ಚಿಕ್ಕಬಳ್ಳಾಪುರ: ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕೇ ಹೊರತು, ತಂತ್ರಜ್ಞಾನಕ್ಕೆ ಅತಿಯಾದ ಅವಲಂಬಿತರಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳಬಾರದು ಎಂದು ತುತ್ತೂರು ಲೋಕೇಶಪ್ಪ ಹೇಳಿದರು.
ನಗರದ ಗೋಲ್ಡನ್ ಗ್ರೀನ್ಸ್ ಕಾಲೇಜಿನಲ್ಲಿ ಶನಿವಾರ ನಡೆದ ‘ವಿದ್ಯಾರ್ಥಿಗಳು ಅಂದು–ಇಂದು’ ಸಂವಾದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಮಾನವೀಯ ಮೌಲ್ಯಗಳನ್ನು ಕಳೆದುಕೊಂಡ ತಂತ್ರಜ್ಞಾನದಿಂದ ಯಾವುದೇ ಸಮಾಜಕ್ಕೂ ಒಳಿತಾಗುವುದಿಲ್ಲ. ತಂತ್ರಜ್ಞಾನದ ಅತಿಯಾದ ಅವಲಂಬನೆ ಏಕಾಂಗಿತನವನ್ನು ಉಡುಗೊರೆಯಾಗಿ ನೀಡುತ್ತದೆ. ಆದ್ದರಿಂದ ವಿದ್ಯಾರ್ಥಿ ಯುವಜನತೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ, ಅದರಲ್ಲೂ ರೀಲ್ಸ್ಗಳ ಮೋಹದಿಂದ ಹೊರಬಂದು ಸೃಜನಶೀಲ ಚಟುವಟಿಕೆಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂವಹನ ಇರುವ ಕಡೆ ಪ್ರಶ್ನೆಗಳು ಹುಟ್ಟುತ್ತವೆ. ತಮ್ಮ ದೌರ್ಬಲ್ಯಗಳನ್ನು ಪಟ್ಟಿ ಮಾಡಿಕೊಂಡು ಅವುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಉತ್ತಮ ಗುಣನಡತೆಯನ್ನು ಬೆಳೆಸಿಕೊಳ್ಳಬಹುದು. ಯಾವುದೇ ಸಮಸ್ಯೆಗೂ ಈ ಜಗತ್ತಿನಲ್ಲಿ ಪರಿಹಾರವಿದೆ ಎಂಬ ನಂಬಿಕೆಯನ್ನು ವಿದ್ಯಾರ್ಥಿಗಳು ಹೊಂದಿರಬೇಕು. ಅಂತಹ ವರಿಂದ ಮಾತ್ರ ಆರೋಗ್ಯವಂತೆ ಸಮಾಜ ನಿರ್ಮಾಣ ಸಾಧ್ಯ ಎಂದರು.
ಇಂದಿನ ಯುವಜನತೆ ಒತ್ತಡದ ಬದುಕಿನಿಂದ ಹೊರಬರಲು ತಮ್ಮ ಹವ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಗುರಿ ಇಟ್ಟುಕೊಂಡು ಶಿಕ್ಷಣ ಪಡೆಯಬೇಕು. ಆಸೆಗಳಿಗೆ ತಕ್ಕಂತೆ ಪರಿಶ್ರಮ ವಿಲ್ಲದಿದ್ದರೆ ಸಾಧನೆ ಸಾಧ್ಯವಾಗುವುದಿಲ್ಲ. ನಿಮ್ಮೊಳಗಿನ ಧ್ವನಿಯೇ ನಿಮ್ಮ ದೊಡ್ಡ ಗುರುವಾಗಿದ್ದು, ಅದನ್ನು ನಂಬಿ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಇತ್ತೀಚೆಗೆ ಜಗತ್ತು ಯುದ್ದದ ಹಿಂದೆ ಬಿದ್ದಿದೆ ಯುದ್ಧ ಹಾಗೂ ಯುದ್ಧೋನ್ಮಾದದಿಂದ ಸೌಹಾರ್ದ ಸಂಬಂಧಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಉತ್ತಮ ಸಂಸ್ಕಾರ, ಮಾನವೀಯತೆ ಮತ್ತು ಸೃಜನ ಶೀಲತೆಯೇ ಉತ್ತಮ ಸಮಾಜ ನಿರ್ಮಾಣಕ್ಕೆ ಆಧಾರ. ಸೃಜನಶೀಲತೆ ಇಲ್ಲದ ಬದುಕು ಬರಡಾಗಲಿದೆ. ತಂತ್ರಜ್ಞಾನವನ್ನು ಬಳಸಿಕೊಳ್ಳಿ, ಆದರೆ ಅದರ ಅವಲಂಬನೆಯಿಂದ ನಿಮ್ಮತನವನ್ನು ಕಳೆದು ಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿದ್ಯಾರ್ಥಿಗಳು ತಮ್ಮ ಆರೋಗ್ಯ ಹಾಗೂ ನರಮಂಡಲದ ಮೇಲೂ ಕಾಳಜಿ ವಹಿಸಬೇಕು. ಕ್ಷಮಿಸ ಲಾಗದಷ್ಟು ಒತ್ತಡವನ್ನು ತಮ್ಮ ಮೇಲೆ ತಾವೇ ಹೇರಿಕೊಳ್ಳಬಾರದು. ತಮ್ಮಗಾಗಿ ಮಾಡಿಕೊಳ್ಳುವ ಪ್ರತಿಯೊಂದು ಉತ್ತಮ ಬದಲಾವಣೆಯೂ ಅಂತಿಮವಾಗಿ ಸಮಾಜದ ಒಳಿತಿಗೆ ಕಾರಣವಾಗುತ್ತದೆ ಎಂದು ಲೋಕೇಶಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಮುನಿಕೃಷ್ಣ, ಪ್ರಾಧ್ಯಾಪಕರಾದ ತೂಬಗೆರೆ ಮೋಹನ್, ಪದ್ಮಾಕರಪಾಟೀಲ್,ಮಂಜುನಾಥ್, ಸತೀಶ್, ಮಂಜುಳ, ಭವ್ಯ, ರಾಧಶ್ರೀ,ನರಸಿಂಹಮೂರ್ತಿ ಮತ್ತಿತರರು ಇದ್ದರು.