಗೆ ಒಳಗಾಗದೆ ವಿಶಾಲವಾಗಿ ಚಿಂತಿಸುವ ಅವರು, ಸಾಹಿತ್ಯ, ಸಂಗೀತ, ಹೋರಾಟ ಮತ್ತು ಸಂಘಟನೆಯ ಮೂಲಕ ಜನರೊಂದಿಗೆ ನಿರಂತರವಾಗಿ ಬೆಸೆದುಕೊಂಡಿದ್ದಾರೆ

ಗೊಲ್ಲಹಳ್ಳಿಗೆ ತವರ ಬಾಗೀನ: ಗಾನಯಾನದ ಮೂಲಕ ಹಾಡಿನ ಗೌರವ

-

Profile
Ashok Nayak Sep 23, 2026 9:04 PM

ಚಿಕ್ಕಬಳ್ಳಾಪುರ: ನೆಲಮೂಲ ಸಂಸ್ಕೃತಿಯ ಗಾಯಕ, ಚಲನಚಿತ್ರ ಗೀತರಚನಕಾರ, ಸಾಹಿತಿ, ಸಂಘಟಕ ಹಾಗೂ ಹೋರಾಟಗಾರರಾಗಿ ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಕರ್ನಾಟಕ ಜಾನಪದ ಅಕಾಡೆಮಿ(Karnataka Janapada Academy) ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್(Gollahalli Shivaprasad) ಅವರಿಗೆ ‘ಗಾನಯಾನ’ದ ಮೂಲಕ ತವರ ಬಾಗೀನ ಅರ್ಪಿಸುತ್ತಿರುವುದು ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಾಹಿತಿ ಮುನಿರಾಜು ಎಂ. ಅರಿಕೆರೆ ಹೇಳಿದರು.

ನಗರದ ಕನ್ನಡ ಭವನದಲ್ಲಿ ಇಂಡಿಯನ್ ಫೋಕ್ ಬ್ಯಾಂಡ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಸೆ.24ರಂದು ನಡೆಯಲಿರುವ ‘ಗೊಲ್ಲಹಳ್ಳಿ ಗಾನಯಾನ’ ಕಾರ್ಯಕ್ರಮದ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಇದನ್ನೂ ಓದಿ: Janapada Academy Award: 30 ಕಲಾವಿದರು, ತಜ್ಞರು ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳಷ್ಟೇ ಅಲ್ಲದೆ ರಾಜ್ಯದ ಹಲವು ಭಾಗಗಳ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸಿ, ಅವರ ಬೆಳವಣಿಗೆಗೆ ಪ್ರೇರಣೆಯಾದ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಬಹುಮುಖ ಪ್ರತಿಭೆಯ ಸಾಂಸ್ಕೃತಿಕ ವ್ಯಕ್ತಿತ್ವ. ಗಡಿಗಳ ಮಿತಿಗೆ ಒಳಗಾಗದೆ ವಿಶಾಲವಾಗಿ ಚಿಂತಿಸುವ ಅವರು, ಸಾಹಿತ್ಯ, ಸಂಗೀತ, ಹೋರಾಟ ಮತ್ತು ಸಂಘಟನೆಯ ಮೂಲಕ ಜನರೊಂದಿಗೆ ನಿರಂತರವಾಗಿ ಬೆಸೆದುಕೊಂಡಿದ್ದಾರೆ. ಅವರ ಗರಡಿಯಲ್ಲಿ ಬೆಳೆದ ಅನೇಕ ಕಲಾವಿದರು ಇಂದು ದೇಶ–ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಿರುವುದು ಅವರ ಸಾಂಸ್ಕೃತಿಕ ಪಯಣದ ಹೆಗ್ಗುರುತು ಎಂದರು.

ಗೊಲ್ಲಹಳ್ಳಿ ಶಿವಪ್ರಸಾದ್ ಅವರ ಬದುಕು ಕೇವಲ ಸಾಹಿತಿ ಅಥವಾ ಗೀತರಚನಕಾರರ ಪರಿಚಯಕ್ಕೆ ಸೀಮಿತವಾಗಿಲ್ಲ. ನೆಲ, ಜಲ, ಕಾಡು, ಜನಜೀವನ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಹೊಂದಿರುವ ಅವರ ಚಿಂತನೆಗಳು ಬರಹ ಹಾಗೂ ಮಾತುಗಳಲ್ಲಿ ವ್ಯಕ್ತವಾಗುತ್ತವೆ. ಯೌವ್ವನದಲ್ಲೇ ಪ್ರಜಾಕವಿ ಗದ್ದರ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಅವರು, ತೆಲುಗು ಭಾಷೆಯಲ್ಲಿಯೂ ಹಲವು ಜನಪ್ರಿಯ ಗೀತೆಗಳಿಗೆ ಸಾಹಿತ್ಯ ರಚಿಸಿದ್ದಾರೆ. ವಿವಿಧ ಗೌರವಗಳು, ಪ್ರಶಸ್ತಿಗಳು ದೊರೆತಿದ್ದರೂ ಸರಳತೆ ಕಾಪಾಡಿಕೊಂಡು ಬಂದಿರುವುದು ಅವರ ವ್ಯಕ್ತಿತ್ವದ ವಿಶೇಷತೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಅವರು ನಿರ್ವಹಿಸಿದ ಜವಾಬ್ದಾರಿ ನೆಲಮೂಲ ಸಂಸ್ಕೃತಿಗೆ ಹೊಸ ಚೈತನ್ಯ ತುಂಬಿದೆ. ಹಳ್ಳಿಯ ಕಲಾವಿದನ ಹಾಡು, ರೈತನ ಹಬ್ಬದ ಸಂಭ್ರಮ ಹಾಗೂ ಜನಪದ ಕಲಾವಿದನ ಹೆಜ್ಜೆಯ ಲಯದಲ್ಲಿರುವ ಸಾಂಸ್ಕೃತಿಕ ಸಂಪತ್ತನ್ನು ಗುರುತಿಸುವ ಕೆಲಸಕ್ಕೆ ಅವರು ಒತ್ತು ನೀಡಿದ್ದಾರೆ. ಅವರ ಸಾಹಿತ್ಯದಲ್ಲಿ ಮಾನವೀಯತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಪ್ರತಿಧ್ವನಿಸುತ್ತವೆ ಎಂದು ಮುನಿರಾಜು ಎಂ.ಅರಿಕೆರೆ ಹೇಳಿದರು.

ಸೆ.24ರಂದು ಕನ್ನಡ ಭವನದಲ್ಲಿ ನಡೆಯುವ ಗಾನಯಾನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು, ಡಾ.ರಾಜಪ್ಪ ದಳವಾಯಿ, ಎನ್.ಮುನಿಸ್ವಾಮಿ, ಜಿಪಂ ಸಿಇಒ ವೈ.ನವೀನ್ ಭಟ್, ಎಸ್ಪಿ ಪದ್ಮಿನಿ ಸಾಹು, ಜಂಟಿ ನಿರ್ದೇಶಕ ಅಶೋಕ್ ಎನ್.ಛಲವಾದಿ, ಕಸಾಪ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ, ಉದ್ಯಮಿ ಗಿರೀಶ್ ಸಾಮ್ರಾಟ್, ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಬಿನ್ನತ್ತಳೆ ಸಹಿತ ತವರ ಬಾಗೀನ ಅರ್ಪಿಸಲಾಗುವುದು.

ಸಾಂಸ್ಕೃತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೋಗ್ಯವಂತ ಸಮಾಜ ಕಟ್ಟುವ ಆಶಯ ಹೊಂದಿರುವ ಸಾಹಿತ್ಯಾಸಕ್ತರು, ಕಲಾವಿದರು, ಹೋರಾಟಗಾರರು ಹಾಗೂ ಕನ್ನಡಾಭಿಮಾನಿಗಳು ಕಾರ್ಯಕ್ರಮ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೊಲ್ಲಹಳ್ಳಿ ಶಿವಪ್ರಸಾದ್ ಅವರೊಂದಿಗೆ ಗಾನಯಾನಕ್ಕೆ ಕಿವಿಯಾಗಬೇಕು ಎಂದು ಮುನಿರಾಜು ಎಂ.ಅರಿಕೆರೆ ಮನವಿ ಮಾಡಿದರು.