Maha Kumbh Mela: ಮಹಾ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನ ಮಾಡಿದ ಶೃಂಗೇರಿ ಜಗದ್ಗುರು
ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬುಧವಾರ ಪ್ರಯಾಗ್‌ರಾಜ್‌ನಲ್ಲಿ ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಪವಿತ್ರ ಸ್ನಾನಗೈದರು. ಅವರ ಜತೆಗೆ ತ್ರಿವೇಣಿ ಸಂಗಮದಲ್ಲಿ ದ್ವಾರಕಾ, ಬದರಿ ಮಠಗಳ ಸ್ವಾಮೀಜಿಗಳೂ ಪುಣ್ಯ ಸ್ನಾನ ಮಾಡಿದರು. ಪ್ರಯಾಗ್‌ರಾಜ್‌ನ ಗಂಗಾ-ಯಮುನಾ-ಸರಸ್ವತಿ (ಗುಪ್ತಗಾಮಿನಿ)ನದಿಗಳ ತ್ರಿವೇಣಿ ಸಂಗಮಕ್ಕೆ ಮೌನಿ ಅಮಾವಾಸ್ಯೆಯಂದು ಭಕ್ತ ಜನ ಪ್ರವಾಹವೇ ಹರಿದು ಬಂದಿತ್ತು. ದೇಶ-ವಿದೇಶಗಳ ಸುಮಾರು 6 ಕೋಟಿ ಜನರು ಅಮೃತ ಸ್ನಾನ ಕೈಗೊಂಡಿದ್ದಾರೆ.
![ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನ ಮಾಡಿದ ಶೃಂಗೇರಿ ಜಗದ್ಗುರು](https://cdn-vishwavani-prod.hindverse.com/media/original_images/Sringeri_shree.jpg)
ಕುಂಭಮೇಳದಲ್ಲಿ ಶೃಂಗೇರಿ ಜಗದ್ಗುರುಗಳಿಂದ ಪವಿತ್ರ ಸ್ನಾನ
![Profile](https://vishwavani.news/static/img/user.png)
ಚಿಕ್ಕಮಗಳೂರು: ಉತ್ತರ ಪ್ರದೇಶದ ಪ್ರಯಾಗ್‌ರಾಜ್ (Prayagraj)ನಲ್ಲಿ ಮಹಾ ಕುಂಭಮೇಳ (Maha Kumbh Mela) ನಡೆಯುತ್ತಿದ್ದು, ಕೋಟ್ಯಂತರ ಭಕ್ತರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಅದರಂತೆ ಬುಧವಾರ (ಜ. 29) ನಡೆದ ಮೌನಿ ಅವಾಮಾಸ್ಯೆ (Mauni Amavasya) ಹಿನ್ನೆಲೆಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಪವಿತ್ರ ಸ್ನಾನಗೈದರು.
ಅವರ ಜತೆಗೆ ತ್ರಿವೇಣಿ ಸಂಗಮದಲ್ಲಿ ದ್ವಾರಕಾ, ಬದರಿ ಮಠಗಳ ಸ್ವಾಮೀಜಿಗಳೂ ಪುಣ್ಯ ಸ್ನಾನ ಮಾಡಿದರು.
ದಾಖಲೆ ಸಂಖ್ಯೆಯಲ್ಲಿ ಭಕ್ತರ ಆಗಮನ
ಪ್ರಯಾಗ್‌ರಾಜ್‌ನ ಗಂಗಾ-ಯಮುನಾ-ಸರಸ್ವತಿ (ಗುಪ್ತಗಾಮಿನಿ)ನದಿಗಳ ತ್ರಿವೇಣಿ ಸಂಗಮಕ್ಕೆ ಮೌನಿ ಅಮಾವಾಸ್ಯೆಯಂದು ಭಕ್ತ ಜನ ಪ್ರವಾಹವೇ ಹರಿದು ಬಂದಿತ್ತು. ದೇಶ-ವಿದೇಶಗಳ ಸುಮಾರು 6 ಕೋಟಿ ಜನರು ಅಮೃತ ಸ್ನಾನ ಕೈಗೊಂಡಿದ್ದಾರೆ. ಜ. 28ರವರೆಗೆ (16 ದಿನಗಳಲ್ಲಿ) ಪುಣ್ಯ ಸ್ನಾನ ಮಾಡಿದವರ ಸಂಖ್ಯೆ 14 ಕೋಟಿ ದಾಟಿದೆ.
ಜ. 13ರಂದು ಮಹಾ ಕುಂಭಮೇಳ ಆರಂಭವಾಗಿದ್ದು, ಇದುವರೆಗೆ ಒಟ್ಟು 14.76 ಕೋಟಿ ಭಕ್ತರು ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜ. 28ರ ಸಂಜೆ 6ರಿಂದ ಜ. 29ರ ಸಂಜೆ 6ರವರೆಗೂ ಮೌನಿ ಅವಾಮಾಸ್ಯೆ ಇತ್ತು. ಈ ಹಿನ್ನೆಲೆಯಲ್ಲಿ 2ನೇ ಅಮೃತ ಸ್ನಾನ ನಡೆದಿದೆ.
ಕಾಲ್ತುಳಿತ
ಜ. 29ರಂದು ಅಮೃತ ಸ್ನಾನದ ಹಿನ್ನೆಲೆಯಲ್ಲಿ ಜನ ಸಾಗರ ಪ್ರವಹಿಸಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ ಕರ್ನಾಟಕದ ನಾಲ್ವರು ಸೇರಿ ಸುಮಾರು 30 ಮಂದಿ ಮೃತಪಟ್ಟಿದ್ದರು. ಜತೆಗೆ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮುಂಜಾನೆ 3 ಗಂಟೆಯ ಸುಮಾರಿಗೆ ಪವಿತ್ರ ಸ್ನಾನ ಮಾಡಲು ಯಾತ್ರಾರ್ಥಿಗಳು ಒಮ್ಮೆಲೆ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು.
ಈ ಸುದ್ದಿಯನ್ನೂ ಓದಿ: Mahakumbh 2025: ಕುಂಭಮೇಳದಲ್ಲಿ VIP ಪಾಸ್ ರದ್ದು, ವಾಹನಗಳಿಗೆ ನಿರ್ಬಂಧ; ಕಾಲ್ತುಳಿತದ ಬೆನ್ನಲ್ಲೇ ರೂಲ್ ಚೇಂಜ್!
ಅಮೃತ ಸ್ನಾನಕ್ಕೆ ಮುಂಜಾನೆ 3 ಗಂಟೆಗೆ ಸಮಯ ನಿಗದಿಯಾಗಿತ್ತು. ಹೀಗಾಗಿ ಮುಂಜಾನೆಯೇ ಸ್ನಾನ ಮಾಡಬೇಕೆಂದು ಸಂಗಮದ ಬಳಿ ಹಲವರು ಮಲಗಿದ್ದರು. ಆದರೆ ಇದ್ದಕ್ಕಿದ್ದಂತೆ 157ನೇ ಪಿಲ್ಲರ್ ಬಳಿ ಬಂದ ಜನರ ಗುಂಪು ಬ್ಯಾರಿಕೇಡ್ ತಳ್ಳಿ ಸಂಗಮದತ್ತ ನುಗ್ಗಿದ್ದರಿಂದ ದುರಂತ ನಡೆಯಿತು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತಂದು ಪವಿತ್ರ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.