ಸತ್ಯಕ್ಕೆ ಮತ್ತೊಂದು ಜಯ; ಧರ್ಮಸ್ಥಳ ಸಂಸ್ಥೆ ವಿರುದ್ಧದ ದೂರು ವಜಾ: ಹೈಕೋರ್ಟ್‌ನಿಂದ ಮಹತ್ವದ ತೀರ್ಪು
SKDRDP: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರುದ್ಧದ ದೂರು ಅರ್ಜಿ ತಿರಸ್ಕೃತವಾಗಿದ್ದು, ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. 2016ರಲ್ಲಿ ರಂಜನ್ ರಾವ್ ಸಲ್ಲಿಸಿದ್ದ ಹಣಕಾಸು ವ್ಯವಹಾರ ನಿಯಮ ಉಲ್ಲಂಘನೆ ಹಾಗೂ ಅಕ್ರಮ ಬಡ್ಡಿ ಆಧಾರಿತ ಸಾಲ ಆರೋಪದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, SKDRDP ಸಂಸ್ಥೆ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಧರ್ಮಸ್ಥಳ ಕ್ಷೇತ್ರ (ಸಂಗ್ರಹ ಚಿತ್ರ) -
ಬೆಂಗಳೂರು, ಜ. 9: ಧರ್ಮಸ್ಥಳ (Dharmasthala) ಬುರುಡೆ ಪ್ರಕರಣ ಬಯಲಾದ ಬೆನ್ನಲ್ಲೇ, ಶ್ರೀ ಕ್ಷೇತ್ರಕ್ಕೆ ನಮತ್ತೊಂದು ಗೆಲುವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದಾಖಲಾಗಿದ್ದ ದೂರು ಶುಕ್ರವಾರ (ಜನವರಿ 9) ವಜಾಗೊಂಡಿದೆ. ರಂಜನ್ ರಾವ್ ಯರ್ಡೂರು (Ranjan Rao Yerdoor) ಎಂಬವವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ಬೆಳ್ತಂಗಡಿ ((Belthangady) ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾಖಲಿಸಿದ್ದ ಕ್ರಿಮಿನಲ್ ಕೇಸ್(Criminal Case) ನ್ನು ಹೈಕೋರ್ಟ್ ವಜಾಗೊಳಿಸಿ ತೀರ್ಪು ನೀಡಿದೆ.
ಏನಿದು ಪ್ರಕರಣ?
2016ರಲ್ಲಿ ರಂಜನ್ ರಾವ್ ಯರ್ಡೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಹಣಕಾಸು ವ್ಯವಹಾರ ನಡೆಸಲು ಅನುಮತಿ ಇಲ್ಲದಿದ್ದರೂ, ಅಕ್ರಮವಾಗಿ ಬಡ್ಡಿಗೆ ಹಣ ನೀಡುತ್ತಿದೆ. ಅಷ್ಟೇ ಅಲ್ಲದೇ ನಿಯಮ ಮೀರಿ ಬಡ್ಡಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಅಲ್ಲದೇ ಈ ಬಗ್ಗೆ ಸೂಕ್ರ ಕ್ರಮವಹಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದರು. ಜೊತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಸ್ಥರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮತ್ತಿತರರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ್ದ ಬೆಳ್ತಂಗಡಿ ನ್ಯಾಯಾಲಯವು ಪೊಲೀಸ್ ತನಿಖೆಗೆ ಆದೇಶವನ್ನೂ ನೀಡಿತ್ತು.
ಬುರುಡೆ ಕೇಸ್‌ಗೆ ಶ್ರೀಕ್ಷೇತ್ರ ಧರ್ಮಸ್ಥಳ ಎಂಟ್ರಿ; ಎಸ್‌ಐಟಿ ವರದಿ ವಿಚಾರಣೆಗೆ ಪ್ರತಿವಾದಿಯಾಗಿಸಲು ಅರ್ಜಿ
ಧರ್ಮಸ್ಥಳ ಸಂಸ್ಥೆಯ ವಿರುದ್ಧ ಪೊಲೀಸ್ ತನಿಖೆ ಪ್ರಶ್ನಿಸಿ ಹೈಕೋರ್ಟ್ ಮೊರೆ
ರಂಜನ್ ರಾವ್ ಯರ್ಡೂರು ದಾಖಲಿಸಿದ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದ್ದ ಪೊಲೀಸ್ ತನಿಖೆಯನ್ನು ಪ್ರಶ್ನಿಸಿ ಧರ್ಮಸ್ಥಳ ಸಂಸ್ಥೆಯವರು ನ್ಯಾಯವಾದಿ ಪಿ.ಪಿ. ಹೆಗಡೆ ಅವರ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದ್ದ ಪೊಲೀಸ್ ತನಿಖೆಗೆ ಹೈಕೋರ್ಟ್ ತಡೆ ನೀಡಿತ್ತು.
ಹೈಕೋರ್ಟ್‌ನಲ್ಲಿ ಗಮನಸೆಳೆದ ನ್ಯಾಯವಾದಿ ಪಿ.ಪಿ. ಹೆಗಡೆ
ಹೈಕೋರ್ಟ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರ ವಾದ ಮಂಡಿಸಿದ ನ್ಯಾಯವಾದಿ ಪಿ.ಪಿ. ಹೆಗಡೆ, "ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ನಿಯಮಾನುಸಾರ ಧರ್ಮಸ್ಥಳ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಮತ್ತು ಯಾವುದೇ ಅಕ್ರಮ ವ್ಯವಹಾರ ನಡೆಸಿಲ್ಲ. ದಾನ-ಧರ್ಮಗಳ ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ಸ್ವಸಹಾಯ ಸಂಘ ಯೋಜನೆಯನ್ನು ಜಾರಿ ಮಾಡಲಾಗುತ್ತಿದ್ದು, ಎಲ್ಲವೂ ಕಾನೂನು ಬದ್ಧವಾಗಿ ನಡೆಯುತ್ತಿದೆ" ಎಂದು ನ್ಯಾಯಪೀಠದ ಗಮನಸೆಳೆದಿದ್ದಾರೆ.
ಶ್ರೀ ಕ್ಷೇತ್ರಕ್ಕೆ ಧಕ್ಕೆ ತರಲು ಷ್ಯಡ್ಯಂತ್ರ
ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರತೆಗೆ ಧಕ್ಕೆತರುವ ಉದ್ದೇಶದಿಂದ ಇಂತವರು ನಿರಂತರ ಸುಳ್ಳು ದೂರು ದಾಖಲಿಸಿ ಮಾನಹಾನಿ ಉಂಟು ಮಾಡುತ್ತಿದ್ದಾರೆ ಎಂದು ನ್ಯಾಯವಾದಿ ಪಿ.ಪಿ.ಹೆಗಡೆ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು. ಅಲ್ಲದೇ ಸುಪ್ರೀಂ ಕೋರ್ಟ್ ಸಹಿತ ವಿವಿಧ ನ್ಯಾಯಾಲಯಗಳು ನೀಡಿದ್ದ ತೀರ್ಪುಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು.
ದೂರು ವಜಾ- ಸತ್ಯಕ್ಕೆ ಮತ್ತೊಂದು ಜಯ
ಧರ್ಮಸ್ಥಳದ ಪರವಾದ ನ್ಯಾಯವಾದಿ ಪಿ.ಪಿ.ಹೆಗಡೆಯವರ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಬೆಳ್ತಂಗಡಿ ನ್ಯಾಯಾಲಯದಲ್ಲಿ ರಂಜನ್ ರಾವ್ ಯರ್ಡೂರು ದಾಖಲಿಸಿದ್ದ ದೂರನ್ನು ಸಂಪೂರ್ಣ ವಜಾ ಮಾಡಿ ಆದೇಶ ನೀಡಿದ್ದಾರೆ. ಅಲ್ಲದೇ, ಪ್ರತಿಷ್ಟಿತ ಕ್ಷೇತ್ರಕ್ಕೆ ಮಾನಹಾನಿ ಉಂಟು ಮಾಡಲು ಹಾಗೂ ಪ್ರಚಾರ ಪಡೆಯುವ ದುರುದ್ದೇಶದಿಂದ ಸುಳ್ಳು ದೂರು ನೀಡಿರುವುದು ಈ ಪ್ರಕರಣದಲ್ಲಿ ಕಂಡುಬಂದಿದೆ ಎಂದು ನ್ಯಾಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.