ಚಿತ್ರದುರ್ಗ, ಡಿ. 25: ಜಿಲ್ಲೆಯ ಹಿರಿಯೂರು ಸಮೀಪ ನಡೆದ ಕಂಟೈನರ್ ಲಾರಿ-ಸೀಬರ್ಡ್ ಸ್ಲೀಪರ್ ಬಸ್ ಅಪಘಾತದ ವೇಳೆ ಮತ್ತೊಂದು ಬಸ್‌ನಲ್ಲಿದ್ದ 43 ಶಾಲಾ ಮಕ್ಕಳು ಹಾಗೂ ಮೂವರು ಶಿಕ್ಷಕರು ಪವಾಡ ರೀತಿಯಲ್ಲಿ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಅಪಘಾತಕ್ಕೀಡಾದ ಸೀಬರ್ಡ್ ಬಸ್ ಹಿಂದೆಯೇ ಶಾಲಾ ಬಸ್ ಇತ್ತು. ಕಂಟೇನರ್ ಸೀಬರ್ಡ್ ಬಸ್‌ಗೆ ಡಿಕ್ಕಿ ಹೊಡೆದಾಗ, ಅದು ಶಾಲಾ ಬಸ್ ಮುಂಭಾಗಕ್ಕೆ ಬಡಿದಿದೆ. ಈ ವೇಳೆ ಚಾಲಕ ಕಂದಕಕ್ಕೆ ಇಳಿಸಿ ಎಡಕ್ಕಿದ್ದ ಸರ್ವೀಸ್ ರಸ್ತೆಗೆ ಬಸ್ ತಿರುಗಿಸಿದ್ದಾರೆ. ಇದರಿಂದ ಅದೇ ಸ್ಥಳದಲ್ಲಿ ಮತ್ತೊಂದು ಭಾರಿ ಅನಾಹುತ ತಪ್ಪಿದೆ.
ಬೆಂಗಳೂರಿನ ಟಿ.ದಾಸರಹಳ್ಳಿಯ ಶಾಲೆಯೊಂದರ ಮಕ್ಕಳು ಬಸ್‌ನಲ್ಲಿ ದಾಂಡೇಲಿಗೆ ಪ್ರವಾಸ ಹೊರಟಿದ್ದರು. ಶಾಲಾ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಮಕ್ಕಳ ಪ್ರಾಣ ಉಳಿಯಿತು. ಅಪಘಾತದಲ್ಲಿ ಶಾಲಾ ಬಸ್ ಮುಂಭಾಗ ಜಖಂಗೊಂಡಿದೆ. ಇನ್ನು ಬಸ್ ನಿಲ್ಲಿಸಿದ ತಕ್ಷಣ ಇಳಿದ ಶಾಲಾ ಬಸ್ ಚಾಲಕ, ಸೀಬರ್ಡ್ ಬಸ್ ಬಳಿ ಹೋಗಿ ಕೆಲ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಶಾಲಾ ಬಸ್ ಚಾಲಕನಿಗೆ ಸಣ್ಣ, ಪುಟ್ಟ ಗಾಯಗಳಾಗಿವೆ. ಬೇರೆ ಬಸ್ ವ್ಯವಸ್ಥೆ ಮಾಡಿಕೊಂಡು ಮಕ್ಕಳು ಪ್ರವಾಸ ಮುಂದುವರಿಸಿದರು ಎಂದು ತಿಳಿದುಬಂದಿದೆ. ಈ ದುರಂತವನ್ನು ಕಣ್ಣಾರೆ ಕಂಡ ಶಾಲಾ ಮಕ್ಕಳಿದ್ದ ಬಸ್ನ ಚಾಲಕ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಅವರಿಂದ ಹೇಳಿಕೆ ಕೂಡ ಪಡೆದಿದ್ದೇವೆ ಎಂದು ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.
Chitradurga Bus Accident: ಚಿತ್ರದುರ್ಗ ಬಸ್ ಅಪಘಾತದಲ್ಲಿ ಇಬ್ಬರು ಮಹಿಳಾ ಟೆಕ್ಕಿಗಳು ಕಣ್ಮರೆ
ಹಿರಿಯೂರು ಬಳಿ ಲಾರಿ-ಖಾಸಗಿ ಸ್ಲೀಪರ್ ಬಸ್ ಡಿಕ್ಕಿ; 6 ಜನ ಸಜೀವ ದಹನ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಬುಧವಾರ ತಡರಾತ್ರಿ ಖಾಸಗಿ ಸ್ಲೀಪರ್ ಬಸ್ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಟ್ಟು 6 ಜನ ಸಜೀವ ದಹನವಾಗಿದ್ದಾರೆ. ಲಾರಿ ಚಾಲಕ ಮತ್ತು ಬಸ್‌ನಲ್ಲಿದ್ದ 5 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ ಒಟ್ಟು 32 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಚಿತ್ರದುರ್ಗ, ಶಿರಾ, ಹಿರಿಯೂರು ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದಲ್ಲಿ ಬಸ್‌ನಲ್ಲಿ ಐದು ಮೃತ ದೇಹ ಹಾಗೂ ಲಾರಿನಲ್ಲಿ ಒಂದು ಮೃತದೇಹ ಪತ್ತೆಯಾಗಿದೆ. ಬಸ್ ಪ್ರಯಾಣಿಕರಲ್ಲಿ ಬಿಂದು ಮತ್ತು ಅವರ ಮಗು ಗ್ರೇಯಾ ಮೃತ ದೇಹದ ಗುರುತು ಸಿಕ್ಕಿದೆ. ಇನ್ನು ಮಾನಸ ಮತ್ತು ನವ್ಯಾ ಇಬ್ಬರೂ ಸ್ನೇಹಿತರಾಗಿದ್ದು, ಅವರ ಮೃತದೇಹದ ಗುರುತು ಸಿಗುತ್ತಿಲ್ಲ. ಯಾಕೆಂದರೆ, ಅವರು ಆಗಾಗ್ಗೆ ಚೈನ್ ಬದಲಾವಣೆ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಅವರ ಗುರುತು ಸ್ಪಷ್ಟವಾಗಿಲ್ಲ. ಇನ್ನು ರಶ್ಮಿ ಅವರ ಚೈನ್ ಫೋಟೊ ಪಡೆದು ಪೋಷಕರು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಎಸ್‌ಪಿ ರಂಜಿತ್ ಕುಮಾರ್ ತಿಳಿಸಿದ್ದಾರೆ.