CM Siddaramaiah: ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿದೆ, ಸರ್ಕಾರ ಸುಭದ್ರವಾಗಿದೆ: ಸಿಎಂ ಸಿದ್ದರಾಮಯ್ಯ
CM Siddaramaiah: ಬಿಜೆಪಿಯಲ್ಲಿ ಎರಡು ಮೂರು, ನಾಲ್ಕು ಗುಂಪುಗಳಿವೆ, ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಳಿಲ್ಲ. ನಾನು ಮತ್ತು ಡಿ.ಕೆ. ಶಿವಕುಮಾರ್ ಇಲ್ಲಿಯೇ ಇದ್ದೇವೆ. ನಮ್ಮಲ್ಲಿ ಗುಂಪುಗಳಿಲ್ಲ. ಬಿಜೆಪಿಯಲ್ಲಿ ಕಚ್ಚಾಟ ನಡೆದಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿದೆ. ಸರ್ಕಾರ ಸುಭದ್ರವಾಗಿದ್ದು, ನಾವು ಐದು ವರ್ಷ ಅಧಿಕಾರ ನಡೆಸಿ 2028ರಲ್ಲಿ ನಡೆಯುವ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಚಿತ್ರದುರ್ಗ, ಜ.23, 2025: ಭದ್ರಾ ಮೇಲ್ದಂಡೆ ಕಾಮಗಾರಿಗಳು ಸ್ಥಗಿತವಾಗಿಲ್ಲ. ಆದರೆ ಶೀಘ್ರಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿಲ್ಲ. ಗುತ್ತಿಗೆದಾರರಿಗೆ ಈ ವರ್ಷ 800 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಚಿತ್ರದುರ್ಗದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ನೀಡುವುದಾಗಿ 2023-24 ರ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದರು. ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರು ತಮ್ಮ ಬಜೆಟ್‌ನಲ್ಲಿಯೂ ಇದನ್ನು ಪುನರುಚ್ಚರಿಸಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವುದಾಗಿ ಹೇಳಿದ್ದರು. ಇಷ್ಟು ವರ್ಷಗಳಾದರೂ ಒಂದು ಪೈಸೆಯೂ ರಾಜ್ಯಕ್ಕೆ ಬಂದಿಲ್ಲ. ಸರ್ಕಾರ ಅನೇಕ ಬಾರಿ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ನೀಡಿದ್ದು, ಪ್ರಧಾನಿಗಳು, ನಿರ್ಮಲಾ ಸೀತಾರಾಮನ್, ಅಮಿತ್ ಶಾ ಅವರನ್ನೂ ಭೇಟಿ ಮಾಡಲಾಗಿದೆ. ಅವರೇ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದನ್ನು ಕೊಡಿ ಎಂದರೂ ಬಿಡುಗಡೆ ಮಾಡಿಲ್ಲ ಎಂದರು.
ನನ್ನನ್ನೂ ಒಳಗೊಂಡಂತೆ ಉಪಮುಖ್ಯಮಂತ್ರಿಗಳು ಭೇಟಿಯಾಗಿ ಬಂದಿದ್ದೇವೆ. ನಬಾರ್ಡ್‌ನಲ್ಲಿ ರಾಜ್ಯಕ್ಕೆ ಬರಬೇಕಾದ ಸಾಲದ ಮೊತ್ತ ಕಡಿತವಾಗಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದಾಗಲೂ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ಆದರೆ ಇಂದಿನವರೆಗೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಈ ಬಜೆಟ್‌ನಲ್ಲಿಯಾದರೂ ಹಣ ಮೀಸಲಿಟ್ಟು ಬಿಡುಗಡೆ ಮಾಡಲಿ ಎಂದು ಪತ್ರವನ್ನು ಕೇಂದ್ರಕ್ಕೆ ಬರೆದು ಒತ್ತಡ ಹಾಕಲಾಗುತ್ತಿದೆ ಎಂದು ಹೇಳಿದರು.
ರೈತರ ಜಮೀನು ಮುಳುಗಡೆಯಾಗದಂತೆ ತಡೆಯಲು ಪ್ರಯತ್ನ
ಹೊಸದುರ್ಗ ತಾಲೂಕಿನ ಹಿನ್ನೀರಿನಲ್ಲಿ ರೈತರ ಜಮೀನು ಮುಳುಗಡೆಯಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಮುಳುಗಡೆಯಾಗದ ರೀತಿಯಲ್ಲಿ ತಡೆಯುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ ಎಂದು ಅವರು ತಿಳಿಸಿದರು.
ಸಮೃದ್ಧ ಮಳೆಗಾಗಿ ಪ್ರಾರ್ಥನೆ
ಇಂದು ಗಂಗಾಪೂಜೆಯನ್ನು ಮಾಡಿ ಬಾಗಿನ ಅರ್ಪಿಸಿದ್ದೇವೆ. ಪ್ರತಿ ವರ್ಷವೂ ರೈತರ ಜಮೀನುಗಳಿಗೆ ನೀರು ಸಿಗುವಂತಾಗಲಿ ಒಳ್ಳೆ ಮಳೆ, ಬೆಳೆಯಾಗಿ ಪ್ರತಿ ವರ್ಷವೂ ಕೋಡಿ ಬೀಳುವಂತೆ ಕೆರೆಗೆ ನೀರು ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನವಾದರೆ ಪ್ರತಿ ವರ್ಷವೂ ಅಣೆಕಟ್ಟಿಗೆ ನೀರು ಹರಿಯಲಿದೆ ಎಂದರು.
ಈ ಸುದ್ದಿಯನ್ನೂ ಓದಿ | Bengaluru International Airport: ಬೆಂಗಳೂರು ವಿಮಾನ ನಿಲ್ದಾಣಕ್ಕೆ ‘ಎಸಿಐ’ನಿಂದ ಪ್ರತಿಷ್ಠಿತ ಮಾನ್ಯತೆ, ಇದನ್ನು ಪಡೆದ ದೇಶದ ಮೊದಲ ಏರ್‌ಪೋರ್ಟ್
ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಳಿಲ್ಲ
ಬಿಜೆಪಿಯಲ್ಲಿ ಎರಡು ಮೂರು, ನಾಲ್ಕು ಗುಂಪುಗಳಿವೆ, ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಳಿಲ್ಲ. ನಾನು ಮತ್ತು ಡಿ.ಕೆ. ಶಿವಕುಮಾರ್ ಇಲ್ಲಿಯೇ ಇದ್ದೇವೆ. ನಮ್ಮಲ್ಲಿ ಗುಂಪುಗಳಿಲ್ಲ. ಬಿಜೆಪಿಯಲ್ಲಿ ಕಚ್ಚಾಟ ನಡೆದಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿದೆ. ಸರ್ಕಾರ ಸುಭದ್ರವಾಗಿದ್ದು, ನಾವು ಐದು ವರ್ಷ ಅಧಿಕಾರ ನಡೆಸಿ 2028 ನಡೆಯುವ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.