Elephant Attack: ಕಾಡಾನೆ ದಾಳಿಗೆ ಮತ್ತೊಂದು ಜೀವ ಬಲಿ, ರೊಚ್ಚಿಗೆದ್ದ ಜನರಿಂದ ಪ್ರತಿಭಟನೆ, ಲಾಠಿಚಾರ್ಜ್
ಮಹಿಳೆ ಸಾವಿನಿಂದ ಕೆರಳಿದ ಜನರು ಕಡಬಗೆರೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ರಸ್ತೆಗೆ ಇಳಿದಿದ್ದಾರೆ. ರಸ್ತೆಯಲ್ಲೇ ಶವವಿಟ್ಟು ಆಕ್ರೋಶ ಹೊರಹಾಕಿದರು. ಮೃತರ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಕೊಡಬೇಕು ಎಂದು ರಸ್ತೆಯಲ್ಲೇ ಶಾಮಿಯಾನ ಹಾಕಿಕೊಂಡು ಹೋರಾಟ ನಡೆಸಿದರು. ಇದರಿಂದ ಎರಡು ಕಿಲೋ ಮೀಟರ್‌ವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಸಾಗ್ತಿದ್ದ ಸವಾರರು ಪರದಾಡಿದರು.
ಕಾಡಾನೆ ದಾಳಿಗೆ ರೊಚ್ಚಿಗೆದ್ದ ಜನತೆ -
ಚಿಕ್ಕಮಗಳೂರು, ಫೆ. 22: ಕಾಫಿನಾಡಿನಲ್ಲಿ (chikkamagaluru) ಕಾಡಾನೆ (Elephant attack) ದಾಳಿಗೆ ಮತ್ತೊಂದು ಬಲಿಯಾಗಿದೆ. ಕೇವಲ 7 ದಿನಗಳ ಅಂತರದಲ್ಲಿ ಒಂದೇ ಸ್ಥಳದಲ್ಲಿ ಇಬ್ಬರನ್ನ ಕಾಡಾನೆ ಬಲಿ (death) ಪಡೆದಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಆನೆ ಹಾವಳಿಗೆ ಶಾಶ್ವತ ಪರಿಹಾರ ಬೇಕೆಂದು ಆಗ್ರಹಿಸಿ ಸಾವಿರಾರು ಜನರು ರಾಜ್ಯ ಹೆದ್ದಾರಿ ಬಂದ್ ಮಾಡಿ ರಸ್ತೆಯಲ್ಲಿ ಮೃತ ದೇಹವಿಟ್ಟು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಜನರು ಮತ್ತು ಪೊಲೀಸರ ಮಧ್ಯೆ ತಳ್ಳಾಟ ನೂಕಾಟ ಉಂಟಾಗಿದೆ. ಹೀಗಾಗಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಲಾಠಿಚಾರ್ಜ್ (Lathi charge) ಕೂಡ ನಡೆದಿದೆ. ಇನ್ನು ಮಾಜಿ ಶಾಸಕ ಜೀವರಾಜ್, ಜೆಡಿಎಸ್ ವಕ್ತಾರ ಸುಧಾಕರ್ ಶೆಟ್ಟಿ ಸೇರಿದಂತೆ 25ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ವಾರದ ಹಿಂದಷ್ಟೇ ಕಾಡಾನೆ ದಾಳಿಗೆ ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ ಬಲಿ ಆಗಿದ್ದ. ಅಂದು ಆಕ್ರೋಶ ಹೊರಹಾಕ್ತಿದ್ದಂತೆ ದಾಳಿ ಮಾಡ್ತಿರೋ ಆನೆಯನ್ನ ಹಿಡಿಯೋದಾಗಿ ಅರಣ್ಯ ಇಲಾಖೆ ಭರವಸೆ ನೀಡಿತ್ತು. ಹೀಗಿರುವಾಗಲೇ ನಿನ್ನೆ ಮತ್ತೊಬ್ಬ ಕಾರ್ಮಿಕ ಮಹಿಳೆ ಕಾಡಾನೆ ದಾಳಿಗೆ ಬಲಿ ಆಗಿದ್ದಾರೆ.ವಿಜಯನಗರ ಜಿಲ್ಲೆಯ ಹೊಸಪೇಟೆಯ ಬೋರಮ್ಮ ಎಂಬ ಮಹಿಳೆ ದುಡಿಯಲು ಚಿಕ್ಕಮಗಳೂರಿಗೆ ಬಂದಿದ್ದು, ತಾಲೂಕಿನ ಪುರ ಗ್ರಾಮದ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಅಲ್ಲೇ ಜೀವ ತೊರೆದಿದ್ದಾರೆ.
ರಸ್ತೆಯಲ್ಲೇ ಶವವಿಟ್ಟು ಆಕ್ರೋಶ
ಮಹಿಳೆ ಸಾವಿನಿಂದ ಕೆರಳಿದ ಜನರು ಕಡಬಗೆರೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ರಸ್ತೆಗೆ ಇಳಿದಿದ್ದಾರೆ. ರಸ್ತೆಯಲ್ಲೇ ಶವವಿಟ್ಟು ಆಕ್ರೋಶ ಹೊರಹಾಕಿದರು. ಮೃತರ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಕೊಡಬೇಕು ಎಂದು ರಸ್ತೆಯಲ್ಲೇ ಶಾಮಿಯಾನ ಹಾಕಿಕೊಂಡು ಹೋರಾಟ ನಡೆಸಿದರು. ಇದರಿಂದ ಎರಡು ಕಿಲೋ ಮೀಟರ್‌ವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಸಾಗ್ತಿದ್ದ ಸವಾರರು ಪರದಾಡಿದರು.
ಖಾಕಿ ಲಾಠಿ ಲಘು ಪ್ರಹಾರ, ಬಂಧನ
ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಹೋರಾಟ ಮಾಡಿದರೂ ಯಾರೊಬ್ಬರು ಸ್ಥಳಕ್ಕೆ ಬಂರಲಿಲ್ಲ. ಮಧ್ಯಾಹ್ನ ಸ್ಥಳಕ್ಕೆ ಬಂದ ಶಾಸಕ ಟಿಡಿ ರಾಜೇಗೌಡ ಹಾಗೂ ಕೊಪ್ಪ ಡಿಎಫ್‌ಒಗೂ ಪ್ರತಿಭಟನಾಕಾರರು ತರಾಟೆ ತೆಗೆದುಕೊಂಡರು. ಬಳಿಕ ಎಸ್‌ಪಿ, ಜಿಲ್ಲಾಧಿಕಾರಿಗಳು ಸ್ಪಾಟ್‌ಗೆ ಬಂದು ಮನವೊಲಿಸುವ ಪ್ರಯತ್ನ ಮಾಡಿದರು. ರಸ್ತೆ ಮಧ್ಯದಲ್ಲಿದ್ದ ಮಹಿಳೆ ಮೃತದೇಹವನ್ನು ಆ್ಯಂಬುಲೆನ್ಸ್‌ನಲ್ಲಿಟ್ಟು ಆಸ್ಪತ್ರೆಗೆ ರವಾನಿಸಲು ಮುಂದಾದರು. ಈ ವೇಳೆ ಪ್ರತಿಭಟನಾಕಾರರು ಶವ ತೆಗೆಯದಂತೆ ಆ್ಯಂಬುಲೆನ್ಸ್‌ಗೆ ಅಡ್ಡ ಕುಳಿತರು. ಪೊಲೀಸರು ಹಾಗೂ ಹೋರಾಟಗಾರರ ನಡುವೆ ನೂಕಾಟ-ತಳ್ಳಾಟ ಆಗ್ತಿದ್ದಂತೆ ಲಘು ಲಾಠಿಪ್ರಹಾರವೇ ನಡೆಯಿತು. ಈ ವೇಳೆ ಮಾಜಿ ಶಾಸಕ ಜೀವರಾಜ್, ಜೆಡಿಎಸ್ ವಕ್ತಾರ ಸುಧಾಕರ್ ಶೆಟ್ಟಿ ಸೇರಿದಂತೆ 25ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಹಾಸನದಲ್ಲಿ ಮಹಿಳೆಯನ್ನು ಬೆನ್ನಟ್ಟಿ ತುಳಿದು ಕೊಂದ ಕಾಡಾನೆ
ಲಾಠಿಚಾರ್ಜ್ ವೇಳೆ ಕೊಪ್ಪ ಠಾಣೆಯ ಲೇಡಿ ಕಾನ್ಸ್ಟೇಬಲ್ ರೇಖಾಗೆ ಕಿವಿಗೆ ಗಾಯವಾಗಿದ್ದು, ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಲೇಡಿ ಕಾನ್ಸ್ಟೇಬಲ್ ರೇಖಾ ಕಿವಿಗೆ ಕಲ್ಲು ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಡಿಸಿ ನಾಗರಾಜ್ ಬರುವಂತೆ ಪಟ್ಟು ಹಿಡಿದು ಕುಳಿತಿದ್ದ ನೂರಾರು ಹೋರಾಟಗಾರರಲ್ಲಿ ಅವರು ಬರುತ್ತಿದ್ದಂತೆ ಆಕ್ರೋಶ ಹೆಚ್ಚಾಯಿತು. ಮನವೊಲಿಸುವ ಪ್ರಯತ್ನ ಮಾಡಿದರೂ ಹೋರಾಟಗಾರರು ಬಗ್ಗದೆ ಜಿಲ್ಲಾಡಳಿತದ ನಡೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆಯಿಂದ ಹೋರಾಟ ಮಾಡಿದರೂ ನಿಮಗೆ ಮಾಹಿತಿ ಸಿಕ್ಕಿಲ್ಲವಾ ಎಂದು ಪ್ರಶ್ನಿಸಿದ್ದು, ಪ್ರತಿಭಟನಾಕಾರರ ಮನವೊಲಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಯಿತು.
ಜಿಲ್ಲಾಧಿಕಾರಿ ನಾಗರಾಜ್ ಹೇಳಿದ್ದಿಷ್ಟು
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿ ನಾಗರಾಜ್, ದೊಡ್ಡ ಮಟ್ಟದಲ್ಲಿ ಲಾಠಿಚಾರ್ಜ್ ಮಾಡಿಲ್ಲ. ಪೊಲೀಸ್ ಸಿಬ್ಬಂದಿ ಗುಂಪು ಚದುರಿಸುವ ಕೆಲಸ ಮಾಡಿದ್ದಾರೆ. ಪ್ರಚೋದನೆ ಮಾಡುತ್ತಿದ್ದವರನ್ನು ಕರೆದುಕೊಂಡು ಹೋಗಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಅವಕಾಶ ನೀಡಿದ್ದೆವು. ಸರ್ಕಾರ ಕಾಡಾನೆ ದಾಳಿ ಸಂಬಂಧ ಸಂಕಷ್ಟು ಕ್ರಮ ಕೈಗೊಂಡಿದೆ ಎಂದರು. ಪ್ರಮುಖ ರಸ್ತೆ ಬಂದ್ ಆಗಿತ್ತು. ಹೀಗಾಗಿ ಜನರಿಗೆ ತೊಂದರೆಯಾಗಿತ್ತು. ರಸ್ತೆ ಕ್ಲಿಯರ್ ಮಾಡುವ ನಿಟ್ಟಿನಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
Elephant Attack: ಶಿವಮೊಗ್ಗದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ, ಚಾಮರಾಜನಗರದಲ್ಲಿ ಮಹಿಳೆಯ ಹೊತ್ತೊಯ್ದ ಹುಲಿ
ಇಂದು ಬಂದ್ಗೆ ಕರೆ
ಇನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿರುದ್ಧ ಬಿಜೆಪಿ ಸೇರಿದಂತೆ ಮಲೆನಾಡು ನಾಗರಿಕ ರಕ್ಷಣಾ ವೇದಿಕೆ, ರೈತ ಸಂಘಟನೆಗಳ ಒಕ್ಕೂಟದಿಂದ ನಾಳೆ ಶೃಂಗೇರಿ ವಿಧಾನಸಭಾ ಕ್ಷೇತ್ರ ಬಂದ್ಗೆ ಕರೆ ನೀಡಲಾಗಿದೆ.