ಚಿಕ್ಕಬಳ್ಳಾಪುರ: ಇವತ್ತಿನ ಸಮಾಜ ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವಂತಹ ಸಮಾಜ ಅಗಿದೆ. ಪ್ರಾಮಾಣಿಕರಿಗೆ ಯಾವುದೇ ಬೆಲೆಯಿಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯ ಮೂರ್ತಿ ಸಂತೋಷ್ ಹೆಗ್ಗಡೆ(Lokayukta Retired Justice Santosh Heggade) ಅಭಿಪ್ರಾಯ ಪಟ್ಟರು.
ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿ ಜೈನ್ ಮಿಷನ್ ಆಸ್ಪತ್ರೆಯ ಮೂರು ಹೊಸ ಬ್ಲಾಕ್ ಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.
ನಾನು ಹಲವಾರು ಹುದ್ದೆಗಳಲ್ಲಿ ಕೆಲಸ ಮಾಡಿದದ್ದರೂ ಲೋಕಾಯುಕ್ತಕ್ಕೆ ಬರುವವರೆಗೂ ಕೂಪಮಂಡೂಕನಾಗಿದ್ದೆ. ಆವರೆಗೆ ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಹೆಚ್ಚು ಅರಿವು ಇರಲಿಲ್ಲ. ಲೋಕಾಯುಕ್ತಕ್ಕೆ ಬಂದ ನಂತರ ಬಹಳಷ್ಟು ಅನ್ಯಾಯವನ್ನು ಕಂಡೆ. ಯಾಕೆ ಈ ರೀತಿ ಆಗುತ್ತಿದೆ ಎಂದು ನೋವು ಪಟ್ಟದ್ದು ಇದೆ ಎಂದರು.
ಇದನ್ನೂ ಓದಿ: Chikkaballapur News: ಚಿಮುಲ್ ನಿರ್ದೇಶಕ ಹುಜುಗೂರು ರಾಮಣ್ಣ ವಿರುದ್ಧ, ಭರಣಿ ವೆಂಕಟೇಶ್ ಮೋಹನ್ ರೆಡ್ಡಿ ತೀವ್ರ ವಾಗ್ದಾಳಿ
ನನಗೆ ಅನಿಸಿದ್ದು, ಇದು ವ್ಯಕ್ತಿಗಳ ತಪ್ಪಲ್ಲ ಸಮಾಜದ ತಪ್ಪು ಅಂತ. ನಾನು ಚಿಕ್ಕವನಿದ್ದಾಗ ಅಂತಹ ಸಮಾಜದಲ್ಲಿದ್ದೆ. ತಪ್ಪು ಮಾಡಿದವರನ್ನು ಸಮಾಜ ಶಿಕ್ಷಿಸುತ್ತಿತ್ತು. ನಮ್ಮ ಗ್ರಾಮದಲ್ಲಿ ಯಾರಾದರೂ ತಪ್ಪು ಮಾಡಿ ಜೈಲಿಗೆ ಹೋದರೆ ಅವರ ಮನೆ ಹತ್ತಿರ ಹೋಗ ಬೇಡ ಅಂತ ಹೇಳು ತ್ತಿದ್ದರು. ಇದು ಆತನಿಗೆ ಅಲ್ಲ. ಆತನ ಕುಟುಂಬದ ಮೇಲೆ ಪರಿಣಾಮ ಬೀರುತ್ತಿತ್ತು ಎಂದರು.
ಆದರೆ ಸಮಾಜ ಈಗ ಬದಲಾವಣೆಯಾಗಿದೆ. ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವಂತಹ ಸಮಾಜದಲ್ಲಿದ್ದೇವೆ. ಪ್ರಾಮಾಣಿಕರಿಗೆ ಯಾವುದೇ ಬೆಲೆ ಇಲ್ಲ ಎಂದರು.
ಇನ್ನು ಪ್ರಾಮಾಣಿಕತೆ ಬಗ್ಗೆ ಮಾತನಾಡಿದರೆ ಬಿಡ್ರಿ. ಅವನು ತಿನ್ನಲ್ಲ. ಇನ್ನೊಬ್ಬರಿಗೂ ತಿನ್ನಕ್ಕೆ ಬಿಡಲ್ಲ ಎಂಬ ಮಾತುಗಳು ಸರ್ವೆ ಸಾಮಾನ್ಯವಾಗಿದೆ ಎಂದರು.
ಇದೇ ರೀತಿ ಸಮಾಜದಲ್ಲಿ ದುರಾಸೆ ಎಂಬ ರೋಗ ಜಾಸ್ತಿ ಆಗುತ್ತಾ ಹೋದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವುದು ಬಹಳ ಕಷ್ಟ ಎಂದರು.
ಸಮಾಜದಲ್ಲಿ ಎರಡು ಮೌಲ್ಯಗಳು ಅಗತ್ಯ ಇದೆ. ಒಂದು ತೃಪ್ತಿ. ಮತ್ತೊಂದು ಮಾನವೀಯತೆ. ತೃಪ್ತಿ ಇದ್ದರೆ ದುರಾಸೆ ಬರಲ್ಲ. ತೃಪ್ತಿ ಇದ್ದರೆ ಒಳ್ಳೆಯ ಮನಸ್ಸು ಇರುತ್ತದೆ.ಆ ತೃಪ್ತಿಯನ್ನು ನಾವು ಮದ್ಯದ ಅಂಗಡಿಯಲ್ಲಿ ಖರೀದಿ ಮಾಡಬೇಕಿಲ್ಲ. ತೃಪ್ತಿಯನ್ನು ನಾವು ನಾವಾಗಿಯೇ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪೋಷಕರು ಮಕ್ಕಳ ಜೊತೆ ಹೆಚ್ಚು ಸಂಪರ್ಕ ಇಟ್ಡುಕೊಂಡು ಒಳ್ಳೆಯ ಮೌಲ್ಯಗಳನ್ನು ಮತ್ತು ತೃಪ್ತಿ ಮತ್ತು ಮಾನವೀಯತೆಯನ್ನು ಕಲಿಸಿ ಕೊಡಬೇಕು. ಇಂತಹ ಸಮಾಜ ಕಟ್ಟಬೇಕಾದರೆ ಪೋಷಕರ ಜವಾಬ್ದಾರಿ ಜಾಸ್ತಿ ಇದೆ ಎಂದು ಹೇಳಿದರು.
ವಿದ್ಯೆ ಮತ್ತು ಶಿಕ್ಷಣ ಸರ್ಕಾರದ ಜವಾಬ್ದಾರಿ. ಆದರೆ ಇಂದಿನ ಅರ್ಥಪೂರ್ಣ ಕಾರ್ಯಕ್ರಮವನ್ನು ಕಂಡಾಗ ಜೈನ ಸಮುದಾಯದ ಸಂಸ್ಥೆಗಳು ಸರ್ಕಾರಕ್ಕಿಂತ ಹೆಚ್ಚು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ. ಇದಕ್ಕಾಗಿ ಅಭಿನಂದಿಸುತ್ತೇನೆ ಎಂದರು.
ಜೈನ ಸಮುದಾಯದವರು ಎಲ್ಲಿಯೇ ಹೋದರೂ ಸಮಾಜವೇ ತನ್ನದೆಂದು ತಿಳಿದುಕೊಂಡು ದಾನ ದಿಂದ ಸಮಾಜಸೇವೆಯಂತ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿ ದರು.