Dharmasthala: ಧರ್ಮಸ್ಥಳ, ಧರ್ಮಾಧಿಕಾರಿ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ಆದೇಶ!
ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ತಂಡಕ್ಕೆ ಧರ್ಮಸ್ಥಳದ ವಿಚಾರದಲ್ಲಿ ಹಿನ್ನಡೆಯಾಗಿದ್ದು, ಶ್ರೀ ಕ್ಷೇತ್ರದ ವಿರುದ್ಧ ಅಥವಾ ಡಾ ಹೆಗ್ಗಡೆ ಕುಟುಂಬದವರ ವಿರುದ್ಧ ಯಾವುದೇ ರೀತಿಯ ಮಾನಹಾನಿ ಹೇಳಿಕೆ ನೀಡದಂತೆ ಹೈಕೋರ್ಟ್ ಆದೇಶ ನೀಡಿದೆ.
ಬೆಂಗಳೂರು: ರಾಜ್ಯಸಭಾ ಸದಸ್ಯರೂ ಅಗಿರುವ ಪದ್ಮವಿಭೂಷಣ ಡಾ. ಡಿ ವೀರೇಂದ್ರ ಹೆಗ್ಗಡೆ (Dr D Veerendra Heggade) ಹಾಗೂ ಅವರ ಕುಟುಂಬ ಹಾಗೂ ಧರ್ಮಸ್ಥಳಕ್ಕೆ (Dharmasthala) ಸಂಬಂಧಿಸಿದ ಯಾವುದೇ ಸಂಸ್ಥೆಗಳ ವಿರುದ್ಧ ಯಾವುದೇ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಕರ್ನಾಟಕ ಹೈಕೋರ್ಟ್ (High Court of Karnataka) ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ಮತ್ತು ಅವರ ಅನುಯಾಯಿಗಳಿಗೆ ಖಡಕ್ ಆದೇಶ ನೀಡಿದೆ.
ಸೋಮವಾರ ನ್ಯಾ. ಆರ್ ದೇವದಾಸ್ ಅವರಿದ್ದ ಏಕ ಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ. ಅಲ್ಲದೇ ಸಾರ್ವಜನಿಕ ಸಭೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆ, ಅವರ ಕುಟುಂಬ, ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಯಾವುದೇ ಅಪಪ್ರಚಾರ ಅಥವಾ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಆದೇಶಿಸಿದೆ.
ಸಿವಿಲ್ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರು, ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ, ಮಾನಹಾನಿ ಮಾಡಿದ್ದಲ್ಲದೇ , ನ್ಯಾಯಾಂಗ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ನಿಂದನೆಯನ್ನು ಹೈಕೋರ್ಟ್ ತೀವ್ರವಾಗಿ ಪರಿಗಣಿಸಿ ಈ ಮೇಲಿನ ಆದೇಶ ನೀಡಿದೆ.
ಇದನ್ನೂ ಓದಿ: ಅಜ್ಜಿ or ತಾಯಿ? ಅತುಲ್ ಸುಭಾಷ್ ಪುತ್ರ ಯಾರ ಜೊತೆ ಇರಬೇಕೆಂದು ತೀರ್ಪು ನೀಡಿದ ಸುಪ್ರೀಂ!
ಅರ್ಜಿಯ ವಿಚಾರಣೆ ವೇಳೆ, ಮಹೇಶ್ ಶೆಟ್ಟಿ ತಿಮರೋಡಿ ಬೇಷರತ್ ಕ್ಷಮೆಯ ಅಫಿಡವಿಟ್ ಸಲ್ಲಿಸಿದ್ದರೂ, ತಮ್ಮ ವರ್ತನೆಯನ್ನು ಸರಿಪಡಿಸಿಕೊಂಡಿಲ್ಲ, ಮುಂದಿನ ದಿನಗಳಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಸಹಚರರು ಯಾವುದೇ ಸಾಮಾಜಿಕ ಜಾಲತಾಣದಲ್ಲಿ, ಸಭೆ, ಸಮಾರಂಭಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳು, ಕುಟುಂಬ ಸದಸ್ಯರು ಹಾಗೂ ಧರ್ಮಸ್ಥಳದ ಸಂಸ್ಥೆಗಳು, ನ್ಯಾಯಾಂಗ ನಿಂದನೆ, ಅಪಪ್ರಚಾರ, ಮಾನಹಾನಿ ಮಾಡಿದಲ್ಲಿ,ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಲೀಸರಿಗೆ ಖಡಕ್ ಆದೇಶ ನೀಡಿದೆ. ಅರ್ಜಿದಾರರ ಪರ ಹೈಕೋರ್ಟ್ ಹಿರಿಯ ನ್ಯಾಯವಾದಿ ಉದಯ ಹೊಳ್ಳ ಹಾಗೂ ಆರ್. ರಾಜಶೇಖರ್ ಹಿಲಿಯಾರು ವಾದ ಮಂಡಿಸಿದ್ದರು.