Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ; ಅರ್ಜಿ ಸಲ್ಲಿಕೆಗೆ ಏ. 25 ಕಡೇ ದಿನ
Dharmasthala: ಧರ್ಮಸ್ಥಳದಲ್ಲಿ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮೇ 3ರಂದು ನಡೆಯಲಿದೆ. ಸಾಮೂಹಿಕ ವಿವಾಹದಲ್ಲಿ ಮದುವೆ ಆಗಲಿಚ್ಛಿಸುವವರು ಏ. 25ರೊಳಗೆ ಸವಿವರ ಮಾಹಿತಿ ಹಾಗೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಧರ್ಮಸ್ಥಳ, ಜ. 17, 2025: ಶ್ರೀಕ್ಷೇತ್ರ ಧರ್ಮಸ್ಥಳ (Dharmasthala) ಅಂದರೆ ಅದು ಧರ್ಮದ ನೆಲೆವೀಡು. ಭಕ್ತ ಕೋಟಿಯ ಆರಾಧನಾ ತಾಣ. ಬೇಡಿದ ಬಯಕೆ ಈಡೇರಿಸುವ ದೇವರು ಮಂಜುನಾಥ. ಇದೇ ಕಾರಣಕ್ಕೆ ಕೋಟಿ ಕೋಟಿ ಭಕ್ತರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುತ್ತಾರೆ. ಹಬ್ಬ, ಹರಿದಿನ, ಜನುಮದಿನ, ಮದುವೆಯ ಕಾರ್ಯ ಎಲ್ಲದಕ್ಕೂ ಶ್ರೀ ಕ್ಷೇತ್ರವನ್ನೇ ಆರಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಕ್ಷೇತ್ರವೂ ಕೂಡ ಸಾಮಾಜಿಕ ಕೆಲಸಗಳಿಂದ ಹೆಸರುವಾಸಿ. ಅದರಲ್ಲೂ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡುವ ಮಂಜುನಾಥನೆಂದೇ ಪ್ರಸಿದ್ಧ. ಕ್ಷೇತ್ರದ ಚತುರ್ದಾನ ಪರಂಪರೆಯನ್ನು ಪಾಲಿಸಿಕೊಂಡು ಬರುತ್ತಿರುವ ಖಾವಂದರು ಜನರ ಕಷ್ಟ, ನೋವು, ಸಾಲದ ಹೊರೆಯನ್ನು ಮನಗಂಡು ತನ್ನ ಕಿರಿಯ ವಯಸ್ಸಿನಲ್ಲೇ ಅಂದರೆ 1972ರಲ್ಲಿ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ (Mass Marriage) ನಡೆಸಲು ತೀರ್ಮಾನಿಸಿದರು.
1972ರಿಂದ ಆರಂಭವಾದ ಸಾಮೂಹಿಕ ವಿವಾಹ 50 ವರ್ಷ ಪೂರೈಸಿದೆ. ಈ ಬಾರಿ 200 ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದೆ. 1972ರಿಂದ ಆರಂಭವಾದ ಮಹಾನ್ ಕಾರ್ಯ ನಿರಂತರವಾಗಿ ನಡೆಯುತ್ತಾ ಬಂದಿದೆ. 12,900 ಜೋಡಿ ಈಗಾಗಲೇ ದಾಂಪತ್ಯ ಜೀವನವನ್ನು ಬಹಳ ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್(ರಿ) ಧರ್ಮಸ್ಥಳ ಇದರ ಆಶ್ರಯದಲ್ಲಿ 2025ರ ಮೇ 3ರಂದು 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ನಡೆಯಲಿದ್ದು, ಶ್ರೀಕ್ಷೇತ್ರದಲ್ಲಿ ಸಂಜೆ 6.45ಕ್ಕೆ ಗೋಧೋಳಿ ಲಗ್ನದಲ್ಲಿ 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ.
ವಧು-ವರರಿಗೆ ಕ್ಷೇತ್ರದಿಂದ ಕರಿಮಣಿ, ತಾಳಿ ಮತ್ತು ವಧು-ವರರ ಉಡುಪು ಮತ್ತು ಹೂವಿನ ಮಾಲೆಯನ್ನು ವಿತರಿಸಲಾಗುತ್ತದೆ. 53ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವವರಿಗೆ ಕ್ಷೇತ್ರದಿಂದ ತಲಾ 5,000 ರೂ. ಮೊತ್ತದ ವಿಶೇಷ ಉಡುಗೊರೆಯೂ ಲಭ್ಯವಾಗಲಿದೆ. ಈ ಉಡುಗೊರೆಯಲ್ಲಿ ಡೈನಿಂಗ್ ಸೆಟ್, ಡಿನ್ನರ್ ಸೆಟ್ ಸೇರಿದಂತೆ ಅಡುಗೆಯ ಪರಿಕರಗಳನ್ನು ಒದಗಿಸಲಾಗುತ್ತದೆ.
ಉಚಿತ ಸಾಮೂಹಿಕ ವಿವಾಹ
ಮದುವೆ ಆಗಲು ಇಚ್ಛಿಸುವವರು ಏ. 25ರೊಳಗೆ ಸವಿವರ ಮಾಹಿತಿ ಹಾಗೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದವರಿಗೆ ಮಾತ್ರ ಅವಕಾಶ ಇರುತ್ತದೆ.
ಸಾಮೂಹಿಕ ವಿವಾಹದ ವಿಶೇಷತೆ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದಲೇ ಸಾಮೂಹಿ ವಿವಾಹದ ಖರ್ಚು ಭರಿಸಲಾಗುತ್ತದೆ. ಮದುವೆಗಾಗುವ ದುಂದುವೆಚ್ಚ ಮತ್ತು ವರದಕ್ಷಿಣೆ ತಡೆಗಟ್ಟಲು 1972 ರಲ್ಲಿ 88 ಜೋಡಿಯ ಮದುವೆಯೊಂದಿಗೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಉಚಿತ ಸಾಮೂಹಿಕ ವಿವಾಹ ಪ್ರಾರಂಭಿಸಿದರು. ಮದುವೆಯ ಎಲ್ಲ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದಲೇ ಭರಿಸಲಿದ್ದು, ಪ್ರತಿವರ್ಷ ಏಪ್ರಿಲ್/ಮೇ ತಿಂಗಳಿನಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ನಡೆಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Dharmasthala: ಧರ್ಮಸ್ಥಳದಲ್ಲಿ ತಿರುಪತಿ ಮಾದರಿ ಕ್ಯೂ ಕಾಂಪ್ಲೆಕ್ಸ್, ಹೇಗಿದೆ ಇಲ್ಲಿಯ ವ್ಯವಸ್ಥೆ?
ಅರ್ಜಿ ಸಲ್ಲಿಸಲು ಇಚ್ಛಿಸುವವರು ಮಂಡಲ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಯಾ ಕಾರ್ಯದರ್ಶಿಯವರಿಂದ ವಧೂ-ವರರ ಹೆಸರು, ಪ್ರಾಯ, ಹಿರಿಯರ ಒಪ್ಪಿಗೆ ಹಾಗೂ ಅವಿವಾಹಿತನೆಂಬುದಕ್ಕೆ ಅವಶ್ಯ ದೃಢಪತ್ರಿಕೆ ಮತ್ತು ವಧೂ-ವರರ ಇತ್ತೀಚಿನ ಭಾವಚಿತ್ರ 1+1 (ಪಾಸ್‌ಪೋರ್ಟ್ ಅಳತೆ) ತರಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08256-266644, 8147263422 ಸಂಖ್ಯೆಗೆ ಕರೆ ಮಾಡಬಹುದು.