ಉಪ್ಪಿನಂಗಡಿ, ನ. 3: ಮನೆಯೊಳಗೆ ಮಲಗಿದ್ದ ಮೂವರು ಮಕ್ಕಳಿಗೆ ವಿಷಪೂರಿತ ಹಾವೊಂದು ಕಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಸಮೀಪದ ಕುದ್ರಡ್ಕದಲ್ಲಿ ನಡೆದಿದೆ (Snake Bite). ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುದ್ರಡ್ಕ ನಿವಾಸಿ ವಿಜಯ ಮಡೆಕ್ಕಿಲ ಅವರ ಮಗ ದಕ್ಷಿತ್ ಮತ್ತು ಅಕ್ಕನ ಮಕ್ಕಳಾದ ವಿಶ್ಮಿತಾ ಹಾಗೂ ಅನ್ವಿತಾ ಅವರಿಗೆ ವಿಷ ಪೂರಿತ ಕನ್ನಡಿ ಹಾವು ಕಡಿದಿದೆ ಎಂದು ಮೂಲಗಳು ತಿಳಿಸಿವೆ.
ತಡರಾತ್ರಿ ಘಟನೆ ಸಂಭವಿಸಿದ್ದು, ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ವಾಹನ ಸಿಗದಿದ್ದಾಗ ನಾಟಿವೈದ್ಯರೊಬ್ಬರ ಸಕಾಲಿಕ ನೆರವಿನಿಂದ ಮಕ್ಕಳು ಪಾರಾಗಿದ್ದಾರೆ.
ದಕ್ಷಿತ್ ಮತ್ತು ವಿಶ್ಮಿತಾ ಹಾಗೂ ಅನ್ವಿತಾ ಒಂದೇ ಕೋಣೆಯಲ್ಲಿ ಮಲಗಿದ್ದರು. ರಾತ್ರಿ 11.30ರ ಸುಮಾರಿಗೆ ಕೋಣೆಯೊಳಗೆ ಪ್ರವೇಶಿಸಿದ ಹಾವು ಮೊದಲು ದಕ್ಷಿತ್‌ನ ಎರಡೂ ಕೈಗಳಿಗೆ ಕಚ್ಚಿತು. ಬಳಿಕ ವಿಶ್ಮಿತಾ ಹಾಗೂ ಅನ್ವಿತಾ ಅವರ ಕೈಗೂ ಕಚ್ಚಿತು.
ಈ ಸುದ್ದಿಯನ್ನೂ ಓದಿ: Snake bite: ಹಾವು ಕಡಿದು 5 ವರ್ಷದ ಅಂಗನವಾಡಿ ಬಾಲಕಿ ಸಾವು
ತಕ್ಷಣ ಅಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದ ಕಅರಣ ಮನೆಯವರು ತಣ್ಣೀರುಪಂತ ಗ್ರಾಮದಲ್ಲಿರುವ ನಾಟಿ ವೈದ್ಯರನ್ನು ಸಂಪರ್ಕಿಸಿದ್ದರು. ಅವರ ತ್ವರಿತ ಚಿಕಿತ್ಸೆಯಿಂದ ಮಕ್ಕಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಹಾವು ಕಡಿದು ಅಂಗನವಾಡಿ ಬಾಲಕಿ ಸಾವು
ಮುಂಡಗೋಡ: ಹಾವು ಕಡಿದು ಅಂಗನವಾಡಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕೆಲವು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದಿತ್ತು. ಮಯೂರಿ ಸುರೇಶ ಕುಂಬಳಪ್ಪನವರ (5) ಮೃತ ಬಾಲಕಿ.
ಮಯೂರಿ ಎಂದಿನಂತೆ ಅಂಗನವಾಡಿಗೆ ಹೋಗಿದ್ದ ವೇಳೆ ಮೂತ್ರ ವಿಸರ್ಜನೆಗೆಂದು ಅಂಗನವಾಡಿಯ ಹಿಂಬದಿ ತೆರಳಿದಾಗ ಹಾವು ಕಡಿದಿತ್ತು. ಬಾಲಕಿ ತಕ್ಷಣ, ಕಾಲಿಗೆ ಹಾವು ಕಡಿದಿದೆ ಎಂದು ಅಳುತ್ತಾ ಓಡಿ ಬಂದಿದ್ದಳು. ಈ ವೇಳೆ ಸ್ಥಳೀಯರು ಆಟೋದಲ್ಲಿ ಬಾಲಕಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಳು.