ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Anantapur Horror: ಕ್ಲಾಸ್‌ ರೂಂಗೆ ನುಗ್ಗಿ ಬಾಲಕಿ ಮೇಲೆ ಮರಕೊಯ್ಯುವ ಯಂತ್ರದಿಂದ ಹಲ್ಲೆ ನಡೆಸಿದ ಪಾಗಲ್‌ ಪ್ರೇಮಿಯ ಕಾಲು ಕಟ್‌!

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಜಿಲ್ಲಾ ಪರಿಷತ್‌ ಹೈಸ್ಕೂಲ್‌ನ 10ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಮರ ಕತ್ತರಿಸುವ ಯಂತ್ರ ಮೂಲಕ ಹಲ್ಲೆ ನಡೆಸಿದ ಪಾಗಲ್ ಪ್ರೇಮಿ ಹೇಮಂತ್‌ನ ಕಾಲನ್ನು ಕತ್ತರಿಸಲಾಗಿದೆ. ಶೂಟೌಟ್‌ ವೇಳೆ ಕಾಲಿಗೆ ಬುಲೆಟ್‌ ನುಗ್ಗಿದ್ದರಿಂದ ಹೇಮಂತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಡಗಾಲಿನ ರಕ್ತನಾಳಗಳು ವಿಫಲಗೊಂಡು ರಕ್ತ ಪರಿಚಲನೆ ನಿಂತುಹೋದ ಕಾರಣ ಆ ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ.

ಬಾಲಕಿ ಮೇಲೆ ಹಲ್ಲೆ ನಡೆಸಿದ ಪಾಗಲ್‌ ಪ್ರೇಮಿಯ ಕಾಲು ಕಟ್‌

ಹೇಮಂತ್‌ ಮತ್ತು ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 3, 2026 6:09 PM

ಅಮರಾವತಿ, ನ. 3: ಶನಿವಾರ (ಅಕ್ಟೋಬರ್‌ 31) ಬೆಳಗ್ಗೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಜಿಲ್ಲಾ ಪರಿಷತ್‌ ಹೈಸ್ಕೂಲ್‌ನ 10ನೇ ತರಗತಿಯ ಕೊಠಡಿಗೆ ನುಗ್ಗಿ 15 ವರ್ಷದ ವಿದ್ಯಾರ್ಥಿನಿ ಮೇಲೆ ಚೈನ್‌ಸಾ (ಮರ ಕತ್ತರಿಸುವ ಯಂತ್ರ) ಮೂಲಕ ಹಲ್ಲೆ ನಡೆಸಿದ ಪಾಗಲ್ ಪ್ರೇಮಿ ಹೇಮಂತ್‌ನ ಕಾಲನ್ನು ಕತ್ತರಿಸಲಾಗಿದೆ (Anantapur Horror). ಶೂಟೌಟ್‌ ವೇಳೆ ಕಾಲಿಗೆ ಬುಲೆಟ್‌ ನುಗ್ಗಿದ್ದರಿಂದ ಹೇಮಂತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಡಗಾಲಿನ ರಕ್ತನಾಳಗಳು ವಿಫಲಗೊಂಡು ರಕ್ತ ಪರಿಚಲನೆ ನಿಂತುಹೋದ ಕಾರಣ ಆ ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ ಎಂದು ವರದಿ ತಿಳಿಸಿದೆ. ನವೆಂಬರ್‌ 1ರಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಹೇಮಂತ್‌ ಮೇಲೆ ಅನಿವಾರ್ಯವಾಗಿ ಪೊಲೀಸರು ಗುಂಡು ಹಾರಿಸಿದ್ದರು.

ಆತನ ಬಲಕಾಲಿನ ರಕ್ತ ಪರಿಚಲನೆಯ ಬಗ್ಗೆಯೂ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾಗಿ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಆತನಿಗೆ ಅನಂತಪುರ ಸರ್ಕಾರಿ ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

21 ವರ್ಷದ ಹೇಮಂತ್‌ನ ಕಾಲುಗಳಿಗೆ ಹಲವು ಮದ್ದುಗುಂಡುಗಳು ಹೊಕ್ಕಿವೆ. ಪೊಲೀಸರ ಮೇಲೆ ಆತ ನಡೆಸಿದ ದಾಳಿಯಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಕೂಡ ಗಾಯಗೊಂಡಿದ್ದಾರೆ. ಶೂಟೌಟ್‌ ನಡೆಸುವ ಮುನ್ನ ಶರಣಾಗುವಂತೆ ಆತನಿಗೆ ಸೂಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಕೌಂಟರ್‌ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ಲಾಸ್‌ ರೂಂನಲ್ಲೇ ಬಾಲಕಿ ಮೇಲೆ ಮರಕೊಯ್ಯುವ ಯಂತ್ರದಿಂದ ಹಲ್ಲೆ ಎಸಗಿದ ಪಾಗಲ್‌ ಪ್ರೇಮಿ ಕಾಲಿಗೆ ಗುಂಡೇಟು

ಹೇಮಂತ್‌ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ಡಾ. ಮಲ್ಲೇಶ್ವರಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ಆತನ ಬಲ ಕಾಲಿಗೆ ರಕ್ತ ಪೂರೈಕೆ ಕಡಿಮೆಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ರಕ್ತನಾಳಗಳ ಮೇಲಿನ ಒತ್ತಡದಿಂದ ಈ ಸಮಸ್ಯೆ ಉಂಟಾಗಿದೆಯೇ ಅಥವಾ ರಕ್ತ ಹೆಪ್ಪುಗಟ್ಟಿದೆಯೇ ಎಂಬುದನ್ನು ಪತ್ತೆಹಚ್ಚಲು ಸಿಟಿ ಆಂಜಿಯೋಗ್ರಾಮ್ ಪರೀಕ್ಷೆಯನ್ನೂ ನಡೆಸಲಾಗಿದೆ.

ಗ್ಯಾಂಗ್ರೀನ್‌ನಂತಹ ಗಂಭೀರ ಸಮಸ್ಯೆ ತಡೆಯಲು ಅಗತ್ಯವಿದ್ದರೆ ಹಾನಿಗೊಳಗಾದ ಭಾಗಗಳನ್ನು ತೆಗೆದುಹಾಕುವುದಾಗಿಯೂ ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ಆತ ಚಿಕಿತ್ಸೆಗೆ ಸ್ಪಂದಿಸುವುದಾಗಿ ಹೇಳಿದ್ದಾರೆ.

ಏನಿದು ಘಟನೆ?

ಶಾಲೆಯಲ್ಲಿ ಶನಿವಾರ ಬೆಳಗ್ಗೆ ಪಾಠ ನಡೆಯುತ್ತಿದ್ದಾಗಲೇ 10ನೇ ತರಗತಿಯ ಕೊಠಡಿಗೆ ನುಗ್ಗಿ ವಿದ್ಯಾರ್ಥಿನಿ ಮೇಲೆ ಚೈನ್‌ಸಾ ಮೂಲಕ ಹೇಮಂತ್ ಹಲ್ಲೆ ಮಾಡಿದ ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಕೂಡಲೇ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿತ್ತು. ಈತ ಹುಡುಗಿಯ ದೂರದ ಸಂಬಂಧಿಯಾಗಿದ್ದು, ಕೆಲವು ದಿನಗಳಿಂದ ಪ್ರೀತಿ ಮಾಡುವಂತೆ ಕಿರುಕುಳ ನೀಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ತವ್ಯನಿರತ ಮಹಿಳಾ ವೈದ್ಯೆ ಮೇಲೆ ಹಲ್ಲೆ: ವಿಡಿಯೊ ವೈರಲ್

ಬಾಲಕಿ ಸ್ಥಿತಿ ಹೇಗಿದೆ?

ಹೇಮಂತ್‌ ದಾಳಿಯಿಂದ ಬಾಲಕಿಯ ಮುಖ, ಕೈ ತಲೆ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ. ಜತೆಗೆ ಬಲಗೈಯ ಹಲವು ಮೂಳೆ ಮುರಿದಿದ್ದು, ತೀವ್ರ ಹಾನಿ ಉಂಟಾಗಿದೆ. ಸದ್ಯ ಆಕೆಗೆ ಚಿಕಿತ್ಸೆ ಮುಂದುವರಿದಿದೆ. ದಾಳಿ ಹಿಂದಿನ ನೈಜ ಉದ್ದೇಶ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.