ಚಿಕ್ಕಬಳ್ಳಾಪುರ: ಯುವಕರೇ ರಾಷ್ಟ್ರವೊಂದರ ನಿಜವಾದ ಶಕ್ತಿ ಎಂದು ಸ್ವಾಮಿ ವಿವೇಕಾನಂದ( Swami Vivekananda) ರು ಬಹಳ ಹಿಂದೆಯೇ ಮನಗಂಡಿದ್ದರು. ಏಳಿ,ಎಚ್ಚರಗೊಳ್ಳಿ, ಗುರಿ ತಲುಪು ವವರೆಗೆ ನಿಲ್ಲಬೇಡಿ ಎಂಬ ಅವರ ಘೋಷಣೆ ಇಂದಿಗೂ ಯುವಜನತೆಗೆ ದಾರಿ ದೀಪವಾಗಿ ಜೀವನ ದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಪಿ.ರಾಮಲಿಂಗೇಗೌಡ ಹೇಳಿದರು.
ನಗರದ ಗೋಲ್ಡನ್ ಗ್ಲೀಮ್ಸ್ ಕಾಲೇಜಿನಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಗೋಲ್ಡನ್ ಗ್ಲೀಮ್ಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಸಪ್ತಾಹ 2025–26 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ಆರ್.ಬಿ.ತಿಮ್ಮಾಪುರ ಸೇರಿ ದಲಿತ ಸಚಿವರ ಮೇಲಿನ ಅಪಪ್ರಚಾರ ನಿಲ್ಲಿಸಿ: ಇಲ್ಲವೇ ಹೋರಾಟ ಎದುರಿಸಿ
ಸ್ವಾಮಿ ವಿವೇಕಾನಂದರ ಆದರ್ಶಗಳು ಧೈರ್ಯ, ಆತ್ಮವಿಶ್ವಾಸ,ಶಿಸ್ತು,ಸೇವಾಭಾವನೆ ಹಾಗೂ ರಾಷ್ಟ್ರಭಕ್ತಿಯನ್ನು ಯುವಜನರಲ್ಲಿ ಬೆಳೆಸುತ್ತವೆ ಅವರು ಶಿಕ್ಷಣವನ್ನು ಕೇವಲ ಉದ್ಯೋಗ ಪಡೆ ಯುವ ಸಾಧನವಾಗಿ ನೋಡಲಿಲ್ಲ ಮನುಷ್ಯನಲ್ಲಿನ ಶ್ರೇಷ್ಠತೆಯನ್ನು ಹೊರತರುವ ಪ್ರಕ್ರಿಯೆಯೇ ನಿಜವಾದ ಶಿಕ್ಷಣ ಎಂದು ನಂಬಿದ್ದರು.ಆದ್ದರಿಂದ ಯುವಜನರು ಆಧುನಿಕ ಜ್ಞಾನ, ತಾಂತ್ರಿಕ ಕೌಶಲ್ಯಗಳ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಇಂದಿನ ಸಮಾಜ ಪರಿಸರ ಹಾನಿ,ಸಾಮಾಜಿಕ ಅಸಮಾನತೆ ಹಾಗೂ ಡಿಜಿಟಲ್ ಅಪಾಯಗಳಂತಹ ಹಲವು ಸವಾಲುಗಳನ್ನು ಎದುರಿಸುತ್ತಿದೆ.
ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯುವಜನರ ಸಕ್ರಿಯ ಭಾಗವಹಿಸುವಿಕೆ ಅತ್ಯವಶ್ಯಕ. ಸಾಮಾಜಿಕ ಕಾಳಜಿಯನ್ನು ರೂಢಿಸಿಕೊಳ್ಳುವ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವಶಕ್ತಿ ಮುಂದಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತಿಕ್ ಪಾಷಾ ಮಾತನಾಡಿ,ಸ್ವಾಮಿ ವಿವೇಕಾನಂದರು ಯುವ ಪೀಳಿಗೆಗಳಿಗೆ ಆದರ್ಶವಾಗಿರುವ ಮಹಾನ್ ವ್ಯಕ್ತಿ. ಇಂದಿನ ಯುವ ಪೀಳಿಗೆ ಅವರ ಆದರ್ಶ ಮತ್ತು ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಆದರೆ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹೆಚ್ಚಿನ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ವಿದ್ಯಾರ್ಥಿ ದಶೆಯಲ್ಲೇ ಇದ್ದು,ಸಾಮಾಜಿಕ ಮಾಧ್ಯಮಗಳನ್ನು ವಿದ್ಯಾಭ್ಯಾಸಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಬಳಸಬೇಕು. ಸಮಯ ವ್ಯರ್ಥ ಮಾಡದೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜೀವನ ದಲ್ಲಿ ಸ್ಪಷ್ಟ ಗುರಿ ಇಟ್ಟು,ಅದನ್ನು ಸಾಧಿಸಲು ನಿರಂತರ ಶ್ರಮಿಸಬೇಕು. ಪೋಷಕರ ಶ್ರಮ ವ್ಯರ್ಥ ವಾಗದಂತೆ ಅವರ ಕನಸುಗಳನ್ನು ನನಸು ಮಾಡಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ವ್ಯಸನ ಹೆಚ್ಚಾಗುತ್ತಿರುವುದು ಆತಂಕ ಕಾರಿ ವಿಷಯವಾಗಿದೆ.ಇದರಿಂದ ದೂರ ಉಳಿದು,ಒಳ್ಳೆಯ ಜನರ ಸಂಗಡ ಒಡನಾಟ ಬೆಳೆಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು.ಮುಖ್ಯವಾಗಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್ ಮಾತನಾಡಿ, ಶಿಕ್ಷಣ ಕೇವಲ ಪ್ರಮಾಣಪತ್ರ ಪಡೆಯು ವುದಕ್ಕೆ ಸೀಮಿತವಾಗಬಾರದು ಅದು ಸಮಾಜದ ಏಳಿಗೆಗೆ ಉಪಯುಕ್ತವಾಗಬೇಕು. ಶಿಕ್ಷಕರ ಮಾರ್ಗ ದರ್ಶನದಲ್ಲಿ ನಡೆದು ಯಶಸ್ಸು ಸಾಧಿಸಬೇಕು ದೇಶಕ್ಕಾಗಿ ಹೋರಾಡಿ ಸಾಧನೆ ಮಾಡಿದ ಮಹಾತ್ಮ ಗಾಂಧಿ,ಸ್ವಾಮಿ ವಿವೇಕಾನಂದ,ಭಗತ್ ಸಿಂಗ್ ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಓದಿ,ಅವರ ದೂರದೃಷ್ಟಿ ಹಾಗೂ ಶ್ರಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರಾದ ಆದಿಶೇಷರಾವ್ ಮಾತನಾಡಿ, ಇಂದಿನ ಯುವಕರ ಜೀವನದಲ್ಲಿ ಶ್ರದ್ಧೆಯೊಂದಿಗೆ ತಾಳ್ಮೆ ಅತಿ ಮುಖ್ಯವಾದ ಗುಣಗಳಾಗಿವೆ. ಗುರಿ ಸಾಧನೆಗಾಗಿ ನಿರಂತರ ಪರಿಶ್ರಮ, ಶಿಸ್ತು ಹಾಗೂ ಸಹನಶೀಲತೆ ಅಗತ್ಯವಿದ್ದು, ಸಾಧನೆ ಯುವಕರ ಜೀವನದ ಪ್ರಮುಖ ಅಂಶವಾಗಿರಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸಿ.ಎಂ.ಮುನಿಕೃಷ್ಣ ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದ್ದು, ಭವ್ಯ ಹಾಗೂ ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಸಂಕಲ್ಪದೊಂದಿಗೆ ಮುನ್ನಡೆಯಬೇಕು ಸ್ವಾಮಿ ವಿವೇಕಾನಂದರ ನುಡಿ ಹಾಗೂ ನಡೆ ಯುವಜನತೆಗೆ ಸದಾ ಮಾರ್ಗದರ್ಶಕವಾಗಿದ್ದು,ಅವರ ಆದರ್ಶಗಳು ಯುವ ಪೀಳಿಗೆಗೆ ಪ್ರೇರಣೆಯಾಗಬೇಕು.ಸ್ವಾಮಿ ವಿವೇಕಾನಂದರು ಬೋಧಿಸಿದ ಆತ್ಮವಿಶ್ವಾಸ,ಧೈರ್ಯ ಮತ್ತು ಸೇವಾಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಯುವಕರು ತಮ್ಮ ಗುರಿಯತ್ತ ಮುನ್ನಡೆಯಬೇಕು ಎಂದು ಹೇಳಿದರು.
ಯುವ ಸಪ್ತಾಹ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ದೈಹಿಕ ಶಿಕ್ಷಕರಾದ ಮಾರುತಿ ವಹಿಸಿದ್ದರು.ಈ ಸಂದರ್ಭದಲ್ಲಿ ನ್ಯಾಯಾಧೀಶ ಪ್ರೇಮಕುಮಾರ್,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಬಾಯಿ, ಸಂಪನ್ಮೂಲ ವ್ಯಕ್ತಿ ಪ್ರಭಾಕರ್,ವಿವೇಕ ಜಾಗೃತಿ ಬಳಗದ ಅಧ್ಯಕ್ಷ ವೆಂಕಟೇಶ್,ಕಾಲೇಜಿನ ಪ್ರಾಧ್ಯಾಪಕ ವರ್ಗದವರಾದ,ಮಂಜುನಾಥ್,ಪದ್ಮಾಕರ ಪಾಟೀಲ್, ಅಶ್ವಿನಿ, ಶಿವಾನಂದ, ಶಿವರಾಜ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಮತ್ತು ಇತರರು ಉಪಸ್ಥಿತರಿದ್ದರು.