ಚಿಕ್ಕಬಳ್ಳಾಪುರ: ಸಾಹಿತ್ಯವನ್ನು ಜನರ ಬದುಕಿನೊಂದಿಗೆ ಬೆಸೆದು, ಹಾಡು-ಬರಹಗಳ ಮೂಲಕ ಸಾಮಾಜಿಕ ನ್ಯಾಯ, ಪರಿಸರ ಕಾಳಜಿ ಮತ್ತು ಜನಪರ ಹೋರಾಟಗಳಿಗೆ ದನಿಯಾಗಿರುವ ಹಿರಿಯ ಸಾಹಿತಿ, ಸಾಂಸ್ಕೃತಿಕ ಚಿಂತಕ ಗೊಲ್ಲಹಳ್ಳಿ ಶಿವಪ್ರಸಾದ್(Gollahalli Shivprasad) ಅವರಿಗೆ ಚಿಂತಾಮಣಿಯಲ್ಲಿ ನಡೆಯಲಿರುವ 11ನೇ ಜಿಲ್ಲಾ (Kannada Literary Conference)ದ ಸರ್ವಾಧ್ಯಕ್ಷ ಸ್ಥಾನ ನೀಡಬೇಕೆಂಬ ಒತ್ತಾಯ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಕೇಳಿ ಬರುತ್ತಿದೆ.
ನವೆಂಬರ್'ನಲ್ಲಿ ಚಿಂತಾಮಣಿಯ ನೂತನ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ, ಜನಪದ, ಕಲೆ ಮತ್ತು ಜನಪರ ಚಳವಳಿಗಳಲ್ಲಿ ತೊಡಗಿಸಿ ಕೊಂಡಿರುವ ಶಿವಪ್ರಸಾದ್ ಅವರ ಹೆಸರನ್ನು ಗಂಭೀರವಾಗಿ ಪರಿಗಣಿಸಬೇಕೆಂಬ ಮನವಿ ವ್ಯಕ್ತವಾಗಿದೆ.
ಕವಿಯಾಗಿ, ಗೀತರಚನಕಾರನಾಗಿ, ಹಾಡುಗಾರನಾಗಿ, ವಾಗ್ಮಿಯಾಗಿ ಮತ್ತು ಸಂಘಟಕರಾಗಿ ಗುರುತಿಸಿಕೊಂಡಿರುವ ಅವರು ನೆಲ, ಜಲ, ಭಾಷೆ, ಪರಿಸರ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ತಮ್ಮ ಸೃಜನಶೀಲ ಅಭಿವ್ಯಕ್ತಿಯ ಕೇಂದ್ರವಾಗಿಸಿಕೊಂಡಿದ್ದಾರೆ. ರಾಜ್ಯದಾದ್ಯಂತ ಸಾವಿರಾರು ಸಭೆ-ಸಮಾರಂಭಗಳಲ್ಲಿ ವಿಚಾರ ಮಂಡಿಸಿರುವ ಅವರು, ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಕೆಲಸವನ್ನೂ ಮಾಡಿದ್ದಾರೆ.
ಇದನ್ನೂ ಓದಿ: Mandya Sahithya Sammelana: ಅಕ್ಷರ ಜಾತ್ರೆಗೆ ಅಕ್ಕರೆಯ ತೆರೆ
ಹೋರಾಟಕ್ಕೆ ಹಾಡಿನ ಶಕ್ತಿ
ಶಿವಪ್ರಸಾದ್ ರಚಿಸಿರುವ ಸಾವಿರಾರು ಹಾಡುಗಳು ಜನಪರ ಹೋರಾಟಗಳಲ್ಲಿ ಮೊಳಗಿವೆ. ‘ಎಲ್ಲಾ ಮಾಯ, ನಾಳೆ ನಾವು ಮಾಯ’ ಹಾಡು ವ್ಯಾಪಕ ಜನಮನ್ನಣೆ ಗಳಿಸಿದ್ದು, ನಾಲ್ಕು ವಿಶ್ವವಿದ್ಯಾ ಲಯಗಳಲ್ಲಿ ಪಠ್ಯವಾಗಿ ಗುರುತಿಸಿಕೊಂಡಿದೆ. ಶಾಶ್ವತ ನೀರಾವರಿ ಹೋರಾಟದ ಆಶಯಗಳನ್ನು ಜನರಿಗೆ ತಲುಪಿಸಿದ ‘ನೀರಿಗಾಗಿ ನಿಮಿಷ ಮಾತನಾಡುವಿರಾ’ ಗೀತೆಯೂ ಗಮನ ಸೆಳೆದಿದೆ. ಸರ್ಕಾರಿ ಮತ್ತು ಖಾಸಗಿ ಧ್ವನಿಸುರುಳಿಗಳು ಹಾಗೂ ಚಲನಚಿತ್ರಗಳಿಗೂ ಅವರು ಸಾಹಿತ್ಯ, ಸಂಗೀತ ಮತ್ತು ಗೀತರಚನೆಯ ಕೊಡುಗೆ ನೀಡಿದ್ದಾರೆ.
ಕರ್ನಾಟಕ ಸರ್ಕಾರದ ಚಲನಚಿತ್ರ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಸಾಧನ ರತ್ನ, ಬೋಧಿವರ್ಧನ ಹಾಗೂ ಹಸಿರು ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಚಿಂತಾಮಣಿ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವುದು ಅವರ ಸಾಹಿತ್ಯಿಕ ಪಯಣದ ಮತ್ತೊಂದು ಪ್ರಮುಖ ಘಟ್ಟವಾಗಿದೆ.
ಜಿಲ್ಲೆಯ ಸಾಹಿತ್ಯ ಪರಂಪರೆಗೆ ಜನಪದ ಮತ್ತು ಜನಪರ ಚಿಂತನೆಯ ಆಯಾಮ ನೀಡಿರುವ ಶಿವಪ್ರಸಾದ್ ಅವರಂತಹ ಹಿರಿಯ ಪ್ರತಿಭೆಗೆ ಸರ್ವಾಧ್ಯಕ್ಷ ಗೌರವ ದೊರೆತರೆ, ಅದು ವ್ಯಕ್ತಿಯೊಬ್ಬರಿಗೆ ಸಲ್ಲಿಸುವ ಸನ್ಮಾನ ಮಾತ್ರವಾಗದೆ ನೆಲಮೂಲ ಸಂಸ್ಕೃತಿ ಮತ್ತು ಜನಜೀವನದ ಸಾಹಿತ್ಯಕ್ಕೆ ಸಲ್ಲಿಸುವ ಮಾನ್ಯತೆಯಾಗಲಿದೆ ಎಂಬುದು ಸಾಹಿತ್ಯಾಸಕ್ತರ ಅಭಿಪ್ರಾಯ.
63 ವರ್ಷದ ಹಿರಿಯ ಸಾಹಿತಿಗೆ ಈಗ ಗೌರವ ದೊರೆಯದಿದ್ದಲ್ಲಿ ಮತ್ತಿನ್ಯಾವಾಗ ಎನ್ನುವ ಪ್ರಶ್ನಿಸುವ ಮನಸ್ಸುಗಳಿಗೆ ಆಸ್ಪದ ನೀಡದಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಮ್ಮೇಳನದ ಆಯೋಜಕರು, ಶಾಸಕರು, ಜಿಲ್ಲಾಡಳಿತ, ತಾಲೂಕು ಆಡಳಿತ ಚಿಂತಿಸಲಿ, ಅವರ ಸಾಹಿತ್ಯಿಕ ಸಾಧನೆ, ಸಾಂಸ್ಕೃತಿಕ ಸೇವೆ ಮತ್ತು ಸಾಮಾಜಿಕ ಬದ್ಧತೆಯನ್ನು ಪರಿಗಣಿಸಿ ಸರ್ವಾಧ್ಯಕ್ಷ ಸ್ಥಾನಕ್ಕೆ ಅವರ ಹೆಸರನ್ನು ಗಂಭೀರವಾಗಿ ಪರಿಶೀಲಿಸಲಿ.
ಜನರ ಬದುಕಿಗೆ ದನಿಯಾದ ಸಾಹಿತಿಗೆ ಮತ್ತು ಅವರ ಸಾಹಿತ್ಯಕ್ಕೆ ಸಮ್ಮೇಳನದ ಸಾರಥ್ಯ ದೊರೆತಾಗ, ಕನ್ನಡದ ನೆಲಮೂಲ ಸಂಸ್ಕೃತಿಗೂ ಗೌರವ ದೊರೆತಂತಾಗುತ್ತದೆ ಎಂಬುದು ಬೆಳಕಿನಷ್ಟೇ ಸತ್ಯದ ಮಾತಾಗಿದೆ.ಇಂತಹ ಕೆಲಸವಾಗಲಿ ಎನ್ನುವುದು ಕನ್ನಡ ಮನಸ್ಸುಗಳ ಅಭಿಮತ.