Mandya Sahithya Sammelana: ಅಕ್ಷರ ಜಾತ್ರೆಗೆ ಅಕ್ಕರೆಯ ತೆರೆ
ಕರ್ನಾಟಕ, ಕನ್ನಡದ ಅಸ್ಮಿತೆ ಕುರಿತಾದ ವಿಚಾರ ವಿನಿಮಯ, ಸಮಕಾಲೀನ ತಲ್ಲಣಗಳು, ವಿವಿಧ ಚಳವಳಿ ಸೇರಿದಂತೆ ನಾನಾ ವಿಚಾರಗಳ ಚಿಂತನೆಗೆ ಹಚ್ಚಿದ ವಿಚಾರಗೋಷ್ಠಿಗಳು
Ashok Nayak
December 23, 2024
ಕೆ.ಜೆ.ಲೋಕೇಶ್ ಬಾಬು
ಕನ್ನಡಪರ ನಿರ್ಣಯಗಳೊಂದಿಗೆ ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ತೆರೆ
ಕೊನೆ ದಿನ ಜಾರುವ ನೆಲದಲ್ಲೂ ಜನಸಾಗರ, ಬಾಡೂಟದ ಗದ್ದಲ
ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ, ಮಂಡ್ಯ: ಸಕ್ಕರೆ ನಾಡಿನ ಅಕ್ಕರೆಯ ಅಕ್ಷರ ಜಾತ್ರೆ ಭಾನುವಾರದ ಗೋಧೂಳಿ ಲಗ್ನದಲ್ಲಿ ತೆರೆ ಕಂಡಿತು. ಮೂರು ದಿನಗಳ ಕಾಲ ಮಂಡ್ಯದ ನೆಲದಲ್ಲಿ ಯಶಸ್ವಿಯಾಗಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಲಕ್ಷಾಂತರ ಮಂದಿ ಕನ್ನಡ ಹೃದಯಗಳು ಸಾಕ್ಷೀಕರಿಸಿದವು.
ಹತ್ತಾರು ಗೋಷ್ಠಿಗಳು, ಚಿಂತನ ಮಂಥನ, ಸಾವಿರಾರು ಲೇಖಕರ ಪುಸ್ತಕ ಹೊಸ ಚಿಂತನೆಗೆ ಒರೆಗಲ್ಲಾದವು. ಬಗೆ ಬಗೆಯ ಭಕ್ಷ್ಯಭೋಜನಗಳು ಹಸಿದ ಹೊಟ್ಟೆಗಳನ್ನು ತಣಿಸಿದರೆ ಇಳಿ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹೃನ್ಮನ ತಣಿಸಿದವು. ದೇಸೀ ಸೊಗಡಿನ ಪರಿಸರದಲ್ಲಿ ಹತ್ತು ಹಲವು ಬಗೆಯ ಮಜಲುಗಳಿಗೆ ತೆರೆದುಕೊಂಡ ಸಮ್ಮೇಳನ ಈ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಾಯಿತು.
ಕರ್ನಾಟಕ, ಕನ್ನಡದ ಅಸ್ಮಿತೆ ಕುರಿತಾದ ವಿಚಾರ ವಿನಿಮಯ, ಸಮಕಾಲೀನ ತಲ್ಲಣಗಳು, ವಿವಿಧ ಚಳವಳಿಸೇರಿದಂತೆ ನಾನಾ ವಿಚಾರಗಳ ಚಿಂತನೆಗೆ ಹಚ್ಚಿದ ವಿಚಾರಗೋಷ್ಠಿಗಳು, ಸಣ್ಣಪಟ್ಟ ಸದ್ದು ಗದ್ದಲದೊಂದಿಗೆ ಮೂರು ದಿನಗಳ ಅಂತರದಲ್ಲಿ ದಾಖಲಾದವು. ಸಣ್ಣ ಪುಟ್ಟ ಗೊಂದಲ ಮತ್ತು ಗದ್ದಲಗಳ ನಡುವೆಯೂ ನಿರೀಕ್ಷೆಗೂ ಮೀರಿ ಸಮ್ಮೇಳನ ಯಶಸ್ಸು ಕಂಡಿತು.
ಸಮಾರೋಪ ಸಮಾರಂಭ ದಲ್ಲಿ ಕನ್ನಡ ಭಾಷಾ ಅಭಿವೃದ್ದಿ ಅಧಿನಿಯಮ- ೨೦೨೨ರ ಸಮಗ್ರ ಜಾರಿಗೆ ಒತ್ತಾಯ ದೊಂದಿಗೆ ಕನ್ನಡ ಶಾಲೆಗಳ ಅಭಿವೃದ್ಧಿ, ಸರೋಜಿನಿ ಮಹಿಷಿ ವರದಿ ಅನುಷ್ಠಾನ, ವಿಶ್ವ ಕನ್ನಡ ಸಮ್ಮೇಳನದ ದಿನಾಂಕ ನಿಗದಿ ಮತ್ತು ರಾಷ್ಟ್ರಕವಿ ಪ್ರಶಸ್ತಿ ಪ್ರಕಟಿಸಬೇಕೆಂಬ ಹಕ್ಕೊತ್ತಾಯಗಳೊಂದಿಗೆ ಅಕ್ಷರ ತೇರಿಗೆ ತೆರೆ ಎಳೆಯಲಾಯಿತು.
ಸಮ್ಮೇಳನದ ಉದ್ಘಾಟನೆಗೂ ಮುನ್ನ ಬಾಡೂಟದ ಗದ್ದಲ ಜೋರಾಗಿತ್ತು. ಆದರೆ, ಮೊದಲ ಎರಡು ದಿನಗಳ ಹೋಳಿಗೆ ಊಟದಲ್ಲಿ ಮರೆತ ಬಾಡೂಟ ಕೊನೆಯ ದಿನ ಮತ್ತೆ ಸದ್ದು ಮಾಡಿತು. ಮಾಜಿ ಸಚಿವ ಸಿ.ಟಿ.ರವಿ ಅವರ ಹೇಳಿಕೆ ಖಂಡಿಸಿಯೂ ವೇದಿಕೆ ಹೊರಗೆ ಪ್ರತಿಭಟನೆ ನಡೆಯಿತು, ಪ್ರತಿ ಬಾರಿಯಂತೆ ಸರಕಾರಿ ನೌಕರರ ಓಓಡಿ ಗದ್ದಲ ಈ ಸಲವೂ ಇತ್ತು. ಆದರೆ ಸಮ್ಮೇಳನದ ಯಶಸ್ಸಿಗೆ ಯಾವುದೇ ರೀತಿಯ ಅಡ್ಡಿಯಾಗಲಿಲ್ಲ.
ಕನ್ನಡನಾಡು, ನುಡಿ, ಜಲ ಸೇರಿದಂತೆ ಶಿಕ್ಷಣ, ಮಾಧ್ಯಮ, ರೈತ, ಮಹಿಳೆ, ದಲಿತ, ಕನ್ನಡ ಪುಸ್ತಕೋದ್ಯಮ, ಸಾಮಾಜಿಕ ನ್ಯಾಯ, ನೀರಾವರಿ ವಿಷಯಗಳ ಬಗ್ಗೆ ನಡೆದ ಗೋಷ್ಠಿಗಳು ಸಾರ್ವಜನಿಕರನ್ನು ಚಿಂತನೆಯ ಓರೆಗೆ ಹಚ್ಚಿದವು. ಕವಿಗೋಷ್ಠಿ ಗಳು, ಬಹಿರಂಗ ಅಧಿವೇಶನ, ಸಂವಾದ ಕಾರ್ಯಕ್ರಮಗಳು ಸಮಾನತೆ ಬಗ್ಗೆ ಬೆಳಕು ಚೆಲ್ಲಿದರೆ, ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸದಲ್ಲಿ ಮೊದಲ ಮಂಡ್ಯ ಸಮ್ಮೇಳನದಲ್ಲಿ ಬಾರಿಗೆ ದೃಷ್ಟ ಚೇತನರ ವಿಶೇಷ ಕವಿಗೋಷ್ಠಿ ಎಲ್ಲರ ಗಮನ ಸೆಳೆಯಿತು. ದೃಷ್ಟಿ ಚೇತನ ಕವಿಗಳು ತಮ್ಮ ಅನುಭವ ಕಷ್ಟ, ಸುಖಗಳನ್ನು ಕವಿತೆ ಮೂಲಕ ವಾಚಿಸುವ ಮೂಲಕ ಎಲ್ಲರ ಮನಗೆದ್ದರು.
ಗಣ್ಯರಿಗೆ ಅಭಿನಂದನೆ: ಸಮಾರೋಪ ಸಮಾರಂಭದಲ್ಲಿ ಕನ್ನಡ ನಾಡು, ನುಡಿಗೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ೧೩೦ಕ್ಕೂ ಹೆಚ್ಚು ಗಣ್ಯರನ್ನು ಅಭಿನಂದಿಸಲಾಯಿತು.
ಅಂತಿಮ ದಿನವಾದ ಭಾನುವಾರ ಪ್ರಧಾನ ವೇದಿಕೆಯಲ್ಲಿ ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ, ಸ್ತ್ರೀ ಎಂದರೆ ಅಷ್ಟೇ ಸಾಕೆ?, ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ: ಸಾಧ್ಯತೆ ಮತ್ತು ಸವಾಲುಗಳು ಗೋಷ್ಠಿ ಮತ್ತು ಸಮ್ಮೇಳನಾ ಧ್ಯಕ್ಷ ಡಾ.ಗೊ.ಚ. ಚನ್ನಬಸಪ್ಪ ಅವರೊಂದಿಗೆ ಬಹಿರಂಗ ಸಂವಾದ ನೆರವೇರಿತು. ಸಮ್ಮೇಳನದ ಮೂರು ದಿನವೂ ಪ್ರಧಾನ ವೇದಿಕೆ, ಸಮಾನಾಂತರ -೧ , ಸಮಾನಾಂತರ -೨ ವೇದಿಕೆಗಳಲ್ಲಿ ಆಯೋಜಿಸಿದ್ದ ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಹಿತ್ಯಾಸಕ್ತರು ಸಾಕ್ಷೀಕರಿಸಿದರು.
ಸಮಾರೋಪ ಸಮಾರಂಭದ ವೇಳೆ ವೇದಿಕೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದಸ್ವಾಮೀಜಿ, ಸಿದ್ದಗಂಗಾ ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ, ಸಮ್ಮೇಳನದ ಅಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪ,ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಲೋಕಪಾಲ್ ಸದಸ್ಯ ನಾರಾಯಣಸ್ವಾಮಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಗೌರಿ ಗದ್ದೆ ಆಶ್ರಮದ ಶ್ರೀ ವಿನಯ್ ಗುರೂಜಿ, ಜಿ ಉಸ್ತುವಾರಿ ಸಚಿವ ಚೆಲುವ ರಾಯಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಷಿ, ಸಾಹಿತಿಗಳಾದ ಪ್ರೊ.ದೊಡ್ಡರಂಗೇಗೌಡ ಡಾ.ಸಿಪಿಕೆ, ಶಾಸಕರಾದ ಉದಯ, ನರೇಂದ್ರ ಸ್ವಾಮಿ, ದಿನೇಶ್ ಗೂಳಿಗೌಡ, ವಿವೇಕಾನಂದ, ಮಧು ಮಾದೇಗೌಡ, ಪುಟ್ಟರಾಜು, ಜಿಲ್ಲಾಧಿಕಾರಿ ಕುಮಾರ್, ಐಜಿಪಿ ಡಾ.ಬೋರಲಿಂಗಯ್ಯ, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಕೆ.ಟಿ. ಶ್ರೀಕಂಠೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: #mandyaBreaking