MP Dr K Sudhakar: ಕರಕುಶಲಕರ್ಮಿಗಳು ಪಿ.ಎಂ.ವಿಶ್ವಕರ್ಮ ಯೋಜನೆಯ ಸದುಪಯೋಗ ಪಡೆಯಿರಿ : ಸಂಸದ ಡಾ.ಕೆ.ಸುಧಾಕರ್ ಕರೆ
ಇಂದಿನ ಅಗತ್ಯಕ್ಕೆ ತಕ್ಕಂತೆ ಹೇಗೆ ಉತ್ಪನ್ನಗಳನ್ನು ಉತ್ಪಾದಿಸಬಹುದು ಎಂಬುದನ್ನು ವಿಶ್ವಕರ್ಮ ಯೋಜನೆಯಲ್ಲಿ ಹೇಳಿಕೊಡಲಾಗುತ್ತದೆ. ಹಳೆ ಕಾಲದ ವಿನ್ಯಾಸದಂತೆಯೇ ಉತ್ಪನ್ನಗಳನ್ನು ತಯಾರಿಸಿ ದರೆ ಅದಕ್ಕೆ ಬೇಡಿಕೆ ಬರದೇ ಹೋಗಬಹುದು. ಉದಾಹರಣೆಗೆ, ಈಗಿನ ಮಹಿಳೆಯರ ಅಭಿರುಚಿಗೆ ತಕ್ಕಂತೆ ಸೀರೆಗಳನ್ನು ತಯಾರಿಸಿದರೆ ಅದಕ್ಕೆ ಉತ್ತಮ ಬೆಲೆ ಹಾಗೂ ಬೇಡಿಕೆ ಸಿಗುತ್ತದೆ.
ಕರಕುಶಲ ಕರ್ಮಿಗಳು ಈಗಿನ ಬೇಡಿಕೆಗೆ ತಕ್ಕಂತೆ ಎಂತಹ ಸೇವೆ ಹಾಗೂ ಉತ್ಪನ್ನಗಳನ್ನು ನೀಡಬಹುದು ಎಂಬುದನ್ನು ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆ ಕಲಿಸುತ್ತದೆ. ಆದ್ದರಿಂದ ಯುವಜನರು ಈ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು. -
ಜಿಲ್ಲೆಯಲ್ಲಿ ಈವರೆಗೂ ಒಟ್ಟು ಸುಮಾರು 12000 ಕರಕುಶಲಕರ್ಮಿಗಳಿಗೆ ಟೂಲ್‌ಕಿಟ್ ವಿತರಣೆ
ಚಿಕ್ಕಬಳ್ಳಾಪುರ: ಕರಕುಶಲ ಕರ್ಮಿಗಳು ಈಗಿನ ಬೇಡಿಕೆಗೆ ತಕ್ಕಂತೆ ಎಂತಹ ಸೇವೆ ಹಾಗೂ ಉತ್ಪನ್ನಗಳನ್ನು ನೀಡಬಹುದು ಎಂಬುದನ್ನು ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆ ಕಲಿಸುತ್ತದೆ. ಆದ್ದರಿಂದ ಯುವಜನರು ಈ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಸಂಸದ ಡಾ.ಕೆ.ಸುಧಾಕರ್(MP Dr K Sudhakar) ಹೇಳಿದರು.
ನಗರದ ಕನ್ನಡ ಭವನದಲ್ಲಿ ಅಂಚೆ ಇಲಾಖೆಯಿಂದ ಏರ್ಪಡಿಸಿದ್ದ ಪಿಎಂ ವಿಶ್ವಕರ್ಮ ಟೂಲ್‌ಕಿಟ್ ವಿತರಣೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ಅಗತ್ಯಕ್ಕೆ ತಕ್ಕಂತೆ ಹೇಗೆ ಉತ್ಪನ್ನಗಳನ್ನು ಉತ್ಪಾದಿಸಬಹುದು ಎಂಬುದನ್ನು ವಿಶ್ವಕರ್ಮ ಯೋಜನೆಯಲ್ಲಿ ಹೇಳಿಕೊಡಲಾಗುತ್ತದೆ. ಹಳೆ ಕಾಲದ ವಿನ್ಯಾಸದಂತೆಯೇ ಉತ್ಪನ್ನಗಳನ್ನು ತಯಾರಿಸಿದರೆ ಅದಕ್ಕೆ ಬೇಡಿಕೆ ಬರದೇ ಹೋಗಬಹುದು. ಉದಾಹರಣೆಗೆ, ಈಗಿನ ಮಹಿಳೆಯರ ಅಭಿರುಚಿಗೆ ತಕ್ಕಂತೆ ಸೀರೆಗಳನ್ನು ತಯಾರಿಸಿದರೆ ಅದಕ್ಕೆ ಉತ್ತಮ ಬೆಲೆ ಹಾಗೂ ಬೇಡಿಕೆ ಸಿಗುತ್ತದೆ. ಇಂತಹ ಯೋಜನೆಯನ್ನು ಬಳಸಿಕೊಳ್ಳಬೇಕು. ಯುವಜನರು ಉದ್ಯೋಗ ಅರಸದೆ ಉದ್ಯೋಗ ನೀಡುವವರಾಗಬೇಕು ಎಂದು ಕರೆ ನೀಡಿದರು.
ಕರಕುಶಲ ವೃತ್ತಿಯಲ್ಲಿ ಇರುವವರು ವಹಿವಾಟನ್ನು ಇನ್ನಷ್ಟು ಬೆಳೆಸಿಕೊಳ್ಳಲು ಹಾಗೂ ತರಬೇತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ವಿಶ್ವಕರ್ಮ ಯೋಜನೆ ಜಾರಿ ಮಾಡಿದೆ. ಇದರಡಿ ಆರಂಭಿಕ ಹಂತದಲ್ಲಿ 1 ಲಕ್ಷ ರೂ. ಹಾಗೂ ನಂತರ ಒಟ್ಟು 2 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಕರಕುಶಲ ವೃತ್ತಿ ಎಂದರೆ ಕೇವಲ ಉದ್ಯೋಗವಲ್ಲ, ಇದು ನಮ್ಮ ದೇಶದ ಸಂಸ್ಕೃತಿ, ಪರಂಪರೆ ಹಾಗೂ ಹೆಗ್ಗುರುತು. ಕಮ್ಮಾರ, ಬಡಗಿ, ಶಿಲ್ಪಿ, ಅಕ್ಕಸಾಲಿಗರು, ಚಮ್ಮಾರರು, ಮೇಸ್ತ್ರಿ, ಬುಟ್ಟಿ ತಯಾರಕರು, ಬೊಂಬೆ ತಯಾರಕರು ಹೀಗೆ ಅನೇಕ ಉದ್ಯೋಗಿಗಳು ನಮ್ಮ ಸಮಾಜದ ಬೆನ್ನುಲುಬು. ಆದರೆ ಈ ಸಮುದಾಯ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಅನೇಕರು ಅರಿತಿಲ್ಲ. ಇದನ್ನು ಅರಿತು ಅವರಿಗೆ ಗೌರವ ನೀಡಬೇಕು ಎಂದರು.
ಆರ್ಥಿಕ ಚೈತನ್ಯದ ಯೋಜನೆ
ಬೆಂಗಳೂರನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರು ಅಕ್ಕಿಪೇಟೆ, ಚಿಕ್ಕಪೇಟೆ, ಬಳೇಪೇಟೆ, ರಾಗಿಪೇಟೆ ಸೇರಿದಂತೆ ಸುಮಾರು 50 ಪೇಟೆಗಳನ್ನು ನಿರ್ಮಿಸಿದ್ದರು. ವಂಶಪಾರಂಪರ್ಯವಾಗಿ ಕರಕುಶಲ ವೃತ್ತಿ ಮಾಡುತ್ತಾ ಬಂದವರಿಗೆ ಅವರು ಸಂತೆಗಳನ್ನು ನಿರ್ಮಿಸಿದ್ದರು. ಗ್ರಾಮೀಣ ಸ್ವಾವಲಂಬನೆ ಬಗ್ಗೆ ಹೇಳಿದ್ದ ಮಹಾತ್ಮ ಗಾಂಧೀಜಿ, ಕರಕುಶಲಕರ್ಮಿಗಳಿಂದ ಗ್ರಾಮೀಣ ಆರ್ಥಿಕತೆ ಬೆಳೆಯುತ್ತದೆ ಎಂದು ನಂಬಿದ್ದರು. ಸ್ಥಳೀಯ ಉದ್ಯಮಗಳನ್ನು ಬೆಳೆಸುವುದು ಅವರ ಆದ್ಯತೆ ಯಾಗಿತ್ತು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಕರಕುಶಲಕರ್ಮಿಗಳಿಗೆ ವಿಶ್ವಕರ್ಮ ಯೋಜನೆ ಯಡಿ ಒತ್ತು ನೀಡಿದ್ದಾರೆ ಎಂದರು.
ಸಾಂಪ್ರದಾಯಿಕ ಕರಕುಶಲ ಕಲೆಯನ್ನು ಉಳಿಸಿ ಆರ್ಥಿಕ ಚೈತನ್ಯ ನೀಡುವುದು ವಿಶ್ವಕರ್ಮ ಯೋಜನೆಯ ಉದ್ದೇಶ. 18 ಬಗೆಯ ವೃತ್ತಿಗಳಿಗೆ ಇದರಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಕರಕುಶಲ ಕರ್ಮಿಗಳಿಗೆ ಕೇವಲ 5% ಬಡ್ಡಿದರದ ಸಾಲ ದೊರೆಯುತ್ತದೆ. ಉಳಿದ ಹಣವನ್ನು ಕೇಂದ್ರ ಸರ್ಕಾರ ಪಾವತಿಸುತ್ತದೆ. ಇದರಲ್ಲಿ ಸಂಪೂರ್ಣ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಈವರೆಗೆ 1.49 ಲಕ್ಷ ಜನರಿಗೆ 1190 ಕೋಟಿ ರೂ. ಸಾಲ ಸಿಕ್ಕಿದೆ ಎಂದು ಹೇಳಿದರು.
ಕರ್ಮಿಗಳು ಸಮಾಜದ ಉನ್ನತಿಗೆ ಕಾರಣೀಭೂತರಾಗುವ ಮೂಲಕ ಸಮಾಜದ ಬೆನ್ನೆಲುಬಾಗಿದ್ದಾರೆ. ಇದು ಕೇವಲ ವೃತ್ತಿಯಲ್ಲ ನಮ್ಮ ದೇಶದ ಪರಂಪರೆಯನ್ನು ಕಾಪಾಡುವ ಮಹೋನ್ನತ ಕೆಲಸ. ಇದನ್ನು ಮನಗಂಡೇ ಪ್ರಧಾನಿ ನರೇದ್ರ ಮೋದಿ ಅವರು 18ಕ್ಕೂ ಹೆಚ್ಚು ಸ್ಥಳೀಯ ಪಾರಂಪರಿಕ ಕುಶಕರ್ಮಿಗಳಿಗೆ ಸ್ವಾವಲಂಬಿ ಬದುಕು ಬದುಕಲು ಅವಕಾಶ ಕಲ್ಪಿಸಿದ್ದಾರೆ ಎಂದರು.
ವೋಕಲ್ ಫಾರ್ ಲೋಕಲ್ ಎಂಬಂತೆ, ಎಲ್ಲ ಕರಕುಶಲ ಕರ್ಮಿಗಳು ಹಳ್ಳಿಯಿಂದ ಜಾಗತಿಕ ಮಟ್ಟಕ್ಕೆ ಬೆಳೆಯಬೇಕು. ಚೀನಾದ ಬೊಂಬೆಗಳು ಈಗ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿವೆ. ಆದರೆ ನಮ್ಮಲ್ಲೇ ಚನ್ನಪಟ್ಟಣ ಹಾಗೂ ಕಿನ್ನಾಳ ಆಟಿಕೆಗಳ ಉದ್ಯಮವಿದೆ ಎಂಬುದನ್ನು ಮರೆತಿದ್ದೇವೆ. ಆದ್ದರಿಂದ ಇವುಗಳನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಬೇಕಿದೆ. ನಮ್ಮ ಹಳ್ಳಿಗಳಲ್ಲೇ ನಾವು ಇನ್ನೂ ಗುರುತಿಸದ ಅನೇಕ ಉತ್ಪನ್ನಗಳಿವೆ. ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಕೆಲಸ ಯಾವುದೇ ಇರಲಿ ಪ್ರತಿ ವೃತ್ತಿಗೆ ಗೌರವ ಬರಲಿದೆ. ಸ್ವಾಭಿಮಾನಿ ಜೀವನ ಸಾಗಿಸಲು ಪಿ.ಎಂ. ವಿಶ್ವ ಕರ್ಮ ಯೋಜನೆ ಸಹಕಾರಿಯಾಗಿದ್ದು ಇಂತಹ ಯೋಜನೆ ರೂಪಿಸಿ ಅದಕ್ಕೆ ವೋಕಲ್ ಫಾರ್ ಲೋಕಲ್ ಎಂದು ಹೆಸರಿಟ್ಟ ಪ್ರಧಾನಿ ನರೇಂದ್ರ ಮೋದಿಜಿಗೆ ಗೌರವ ತರಬೇಕು ಎಂದರು.
ಇಡೀ ಪ್ರಪಂಚದಲ್ಲಿ ಚೀನಾ ಗೊಂಬೆ ಜಗತ್ತಿನ ಮಾನ್ಯತೆ ಹೊಂದಿರುವ ಉದ್ಯಮವಾಗಿದ್ದು, ಇದ ರಂತೆ ಚನ್ನಪಟ್ಟಣ ಗೊಂಬೆಯನ್ನೂ ಕೂಡ ಹೀಗೆ ಮಾಡಬೇಕು.ಈ ಯೋಜನೆ ಲಾಭ ನಿಮ್ಮದಾಗಲಿ ಎಂದರು. ಕಾರ್ಯಕ್ರಮದ ನಂತರ ಸಂಸದರು ಆಯ್ದ ಫಲಾನುಭವಿಗಳೊಟ್ಟಿಗೆ ಸಂವಾದ ನಡೆಸಿ ಅವರ ಯಶೋಗಾಥೆಯನ್ನು ಕೇಳಿ ಸಂತಸಪಟ್ಟರಲ್ಲದೆ ಇದನ್ನು ಪ್ರಧಾನಿಗಳಿಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದರು.
ಎಂ.ಎಸ್.ಎಂ.ಇ ನಿರ್ದೇಶಕ ದೇವರಾಜ್ ಮಾತನಾಡಿ ಪಿಎಂ ವಿಶ್ವಕರ್ಮ ಯೋಜನೆಯ ಮುಖಾಂ ತರ ಎಕ್ಸಿಬಿಷನ್ ಮೂಲಕ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆಯಿದೆ. ಫಲಾನು ಭವಿಗಳಿಗೆ ವಿಮಾನದ ಮೂಲಕ ವಿದೇಶಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ವಿಶ್ವಕರ್ಮ ಯೋಜನೆ ಫಲಾನುಭವಿಗಳಾಗಿದ್ದಲ್ಲಿ ೨೫ ಸಾವಿರ ವರೆಗೆ ಹಣ ವಾಪಸಾತಿ ಮಾಡಲಾಗು ವುದು. ಇದಾಗಬೇಕಾದಲ್ಲಿ ನಿಮ್ಮ ಸಂಸ್ಥೆಯನ್ನು ಎಂ.ಎಸ್.ಎಂ.ಇ ಅಡಿ ನೋಂದಣಿ ಮಾಡಿಸುವುದು ಕಡ್ಡಾಯ.ಉದ್ದಿಮೆದಾರರು ಎಂದು ಗುರುತಿಸಿಕೊಂಡ ಕೂಡಲೆ 25 ಲಕ್ಷ ಬೆನಿಫಿಷರಿ ಸೌಕರ್ಯಗಳು ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸುಮಾರು 300 ಕರಕುಶಲಕರ್ಮಿಗಳಿಗೆ ಟೂಲ್‌ಕಿಟ್ ವಿತರಣೆ ಮಾಡಲಾಯಿತು. ಈವರೆಗೆ 11000 ಕ್ಕೂ ಹೆಚ್ಚು ಮಂದಿಗೆ ವಿತರಿಸಿದ್ದು, ಇವತ್ತಿನದೂ ಸೇರಿ ಒಟ್ಟು ಸುಮಾರು 12000 ಮಂದಿಗೆ ಟೂಲ್‌ಕಿಟ್ ವಿತರಿಸಲಾಗಿದೆ ಎಂದು ಸಂಸದರು ತಿಳಿಸಿದರು.