ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಬಯಲಾಯ್ತು ಬಂಗ್ಲೆಗುಡ್ಡ ರಹಸ್ಯ; ಅಸ್ಥಿಪಂಜರದ ಬಳಿ ಸಿಕ್ಕ ಐಡಿ ಕಾರ್ಡ್​​ ಗುರುತು ಪತ್ತೆ

Banglegudda Case: ಧರ್ಮಸ್ಥಳದ ಸಮೀಪದ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಮಾನವ ಅವಶೇಷ ಬಳಿ ಪತ್ತೆಯಾದ ಐಡಿ ಕಾರ್ಡ್‌ನ ರಹಸ್ಯ ಬಯಲಾಗಿದೆ. ಇದು ಯು.ಬಿ.ಅಯ್ಯಪ್ಪ (70) ಎಂಬುವರ ಐಡಿ ಕಾರ್ಡ್ ಎನ್ನುವುದು ಗೊತ್ತಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ನಿವಾಸಿ ಅಯ್ಯಪ್ಪ 2017ರಲ್ಲಿ ನಾಪತ್ತೆಯಾಗಿದ್ದರು.

ಬಂಗ್ಲೆಗುಡ್ಡ: ಅಸ್ಥಿಪಂಜರದ ಬಳಿ ಸಿಕ್ಕ ಐಡಿ ಕಾರ್ಡ್​​ ಗುರುತು ಪತ್ತೆ

-

Ramesh B Ramesh B Sep 18, 2025 5:46 PM

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂತು ಹಾಕಿದ್ದೇನೆ ಎಂದು ಚಿನ್ನಯ್ಯ ನೀಡಿದ್ದ ಹೇಳಿಕೆ ಇತ್ತೀಚೆಗೆ ಭಾರಿ ಸಂಚಲನ ಸೃಷ್ಟಿಸಿತ್ತು. ದೇಶದ ಗಮನ ಸೆಳೆದ ಈ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ (Dharmasthala Case). ಈಗಾಗಲೇ ಚಿನ್ನಯ್ಯನ ಹೇಳಿಕೆ ಸುಳ್ಳು ಎನ್ನುವುದು ಸಾಬೀತಾಗಿದ್ದು, ಬಂಗ್ಲೆಗುಡ್ಡದ (Banglegudda) ಮೇಲ್ಭಾಗದಲ್ಲಿ ಇತ್ತೀಚೆಗೆ ಸಿಕ್ಕ ಮಾನವ ಅವಶೇಷ, ಅ‍ಸ್ಥಿ ಪಂಜರ ಮತ್ತು ಐಡಿ ಕಾರ್ಡ್‌ನ ರಹಸ್ಯ ಕೂಡ ಬಯಲಾಗಿದೆ.

ಧರ್ಮಸ್ಥಳದ ಸಮೀಪದ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಮಾನವ ಅವಶೇಷ ಕಂಡಿದ್ದಾಗಿ ಸೌಜನ್ಯಾ ಮಾವ ವಿಠ್ಠಲ ಗೌಡ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ 2 ತಂಡಗಳಾಗಿ 13 ಎಕ್ರೆ ವ್ಯಾಪ್ತಿಯ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ 2 ದಿನ ಶೋಧ ಕಾರ್ಯ ನಡೆಸಿತ್ತು. ಈ ವೇಳೆ ಮಾನವನ ಬುರುಡೆ, 7 ಅಸ್ಥಿಪಂಜರದ ಜತೆಗೆ ಒಂದು ಐಡಿ ಕಾರ್ಡ್​ ಸಿಕ್ಕಿತ್ತು. ಇದೀಗ ಐಡಿ ಯಾರದ್ದೆನ್ನುವ ವಿಚಾರ ಬರಲಾಗಿದೆ. ಯು.ಬಿ.ಅಯ್ಯಪ್ಪ (70) ಎಂಬುವರ ಐಡಿ ಕಾರ್ಡ್ ಇದು ಎನ್ನುವುದು ಗೊತ್ತಾಗಿದೆ. ಕೊಡಗು (Kodagu) ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ನಿವಾಸಿ ಅಯ್ಯಪ್ಪ 2017ರಲ್ಲಿ ನಾಪತ್ತೆಯಾಗಿದ್ದರು. ಇದೀಗ 8 ವರ್ಷಗಳ ಬಳಿಕ ಅವರ ಐಡಿ ಕಾರ್ಡ್ ಬಂಗ್ಲೆಗುಡ್ಡದಲ್ಲಿ ಸಿಕ್ಕಿದೆ. ಅವರು ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ.

ಈ ಸುದ್ದಿಯನ್ನೂ ಓದಿ: Dharmasthala Case: ಬಂಗ್ಲೆಗುಡ್ಡದಲ್ಲಿ ಸಿಕ್ಕ ಮಾನವ ಅವಶೇಷ ಯಾರದ್ದು? ಎಸ್‌ಐಟಿ ತಂಡ ಹೇಳಿದ್ದೇನು?

ಅಯ್ಯಪ್ಪ 2017ರಲ್ಲಿ ಮೈಸೂರಿನ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು, ಕುಟ್ಟ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು. ಹೀಗಾಗಿ ಸಿಕ್ಕ ಅಸ್ಥಿಪಂಜರ ಸಹ ಅಯ್ಯಪ್ಪನವರದ್ದೇ ಇರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.

ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ಅಸ್ಥಿಪಂಜರಗಳು ಮೇಲ್ನೋಟಕ್ಕೆ ಆತ್ಮಹತ್ಯೆಯ ಸ್ಥಿತಿಯಲ್ಲಿತ್ತು ಎಂದು ಮೂಲಗಳು ತಿಳಿಸಿವೆ. ತಲೆ ಬುರುಡೆ ಹಾಗೂ ಅವಶೇಷಗಳು ಹಗ್ಗ, ಬಟ್ಟೆಯಿಂದ ಮರಕ್ಕೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎನ್ನಲಾಗಿದೆ.

ವಿಠ್ಠಲಗೌಡ ಹೇಳಿಕೆ ಆಧರಿಸಿ ಬುಧವಾರ ಮತ್ತು ಗುರುವಾರ (ಸೆಪ್ಟೆಂಬರ್‌ 17, 18) ಬಂಗ್ಲೆಗುಡ್ಡದಲ್ಲಿ ಶೋಧ ನಡೆಸಿದಾಗ ಮಾನವ ಬುರುಡೆ ಮತ್ತು ಮೂಳೆಗಳು ಪತ್ತೆಯಾಗಿದ್ದವು. ಇವು ಭೂಮಿಯ ಮೇಲ್ಮೈಯಲ್ಲೇ ಕಂಡು ಬಂದಿದ್ದವು. ಹೀಗಾಗಿ ಬುರುಡೆ ಮತ್ತು ಮೂಳೆ ಜತೆಗೆ ಮಣ್ಣಿನ ಸ್ಯಾಂಪಲ್ ಸಂಗ್ರಹಿಸಿದ ಎಸ್‌ಐಟಿ ಅಧಿಕಾರಿಗಳು ಗುರುತು ಪತ್ತೆಗೆ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ.

ಗುರುವಾರ ಸಿಕ್ಕ 2 ಬುರುಡೆ ಪುರುಷನದ್ದು ಎಂದು ತನಿಖೆಯಿಂದ ಬಯಲಾಗಿದೆ. ಅಲ್ಲದೆ 2 ದಿನಗಳ ಶೋಧ ಕಾರ್ಯದಲ್ಲಿ ಪತ್ತೆಯಾದ ಮಾನವ ಅವಶೇಷಗಳ ಪೈಕಿ 5 ಪುರುಷರದ್ದೇ ಎಂದು ವೈದ್ಯರು ತಿಳಿಸಿದ್ದಾಗಿ ವರದಿಯೊಂದು ಹೇಳಿದೆ. ಅಂತಿಮ ವರದಿಯನ್ನು ನಿರೀಕ್ಷಿಲಾಗುತ್ತಿದೆ. ಬಂಗ್ಲೆಗುಡ್ಡದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿದ್ದು, ಹೀಗಾಗಿ ಇಲ್ಲಿ ಮೂಳೆ ಸಿಕ್ಕಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.