ಚಿಕ್ಕಬಳ್ಳಾಪುರ: ಸಂಸದ ಸುಧಾಕರ್(MP Sudhakar) ಅವರು ರಾಜ್ಯ ರಾಜಕಾರಣಕ್ಕೆ ಮರುಳಬೇಕು ಎಂದು ಚಿಕ್ಕಬಳ್ಳಾಪುರ ನಗರದ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದರು.
ನಗರಸಭಾ ಅಧ್ಯಕ್ಷ ಗಜೇಂದ್ರ ಮಾತನಾಡಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ಸಂಸದ ಡಾ.ಕೆ.ಸುಧಾಕರ್ ಅವರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ಜೊತೆಗೆ ಅಪಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು.
ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ತಂದಿರುವುದು ಅವರು ಮಾಡಿದ ಮಹತ್ವದ ಸಾಧನೆ ಗಳಲ್ಲಿ ಒಂದಾಗಿದೆ. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾರಣಾಂತರಗಳಿಂದ ಅವರು ಸೋಲು ಅನುಭವಿಸಿದ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎ.ಗಜೇಂದ್ರ ಆರೋಪಿಸಿದರು.
ಇದನ್ನೂ ಓದಿ: Chikkaballapur News: 70ರ ದಶಕದ ದಸಂಸ ಎಲ್ಲಾ ಹೋರಾಟಗಳ ಮಹಾಮನೆ, ಇತಿಹಾಸ ಮರುಕಳಿಸಬೇಕಿದೆ : ಬಿ.ವಿ. ಆನಂದ್ ಅಭಿಮತ
2028ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಯಲಹಂಕ ಶಾಸಕ ವಿಶ್ವನಾಥ್ ಅವರು ಡಾ.ಕೆ.ಸುಧಾಕರ್ ಅವರು ಸಂಸದರಾಗಿದ್ದಾರೆ.ಮುಂದಿನ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಯುವಕರಿಗೆ ಅವಕಾಶ ನೀಡಬೇಕು ಎಂದು ಹೇಳಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ವಿಶ್ವನಾಥ್ ಅಣ್ಣಾ ಅವರ ಮೇಲೆ ನಮಗೆ ಅಪಾರ ಗೌರವವಿದೆ. ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಡಾ.ಕೆ.ಸುಧಾಕರ್ ಅವರೇ ಸೂಕ್ತ ಅಭ್ಯರ್ಥಿ ಎಂಬುದು ನಮ್ಮ ನಿರ್ಧಾರವಾಗಿದೆ.
ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷವೇ ತೀರ್ಮಾನಿಸುತ್ತದೆ. ಆದರೆ ಈ ಕ್ಷೇತ್ರಕ್ಕೆ ಸಂಬಂಧಿಸಿ ಬೇರೆ ಅಭ್ಯರ್ಥಿಗಳ ಹೆಸರನ್ನು ಮುಂದಿಟ್ಟು ಗೊಂದಲ ಸೃಷ್ಟಿಸಬಾರದು ಎಂದು ಅವರು ಮನವಿ ಮಾಡಿದರು.
ಡಾ.ಕೆ.ಸುಧಾಕರ್ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರು ಇಂದಿಗೂ ಮಾತನಾಡು ತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅವರು ಅನಿವಾರ್ಯರಾಗಿದ್ದು,ಮುಂದಿನ ಚುನಾವಣೆಯಲ್ಲಿ ಪಕ್ಷವು ಅವರಿಗೆ ಅವಕಾಶ ಕಲ್ಪಿಸಲಿದೆ ಎಂಬ ಭರವಸೆ ನಮಗಿದೆ ಎಂದರು.
ಹಿರಿಯ ಶಾಸಕರು ಬಿಜೆಪಿ ಟಿಕೆಟ್ ವಿಚಾರದಲ್ಲಿ ಬೇರೆ ಯುವಕರಿಗೆ ಅವಕಾಶ ನೀಡಬೇಕು ಎಂಬ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಗಜೇಂದ್ರ ತಿಳಿಸಿದರು.
ಇನ್ನೂ ಡಾ.ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿ ಸಂಘಟನೆಯನ್ನು ಬಲಪಡಿಸಲು ಸಾಕಷ್ಟು ಶ್ರಮಿಸಿದ್ದಾರೆ. ಇವರಿಂದಾಗಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಇದು ಪಕ್ಷದ ವರಿಷ್ಠರಿಗೂ ಗೊತ್ತು. ನಾವು ನಮ್ಮ ಕ್ಷೇತ್ರದ ಬಗ್ಗೆ ಮಾತ್ರ ನಮ್ಮ ನಾಯಕರ ಬಗ್ಗೆ ಮಾತನಾಡುತ್ತೇವೆ ವಿನಃ ಬೇರೆ ಯಾರ ಬಗ್ಗೆಯೂ ಮಾತನಾಡುವುದಿಲ್ಲ ಎಂದರು.
ಅನು ಆನಂದ್ ಮಾತನಾಡಿ, ಸುದ್ದಿಗೋಷ್ಠಿಯ ಮೂಲಕ ನಾವು ಸಂಸದ ಸುಧಾಕರ್ ಅವರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆಯೇ ಹೊರತು, ಯಾರ ವಿರುದ್ಧವೂ ಮಾತನಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಡಾ.ಕೆ.ಸುಧಾಕರ್ ಅವರು ತಮ್ಮ ಅವಧಿಯಲ್ಲಿ ಸರ್ವಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದು, ಬಡವರಿಗೆ ಉಚಿತ ನಿವೇಶನ ಕಲ್ಪಿಸಲು ವಿಶೇಷ ಕಾಳಜಿ ವಹಿಸಿದ್ದರು. ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಕೃಷ್ಣ ನದಿ ನೀರು ತರಲು ಮುಂದಾಗಿದ್ದಾರೆ.ಆದ್ದರಿಂದ ಈ ಕ್ಷೇತ್ರಕ್ಕೆ ಅವರು ಅನಿವಾರ್ಯ ಎಂದು ಹೇಳಿದರು.
ಮೊಬೈಲ್ ಬಾಬು ಮಾತನಾಡಿ, 2023ರಲ್ಲಿ ಬಡವರಿಗೆ ವಿತರಿಸಲಾದ 22ಸಾವಿರ ನಿವೇಶನದ ಹಕ್ಕುಪತ್ರಗಳ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹಕ್ಕುಪತ್ರ ವಿತರಣೆ ಸಂಪೂರ್ಣವಾಗಿ ಸರಿಯಾಗಿ ನಡೆದಿದೆ .ಯಾವುದೇ ವ್ಯತ್ಯಾಸವಾಗಿಲ್ಲ.ಮುಂದಿನ ದಿನಗಳಲ್ಲಿ ಡಾ. ಕೆ. ಸುಧಾಕರ್ ಅವರು ಶಾಸಕರಾಗಿ ಆಯ್ಕೆಯಾಗುವುದು ಖಚಿತವಾಗಿದ್ದು ಸೂರು ಇಲ್ಲದವರಿಗೆ ಮನೆ ಕಲ್ಪಿಸುವ ಕೆಲಸ ಮುಂದುವರಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯರಾದ ಲೀಲಾವತಿ ಶ್ರೀನಿವಾಸ್, ಮೊಬೈಲ್ ಬಾಬು,
ಅರುಣ್, ಯತೀಶ್, ಮಂಜುನಾಥಚಾರಿ, ಮುಖಂಡರಾದ ಅನು ಆನಂದ್, ಮುನಿರಾಜು, ಪಾಪು, ರಾಮಣ್ಣ ಇದ್ದರು.