ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Girish Mattannavar: ರೌಡಿಶೀಟರ್‌ನನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಪರಿಚಯಿಸಿದ ಗಿರೀಶ್ ಮಟ್ಟಣ್ಣನವರ್ ಮೇಲೆ ಬಿತ್ತು ಕೇಸ್

ರೌಡಿಶೀಟರ್‌ ಒಬ್ಬನನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿದ್ದ ಗಿರೀಶ್ ಮಟ್ಟಣ್ಣನವರ್ ವಿರುದ್ದ ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ ಕ್ರಿಮಿನಲ್ ಕೇಸ್ ದಾಖಲಿಸಿದ್ದು, ದಕ್ಷಿಣ ಕನ್ನಡ ಎಸ್‌ಪಿಗೆ ಸೆಪ್ಟೆಂಬರ್ 21ರೊಳಗೆ ವರದಿ ಸಲ್ಲಿಸಲು ಸೂಚಿಸಿದೆ. ರೌಡಿಶೀಟರ್‌ ಮದನ್ ಬುಗಡಿಯನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಗಿರೀಶ್ ಮಟ್ಟಣ್ಣನವರ್ ಪರಿಚಯಿಸಿದ್ದರು.

ಗಿರೀಶ್ ಮಟ್ಟಣ್ಣನವರ್‌

ಬೆಳ್ತಂಗಡಿ: ಧರ್ಮಸ್ಥಳ (Dharmasthala) ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ (Girish Mattannavar) ಬೆಳ್ತಂಗಡಿ ಠಾಣೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಮದನ್ ಬುಗಡಿ ಎಂಬ ವ್ಯಕ್ತಿಯನ್ನು ಮಾನವ ಹಕ್ಕುಗಳ ಆಯೋಗದ (Human Rights Commission) ಅಧಿಕಾರಿಯೆಂದು ಪರಿಚಯಿಸಿದ್ದರು. ಆದರೆ ಈ ವ್ಯಕ್ತಿ ಮಾನವ ಹಕ್ಕು ಅಧಿಕಾರಿಯಲ್ಲ ಬದಲಾಗಿ ಹುಬ್ಬಳ್ಳಿಯ ರೌಡಿಶೀಟರ್ ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ ಕ್ರಿಮಿನಲ್ ಕೇಸ್ ದಾಖಲಿಸಿ, ದಕ್ಷಿಣ ಕನ್ನಡ ಎಸ್‌ಪಿಗೆ ಸೆಪ್ಟೆಂಬರ್ 21ರೊಳಗೆ ವರದಿ ಸಲ್ಲಿಸಲು ಸೂಚಿಸಿದೆ.

ಮದನ್ ಬುಗಡಿ, ಹುಬ್ಬಳ್ಳಿಯ ಶಿವಶಂಕರ ಕಾಲೋನಿಯ ತಾಂಡಾ ನಿವಾಸಿಯಾಗಿದ್ದು, ಕೊಲೆ, ಕೊಲೆ ಯತ್ನ, ಸುಲಿಗೆ, ದನ ಕಳ್ಳತನ ಸೇರಿದಂತೆ ಏಳು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. 2017ರ ನಂತರ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲವಾದರೂ, ರೌಡಿಶೀಟರ್ ಪಟ್ಟಿಯಿಂದ ಆತನ ಹೆಸರು ತೆಗೆದಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಹುಬ್ಬಳ್ಳಿಯ ರೌಡಿ ಪರೇಡ್‌ನಲ್ಲಿ ಭಾಗಿಯಾಗಿದ್ದ ಮದನ್‌ನನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತರಾಟೆಗೆ ತೆಗೆದುಕೊಂಡಿದ್ದರು. ಶಶಿಕುಮಾರ್, “ಮದನ್ ಯಾವುದೇ ಮಾನವ ಹಕ್ಕು ಅಧಿಕಾರಿಯಲ್ಲ, ಆತನ ಸಂಘಟನೆಯ ಬಗ್ಗೆ ತನಿಖೆ ನಡೆಸುತ್ತೇವೆ” ಎಂದು ತಿಳಿಸಿದ್ದಾರೆ.

ಗಿರೀಶ್ ಮಟ್ಟಣ್ಣನವರ್‌ರ ಈ ಕೃತ್ಯವು ವೈರಲ್ ಆಗುತ್ತಿದ್ದಂತೆ, ಮದನ್ ಬುಗಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ನಾನು ಮಾನವ ಹಕ್ಕು ಅಧಿಕಾರಿಯೆಂದು ಹೇಳಿಕೊಂಡಿಲ್ಲ. ನಾನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಸಾಮಾಜಿಕ ನ್ಯಾಯ ಆಯೋಗದ ಪದಾಧಿಕಾರಿಯಾಗಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಸಜ್ಜನನಾಗಿ ಬದುಕುತ್ತಿದ್ದೇನೆ” ಎಂದಿದ್ದಾರೆ. ಗಿರೀಶ್‌ ಮಟ್ಟಣ್ಣನವರ್ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಳ್ತಂಗಡಿಗೆ ಹೋಗಿದ್ದೆವು ಎಂದು ಸ್ಪಷ್ಟಪಡಿಸಿದ್ದಾನೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ʼʼಮದನ್ ಬುರುಡಿ ಮೇಲೆ ಇಂದಿಗೂ ರೌಡಿಶೀಟ್ ಇದೆ. ಆತ ಯಾವುದೇ ಮಾನವ ಹಕ್ಕು ಅಧಿಕಾರಿಯಲ್ಲ. ಆತನ ಸಂಘಟನೆ ಬಗ್ಗೆ ಮಾಹಿತಿ ಪಡೆಯುವ ಕೆಲಸ ಮಾಡುತ್ತೇವೆʼʼ ಎಂದಿದ್ದರು.

ಗಿರೀಶ್ ಮಟ್ಟಣ್ಣನವರ್‌ ಅವರ ಈ ಕೃತ್ಯವು ಧರ್ಮಸ್ಥಳ ಪ್ರಕರಣದಲ್ಲಿ ಗೊಂದಲವನ್ನು ಹೆಚ್ಚಿಸಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಾನೂನು ಕ್ರಮಕ್ಕೆ ಆದೇಶಿಸಿದೆ. ಈ ಘಟನೆಯಿಂದ ಗಿರೀಶ್ ಮಟ್ಟಣ್ಣನವರ್‌ ವಿಶ್ವಾಸಾರ್ಹತೆಯೂ ಪ್ರಶ್ನೆಗೆ ಒಳಗಾಗಿದೆ.