Chikkaballapur News: ವಿದೇಶಗಳಿಗೂ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ವಿಸ್ತರಣೆ: ಸದ್ಗುರು ಮಧುಸೂದನ್ ಸಾಯಿ ಘೋಷಣೆ
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಭಾನುವಾರ ನಡೆದ ನಾಲ್ಕು ದಿನಗಳ ವಿಶ್ವ ಯುವ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಡಿಜಿಟಲ್ ಹಾಗೂ ಭೌತಿಕ ಎರಡೂ ರೂಪಗಳಲ್ಲಿ ದೊರೆಯಬೇಕು ಎಂಬುದು ನಮ್ಮ ಆಶಯವಾಗಿದೆ.
-
ಚಿಕ್ಕಬಳ್ಳಾಪುರ: ಮೌಲ್ಯಾಧಾರಿತ ಶಿಕ್ಷಣವನ್ನು ಜಗತ್ತಿನಾದ್ಯಂತ ಪಸರಿಸುವ ಮಹತ್ವಾಕಾಂಕ್ಷೆ ಯೊಂದಿಗೆ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವನ್ನು ವಿದೇಶಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ನೈಜೀರಿಯಾ, ಫಿಜಿ, ಅರ್ಜೆಂಟೀನಾ ಹಾಗೂ ಅಮೆರಿಕದಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್ಗಳನ್ನು ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೀಲಿಸ ಲಾಗುತ್ತಿದೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ್ ಸಾಯಿ ಘೋಷಿಸಿದರು.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಭಾನುವಾರ ನಡೆದ ನಾಲ್ಕು ದಿನಗಳ ವಿಶ್ವ ಯುವ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಡಿಜಿಟಲ್ ಹಾಗೂ ಭೌತಿಕ ಎರಡೂ ರೂಪಗಳಲ್ಲಿ ದೊರೆಯಬೇಕು ಎಂಬುದು ನಮ್ಮ ಆಶಯವಾಗಿದೆ. ಶಿಕ್ಷಣದ ವ್ಯಾಪ್ತಿಯನ್ನು ಭಾರತಕ್ಕೆ ಮಾತ್ರ ಸೀಮಿತಗೊಳಿಸದೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಲಾಗುವುದು ಎಂದರು.
ವಿಶ್ವವಿದ್ಯಾಲಯವನ್ನು ವಿದೇಶಗಳಲ್ಲಿ ವಿಸ್ತರಿಸಲು ಕಾನೂನಿನ ಕೆಲವು ಬದಲಾವಣೆಗಳು ಹಾಗೂ ಅಗತ್ಯ ತಿದ್ದುಪಡಿಗಳು ಬೇಕಾಗಿವೆ. ಈ ಸಂಬಂಧ ಸರ್ಕಾರದ ಗಮನ ಸೆಳೆದು ಅನುಮೋದನೆ ಪಡೆಯಬೇಕಿದೆ. ಮುಂಬರುವ ವರ್ಷ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಎಲ್ಲರ ಸಹಕಾರ ಮತ್ತು ಬೆಂಬಲದೊಂದಿಗೆ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಜಾನಪದ ಕಲೆ, ಸಂಸ್ಕೃತಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ: ಜಿಲ್ಲಾಧಿಕಾರಿ ಜಿ. ಪ್ರಭು
ಮುಂದಿನ ವರ್ಷದ ವಿಶ್ವ ಯುವ ಸಮಾವೇಶದಲ್ಲಿ ಸತ್ಯ, ಧರ್ಮ, ಶಾಂತಿ, ಪ್ರೇಮ ಮತ್ತು ಅಹಿಂಸೆ ಎಂಬ ಐದು ಸಾರ್ವತ್ರಿಕ ಮೌಲ್ಯಗಳ ಕುರಿತು ಚರ್ಚಿಸಲಾಗುವುದು. ಜಗತ್ತಿನ ಯಾವುದೇ ಭಾಗದ ಜನರು ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಈ ಮೌಲ್ಯಗಳು ಮಾನವ ಸಮಾಜದ ಸುಸ್ಥಿರತೆಗೆ ಅತ್ಯಗತ್ಯವಾಗಿವೆ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಮಾತನಾಡಿ, ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಮೂಲಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮಾಡುತ್ತಿರುವ ಪರಿವರ್ತನಾತ್ಮಕ ಕಾರ್ಯಗಳು ಜಾಗತಿಕ ಮಟ್ಟದಲ್ಲಿ ಮಾದರಿಯಾಗಿವೆ. ಇಂತಹ ಸೇವಾ ಕಾರ್ಯಗಳು ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಶ್ಲಾಘಿಸಿದರು.
ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಎನ್.ನರಸಿಂಹಮೂರ್ತಿ, ಒನ್ ವರ್ಲ್ಡ್ ಒನ್ ಫ್ಯಾಮಿಲಿ(One World, One Family) ಮಿಷನ್ ನಿರ್ದೇಶಕ ಸುನಿಲ್ ನಾಯ್ಡು ಹಾಗೂ ಮುಖ್ಯ ಸಹಯೋಗ ಅಧಿಕಾರಿ ಡಾ. ಭುವನಾ ಸಂತಾನಂ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಆಶಯ ಸಾರುವ 'ಬಿ ಗುಡ್, ಸೀ ಗುಡ್, ಡು ಗುಡ್' ಕೃತಿಯ ಪೋಲಿಷ್ ಮತ್ತು ಅರ್ಜೆಂಟೀನಾ ಭಾಷೆಗಳ ಆವೃತ್ತಿಗಳನ್ನು ಸದ್ಗುರು ಬಿಡುಗಡೆ ಮಾಡಿದರು.
ನಾಲ್ಕು ದಿನಗಳ ಸಮಾವೇಶದಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕ್ರೊಯೇಷಿಯಾ, ಜರ್ಮನಿ ಸೇರಿದಂತೆ 31 ದೇಶಗಳ 240 ಪ್ರತಿನಿಧಿಗಳು ಭಾಗವಹಿಸಿ ಜಾಗತಿಕ ಯುವ ಸಮುದಾಯದ ಪಾತ್ರ, ಮೌಲ್ಯಾಧಾರಿತ ಶಿಕ್ಷಣ ಹಾಗೂ ಮಾನವೀಯ ಸೇವೆಗಳ ಕುರಿತು ಚರ್ಚಿಸಿದರು.