ಚಿಕ್ಕಬಳ್ಳಾಪುರ: ಒಂದು ಸಮುದಾಯದ ಪರಿಶ್ರಮ, ಸೇವಾ ಮನೋಭಾವ ಮತ್ತು ಸಂಘ ಟಿತ ಶಕ್ತಿಯ ಪ್ರತೀಕವಾಗಿ ನಿಂತಿರುವ ಈ ಸಂಸ್ಥೆಗಳು ಮುಂದಿನ ಪೀಳಿಗೆಗೆ ದಾರಿದೀಪ ವಾಗಲಿವೆ ಎಂದು ಸಂಸದ ಡಾ.ಕೆ.ಸುಧಾಕರ್(MP Dr. K. Sudhakar) ಅಭಿಪ್ರಾಯಪಟ್ಟರು.
ನಗರದ ಬಿಬಿ ರಸ್ತೆಯ ವಕ್ಕಲಿಗರ ಕಲ್ಯಾಣ ಮಂಟಪದ ಆವರಣದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಬುಧವಾರ ನಡೆದ “ಶ್ರೀ ಕೆಂಪೇಗೌಡ ವಾಣಿಜ್ಯ ಸಂಕೀರ್ಣ” ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ನನ್ನ ಪ್ರಕಾರ ಇದು ಕೇವಲ ವಾಣಿಜ್ಯ ಸಂಕೀರ್ಣವಲ್ಲ. ಇದು “ಒಕ್ಕಲುತನ”ದ ಸಂಕೇತ.
ಇದು ನಮ್ಮ ಸಮುದಾಯದ ಆತ್ಮವಿಶ್ವಾಸದ ಪ್ರತೀಕ. ಇದು ನಮ್ಮ ಬೇರುಗಳನ್ನು ಮರೆಯದೇ ಭವಿಷ್ಯದ ಕಡೆ ಸಾಗುವ ಸಂಕಲ್ಪವಾಗಿದೆ. ಒಕ್ಕಲಿಗರ ಕಲ್ಯಾಣ ಮಂಟಪ, ಕೆಂಪೇಗೌಡ ಕಾನೂನು ಮಹಾ ವಿದ್ಯಾಲಯ ಹಾಗೂ ಒಕ್ಕಲಿಗರ ವಿದ್ಯಾರ್ಥಿ ನಿಲಯ ಕೂಡ ಹೊಸದಾಗಿ ನಿರ್ಮಾಣ ವಾಗುತ್ತಿರುವುದು ಸಮಾಜದ ದೂರದೃಷ್ಟಿ ಮತ್ತು ಸಂಘಟಿತ ಶಕ್ತಿಗೆ ಸಾಕ್ಷಿಯಾಗಿದೆ. ಒಂದು ಸಮುದಾಯದ ಪರಿಶ್ರಮ, ಸೇವಾ ಮನೋಭಾವ ಮತ್ತು ಸಂಘಟಿತ ಶಕ್ತಿಯ ಪ್ರತೀಕವಾಗಿ ನಿಂತಿರುವ ಈ ಸಂಸ್ಥೆಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿವೆ ಎಂದರು.
ಇದನ್ನೂ ಓದಿ: MP Dr K Sudhakar: ಕರಕುಶಲಕರ್ಮಿಗಳು ಪಿ.ಎಂ.ವಿಶ್ವಕರ್ಮ ಯೋಜನೆಯ ಸದುಪಯೋಗ ಪಡೆಯಿರಿ : ಸಂಸದ ಡಾ.ಕೆ.ಸುಧಾಕರ್ ಕರೆ
“ಒಕ್ಕಲುತನ” ಅಂದರೆ ಅದು ಕೇವಲ ಜಾತಿ ಅಥವಾ ಸಮುದಾಯವಲ್ಲ. ಒಕ್ಕಲುತನ ಅನ್ನುವುದು ಒಂದು ಜವಾಬ್ದಾರಿ. ಒಂದು ಹೊಣೆಗಾರಿಕೆಯಾಗಿದೆ.ಒಂದು ಬದುಕಿನ ಮೌಲ್ಯಒಕ್ಕಲಿಗ ಸಮುದಾಯದ ಇತಿಹಾಸ ಎಂದರೆ ಅದು ಕೇವಲ ಒಂದು ಸಮುದಾಯದ ಇತಿಹಾಸವಲ್ಲ.ಅದು ಕನ್ನಡ ನಾಡಿನ ಇತಿಹಾಸ.ನಾಡು ಕಟ್ಟಿದ,
ನಾಗರಿಕತೆ ರೂಪಿಸಿದ,ಭಾಷೆ ಮತ್ತು ಭಾವನೆಗಳನ್ನು ಬೆಳೆಸಿದ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರಚೇತನವನ್ನು ಸಂರಕ್ಷಿಸಿದ ಶ್ರೇಷ್ಠ ಪರಂಪರೆಯ ಇತಿಹಾಸವಾಗಿದೆ. ನಾಡಪ್ರಭು ಶ್ರೀ ಕೆಂಪೇಗೌಡರು ಬೆಂಗಳೂರಿಗೆ ಅಡಿಪಾಯ ಹಾಕಿದರೆ, ಕೆಂಗಲ್ ಹನುಮಂತಯ್ಯನವರು ವಿಧಾನಸೌಧದ ಮೂಲಕ ಕನ್ನಡದ ಗಂಭೀರತೆಯನ್ನು ಕಟ್ಟಿದರು. ಎಸ್.ಎಂ. ಕೃಷ್ಣ ಅವರು ಬೆಂಗಳೂರನ್ನು ಜಗತ್ತಿನ ತಂತ್ರಜ್ಞಾನ ನಕ್ಷೆಯಲ್ಲಿ ಗುರುತಿಸಿದರು ಎಂದರು.
ಹೊಯ್ಸಳರ ದೇವಾಲಯಗಳ ಅದ್ಭುತ ಶಿಲ್ಪಕಲೆಗಳಿಂದ ಹಿಡಿದು, ಕರ್ನಾಟಕದ ಮಣ್ಣಿನ ಮೌನ ಶಕ್ತಿವರೆಗೂ, ಒಕ್ಕಲಿಗ ಸಮುದಾಯದ ಪರಂಪರೆ ಧೈರ್ಯ, ಸಂಸ್ಕೃತಿ ಮತ್ತು ಕೊಡುಗೆಗಳ ಅದ್ಭುತ ಸಂಗಮವಾಗಿದೆ.ಒಕ್ಕಲಿಗರು - ಎಲ್ಲ ಕ್ಷೇತ್ರಗಳಲ್ಲೂ ನಕ್ಷತ್ರ ಗಳಾಗಿದ್ದಾರೆ.
ಕೃಷಿಕರಿಂದ ಸ್ವಾತಂತ್ರ್ಯ ಹೋರಾಟಗಾರರವರೆಗೆ, ಉಳುಮೆಯ ಹೊಲದಿಂದ ಸಾಹಿತ್ಯದ ಲೋಕವರೆಗೆ,ಮಣ್ಣಿನಿಂದ ತಂತ್ರಜ್ಞಾನವರೆಗೆ, ದೇವಾಲಯಗಳಿಂದ ಆಧುನಿಕ ವಿಜ್ಞಾನ ವರೆಗೆ ಪ್ರತಿ ಕ್ಷೇತ್ರದಲ್ಲೂ ನಮ್ಮ ಸಮುದಾಯ ತನ್ನದೇ ಆದ ಗುರುತು ಮೂಡಿಸಿದೆ.
ನಾವು ಭೂಮಿಯನ್ನು ಪೋಷಿಸಿದ್ದೇವೆ. ಶಾಲೆಗಳನ್ನು ಕಟ್ಟಿದ್ದೇವೆ . ಆಸ್ಪತ್ರೆಗಳನ್ನ ನಿರ್ಮಿಸಿದ್ದೇವೆ ಚಳವಳಿಗಳನ್ನು ಮುನ್ನಡೆಸಿದ್ದೇವೆ. ಉದ್ಯಮಗಳನ್ನು ಬೆಳೆಸಿದ್ದೇವೆ. ತಲೆಮಾರುಗಳಿಗೆ ಪ್ರೇರಣೆಯಾಗಿದ್ದೇವೆ.ಒಕ್ಕಲಿಗರು ಎಂದರೆ ಕೇವಲ ಕೃಷಿಯಲ್ಲ. ಅದು ಕಾವ್ಯ ಮತ್ತು ವಿಜ್ಞಾನ . ವಿದ್ಯೆ ಮತ್ತು ಶ್ರಮ. ಕೃಷಿ ಮತ್ತು ಉದ್ಯಮ. ಪರಂಪರೆ ಮತ್ತು ಪ್ರಗತಿ. ಇವೆಲ್ಲವನ್ನೂ ಒಂದೇ ಸಮಯದಲ್ಲಿ ಹೊತ್ತು ಸಾಗುವ ಸಮುದಾಯ ನಮ್ಮದು. ಒಕ್ಕಲಿಗನ ಕೈಯಲ್ಲಿ ಹಣ್ಣು ಬೆಳೆಯುತ್ತದೆ. ಕಲ್ಪನೆ ಹೊಳೆಯುತ್ತದೆ.ತಂತ್ರಜ್ಞಾನ ರೂಪುಗೊಳ್ಳುತ್ತದೆ. ಧಾರ್ಮಿಕ ಶ್ರದ್ಧೆ ಹರಡುತ್ತದೆ. ರಾಜಕೀಯ ದಿಕ್ಕು ತಿರುಗುತ್ತದೆ ಎಂದರು.
ಒಕ್ಕಲಿಗರಿಗೆ ತಮ್ಮದೇ ಆದ ವಿಶಿಷ್ಟ ಗುಣಗಳಿವೆ:
ಮಾತಿನಲ್ಲಿ ಶುದ್ಧತೆ. ಮನಸ್ಸಿನಲ್ಲಿ ಸ್ಪಷ್ಟತೆ. ಶ್ರಮದ ಮೇಲೆ ಶ್ರದ್ದೆ. ದೇವರು ಮತ್ತು ಧರ್ಮದ ಮೇಲೆ ನಿಷ್ಠೆ. ಭಾಷೆಯ ಮೇಲೆ ಅಭಿಮಾನ. ಕೃಷಿಯಲ್ಲಿ ಹೆಮ್ಮೆ. ಉದ್ಯಮದಲ್ಲಿ ಉತ್ಸಾಹವಿದ್ದು,ಯುಗದ ಕವಿ, ರಾಷ್ಟ್ರಕವಿ ಕುವೆಂಪು ಅವರು ಸಾರಿದ “ವಿಶ್ವಮಾನವ” ಸಂದೇಶದ ನಿಜವಾದ ರಾಯಭಾರಿಗಳು ನಾವು. ಬೇರು ಮತ್ತು ಭವಿಷ್ಯನಮ್ಮ ಹಿರಿಯರು ನಮಗೆ ಆಸ್ತಿ ಮಾತ್ರ ಬಿಟ್ಟಿಲ್ಲ. ಒಂದು ಬದುಕಿನ ಮೌಲ್ಯವನ್ನು ಬಿಟ್ಟು ಹೋಗಿದ್ದಾರೆ. “ಕೆಲಸವೇ ಗೌರವ”,“ಮಣ್ಣೆ ತಾಯಿ”, “ಸೇವೆಯೇ ಧರ್ಮ” ಎಂಬ ಮೌಲ್ಯಗಳ ಮೇಲೆ ನಮ್ಮ ಸಮುದಾಯ ಬೆಳೆದಿದೆ.ಇಂದಿನ ಪೀಳಿಗೆಗೆ ನಾವು ಎರಡು ವಿಷಯಗಳನ್ನು ಕೊಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಒಂದು – ಬೇರು. ಮತ್ತೊಂದು – ಭವಿಷ್ಯ. ಬೇರು ಇಲ್ಲದ ಮರ ಉಳಿಯುವುದಿಲ್ಲ. ಭವಿಷ್ಯ ಇಲ್ಲದ ಸಮಾಜ ಬೆಳೆಯುವುದಿಲ್ಲ,ನಮ್ಮ ಮಕ್ಕಳು ದೊಡ್ಡ ಹುದ್ದೆಗಳಿಗೆ ಹೋಗಬೇಕು. ಐಎಎಸ್,ಐಪಿಎಸ್, ಡಾಕ್ಟರ್, ಇಂಜನೀಯರ್ ಮತ್ತು ಉದ್ಯಮಿಗಳಾಗಬೇಕು.ಆದರೆ ತಮ್ಮ ಊರು, ತಮ್ಮ ಭಾಷೆ, ತಮ್ಮ ಸಂಸ್ಕೃತಿ ಮರೆಯ ಬಾರದು. ಅವರು ಇಂಗ್ಲಿಷ್ ಮಾತನಾಡಬೇಕು.ಆದರೆ ಕನ್ನಡದ ಬಗ್ಗೆ ಹೆಮ್ಮೆ ಇರಬೇಕು. ಅವರು ತಂತ್ರಜ್ಞಾನದಲ್ಲಿ ಮುಂದಿರಬೇಕು.ಆದರೆ ತಾಯಿ ಮಣ್ಣಿನ ಬಗ್ಗೆ ಪ್ರೀತಿ ಕಳೆದು ಕೊಳ್ಳಬಾರದು. ಬೇರು ಮಣ್ಣಿನಲ್ಲಿ ಇರಲಿ.ದೃಷ್ಟಿ ವಿಶ್ವದ ಮೇಲೆ ಇರಲಿ ಎಂದು ತಿಳಿಸಿದರು.
ಯುವಕರಿಗೆ ಕರೆ: ಇಂದು ಯುವಕರಿಗೆ ನಾನು ವಿಶೇಷವಾಗಿ ಹೇಳಲು ಬಯಸುವುದು ಏನೆಂದರೆ, ಮೊಬೈಲ್‌ನಲ್ಲಿ ಸಮಯ ಕಳೆಯುವುದಕ್ಕಿಂತ ಸಮಾಜಕ್ಕಾಗಿ ಸಮಯ ಕೊಡಿ. ಕೇವಲ ಉದ್ಯೋಗ ಹುಡುಕುವವರಾಗಬೇಡಿ .ಉದ್ಯೋಗ ಕೊಡುವವರಾಗಿರಿ. ಉದ್ಯಮ ಶೀಲತೆ ನಮ್ಮ ಡಿಎನ್ಎ ಯಲ್ಲೇ ಇದೆ. ನಾವು ಮನಸ್ಸು ಮಾಡಿದರೆ ಪ್ರತಿ ಹಳ್ಳಿಯೂ ಒಂದು ಉದ್ಯಮ ಉತ್ತೇಜನ ಕೇಂದ್ರಗಳಾಗಬಹುದು.ಗ್ರಾಮೀಣ ಉದ್ಯಮಿಗಳನ್ನು ಬೆಳೆಸಬೇಕು. ಮಹಿಳೆಯರ ಉದ್ಯಮಗಳಿಗೆ ಬೆಂಬಲ ಕೊಡಬೇಕು.ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು. “ಓದಿಸಿ, ಬೆಳಗಿಸಿ” ಎಂಬ ಮನೋಭಾವ ನಮ್ಮದಾಗಬೇಕು. ಪ್ರತಿಯೊಬ್ಬ ಯಶಸ್ವಿ ಒಕ್ಕಲಿಗರೂ ಕನಿಷ್ಠ ಒಂದು ಬಡ ವಿದ್ಯಾರ್ಥಿಯ ಜವಾಬ್ದಾರಿ ತೆಗೆದುಕೊಳ್ಳಬೇಕು. ಒಂದು ಕುಟುಂಬವನ್ನು ಮೇಲಕ್ಕೆತ್ತಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸಚಿವ ಡಾ.ಡಂಸಿ.ಸುಧಾಕರ್, ವಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ, ಕಾರ್ಯದರ್ಶಿ ಚನ್ನಪ್ಪ ರೆಡ್ಡಿ ಮತ್ತಿತರರು ಇದ್ದರು.