ಚಿಕ್ಕಬಳ್ಳಾಪುರ: ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹಾಗೂ ಶ್ರೀಮಂತ ಸಾಹಿತ್ಯ ಪರಂಪರೆ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಜನರ ಮೇಲಿದೆ. ಕನ್ನಡ ಭಾಷೆಯ ಬಳಕೆಯನ್ನು ದೈನಂದಿನ ಜೀವನದಲ್ಲಿ ಹೆಚ್ಚಿಸುವ ಮೂಲಕ ನಾಡು, ನುಡಿ, ನೆಲ, ಜಲದ ರಕ್ಷಣೆಗೆ ಯುವಕರು ಕನ್ನಡದ ಕಾವಲುಗಾರರಾಗಿ ನಿಲ್ಲಬೇಕು ಎಂದು ನಿವೃತ್ತ ಕನ್ನಡ ಉಪನ್ಯಾಸಕ ಜಿ.ವಿ. ಮೋಹನ್ ಕುಮಾರ್ ಕರೆ ನೀಡಿದರು.
ನಗರದ ಶಾಂತಿನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಏಕೀಕರಣ ಚಳವಳಿ ಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡಿಗರು ವಿಶಾಲ ಮನೋಭಾವ, ಉದಾರತೆ ಮತ್ತು ಹೃದಯ ಶ್ರೀಮಂತಿಕೆಗೆ ಹೆಸರಾದವರು. ಆದರೆ ಅನ್ಯಭಾಷಿಕರೊಂದಿಗೆ ವ್ಯವಹರಿಸುವಾಗ ಅವರ ಭಾಷೆಯಲ್ಲೇ ಮಾತನಾಡುವ ಪ್ರವೃತ್ತಿ ಹೆಚ್ಚಾಗಿದ್ದು, ಇದರಿಂದ ಕನ್ನಡದ ಬಳಕೆ ಮತ್ತು ಬೆಳವಣಿಗೆಗೆ ಹಿನ್ನಡೆಯಾಗುತ್ತಿದೆ. ಅನ್ಯಭಾಷೆ ಗಳನ್ನು ಕಲಿಯುವುದರ ಜತೆಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮತ್ತು ಸ್ವಾಭಿಮಾನ ಬೆಳೆಸಿ ಕೊಳ್ಳಬೇಕು. ಕನ್ನಡದ ವಿಚಾರದಲ್ಲಿ ತಮಿಳಿಗರಲ್ಲಿರುವ ಭಾಷಾಭಿಮಾನವನ್ನು ಕನ್ನಡಿಗರೂ ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸುಮಾರು ಆರು ದಶಕಗಳಿಂದ ಕನ್ನಡ ಭಾಷೆ, ಸಾಹಿತ್ಯ, ಪರಂಪರೆ ಮತ್ತು ಇತಿಹಾಸದ ಸಂರಕ್ಷಣೆಗಾಗಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ. ಚಕೋರ ಸಾಹಿತ್ಯ ವಿಚಾರ ವೇದಿಕೆಯ ಮೂಲಕ ಯುವಜನರಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ನಾಡಿನ ಇತಿಹಾಸದ ಅರಿವು ಮೂಡಿಸುವ ಜತೆಗೆ ವಿಚಾರ ಸಂಕಿರಣ, ಕಾವ್ಯ ಕಮ್ಮಟ ಮತ್ತು ಸಮಾವೇಶಗಳ ಮೂಲಕ ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಸಾಹಿತಿ ಹಾಗೂ ಜಿಲ್ಲಾ ಸಂಚಾಲಕ ಪಾತಮುತ್ತಕಹಳ್ಳಿ ಚಲಪತಿಗೌಡ ಪ್ರಾಸ್ತಾವಿಕವಾಗಿ ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಹಾಲಪ್ಪ ಅವರು, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಹೋರಾಟವನ್ನು ಪ್ರತಿಯೊಬ್ಬ ಕನ್ನಡಿಗರೂ ಸ್ಮರಿಸ ಬೇಕು. ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಬಳ್ಳಾರಿಯ ಪೈಲ್ವಾನ್ ರಂಜಾನ್ ಸಾಬ್ ಹಾಗೂ ಮೈಸೂರು ಚಳವಳಿಯಲ್ಲಿ ಗುಂಡೇಟಿಗೆ ಬಲಿಯಾದ ರಾಮಸ್ವಾಮಿ ಅವರ ಕೊಡುಗೆ ಯನ್ನು ಮರೆಯಬಾರದು ಎಂದರು.
ಆಟೋ ಚಾಲಕರು ಮತ್ತು ಮಾಲೀಕರು ಕಡಿಮೆ ಆದಾಯದ ನಡುವೆಯೂ ಪ್ರತಿವರ್ಷ ಅದ್ದೂರಿ ಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಭಾಷಾಭಿಮಾನ ಮೆರೆದಿದ್ದಾರೆ. ಅವರ ಕನ್ನಡ ಪ್ರೀತಿಯನ್ನು ವಿದ್ಯಾರ್ಥಿಗಳು ಮಾದರಿಯಾಗಿಸಿಕೊಳ್ಳಬೇಕು ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಮೊಬೈಲ್ ಬಾಬು ಹೇಳಿದರು.
ಮಿಮಿಕ್ರಿ ಕಲಾವಿದ ಮಳ್ಳೂರು ಪ್ರಭಾಕರ್ ವಿವಿಧ ಪ್ರಾಣಿ, ಪಕ್ಷಿ ಹಾಗೂ ವಾಹನಗಳ ಶಬ್ದಗಳನ್ನು ಅನುಕರಿಸಿ ವಿದ್ಯಾರ್ಥಿಗಳನ್ನು ರಂಜಿಸಿದರು. ಜನಪದ ಕಲಾವಿದ ಹಾಗೂ ಜಿಲ್ಲಾ ಸಂಚಾಲಕ ಈ ಧರೆ ಪ್ರಕಾಶ್ ಮತ್ತು ಹಾಲಪ್ಪ ಕನ್ನಡ ಗೀತೆಗಳನ್ನು ಹಾಡಿದರು. ರಸಪ್ರಶ್ನೆಗಳಲ್ಲಿ ಉತ್ತರಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಭಾರತಿ ಶ್ರೀನಿವಾಸ್, ಉಪನ್ಯಾಸಕರಾದ ಅರವಿಂದ್, ಮನು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.