Umashree: ‘ಮಂಥರೆ’ಯಾಗಿ ರಂಗಸ್ಥಳದಲ್ಲಿ ಮಿಂಚಿದ ಕನ್ನಡಿಗರ ನೆಚ್ಚಿನ ‘ಸಾಕವ್ವ’!
Umashree: ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿ ಹಲವು ಕಲಾವಿದರು ಹೆಸರುವಾಸಿಯಾಗಿ ಯಕ್ಷ ಪ್ರಿಯರ ಮನ ಗೆದ್ದಿದ್ದಾರೆ. ಈ ಹಿಂದೆ ಸ್ಯಾಂಡಲ್‌ವುಡ್ ಹಾಸ್ಯನಟ ಟೆನ್ನಿಸ್ ಕೃಷ್ಣ ಯಕ್ಷಗಾನದಲ್ಲಿ ಬಣ್ಣ ಹಚ್ಚಿದ್ದರು. ಇದೀಗ ಹಿರಿಯ ನಟಿ ಉಮಾಶ್ರೀ ಸರದಿ.
ಹೊನ್ನಾವರ: ಕನ್ನಡ ಚಿತ್ರರಂಗದ (Sandalwood) ಖ್ಯಾತ ನಟಿಯಾಗಿ, ರಾಜಕಾರಣಿಯಾಗಿ ಜನಪ್ರಿಯರಾಗಿರುವ ಉಮಾಶ್ರೀ (Umashree) ಜ.17ರಂದು ಕರಾವಳಿಯ ಗಂಡುಕಲೆ ಯಕ್ಷಗಾನದ (Yakshagana) ರಂಗಸ್ಥಳವನ್ನೇರಿ ಮಂಥರೆಯ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಯಕ್ಷಗಾನದ ಅತ್ಯಂತ ಸವಾಲಿನ ಪಾತ್ರ ಎಂದೇ ಪರಿಗಣಿಸಲ್ಪಟ್ಟ ಮಂಥರೆಯ ವೇಷದೊಂದಿಗೆ ಮೊದಲ ಬಾರಿಗೆ ಯಕ್ಷರಂಗಭೂಮಿಗೆ ಉಮಾಶ್ರೀ ಅಡಿಯಿಟ್ಟು ಯಕ್ಷ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಶುಕ್ರವಾರ ಹೊನ್ನಾವರದ (Honnavara) ಸೈಂಟ್ ಅಂಥೋನಿ ಮೈದಾನದಲ್ಲಿ ಪೆರ್ಡೂರು ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿಯ ‘ ಶ್ರೀರಾಮ ಪಟ್ಟಾಭಿಷೇಕ’ ಪ್ರಸಂಗದಲ್ಲಿ ಉಮಾಶ್ರೀ ಮಂಥರೆ ವೇಷದಲ್ಲಿ ಮತ್ತು ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಕೈಕೆಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪಿ ಹೆಗಡೆ ಸಾಣ್ಮನೆ ಈ ಕಾರ್ಯಕ್ರಮ ಆಯೋಜಿಸಿದ್ದು, ಕಳೆದೊಂದು ತಿಂಗಳ ಹಿಂದೆ ಈ ಪಾತ್ರಕ್ಕಾಗಿ ಉಮಾಶ್ರೀ ಅವರನ್ನು ಸಂಪರ್ಕಿಸಲಾಗಿತ್ತು.
ಇದೇ ಮೊದಲ ಬಾರಿಗೆ ಉಮಾಶ್ರೀ ಯಕ್ಷಗಾನದಲ್ಲಿ ಅಭಿನಯಿಸಲು ಪ್ರಮುಖ ಕಾರಣವೂ ಇದೆ. ಯಕ್ಷಗಾನದಲ್ಲಿ ದಿಗ್ಗಜ ಕಲಾವಿದರ ಸಾಲಿನಲ್ಲಿ ರಾಮಚಂದ್ರ ಚಿಟ್ಟಾಣಿಯವರೂ (Ramachndra Chittani) ಒಬ್ಬರು. ದಿವಂಗತ ರಾಮಚಂದ್ರ ಚಿಟ್ಟಾಣಿಯವರಿಗೆ ಉಮಾಶ್ರೀ ಯಕ್ಷಗಾನದಲ್ಲಿ ಪಾತ್ರ ಮಾಡಬೇಕೆಂಬ ಆಸೆ ಇತ್ತಂತೆ. ಇದನ್ನು ಅವರು ತಾವು ಬದುಕಿದ್ದಾಗಲೇ ಹೇಳಿದ್ದರಂತೆ.
ಮಂಥರೆ ಪಾತ್ರ ಮಾಡುವಂತೆ ಕೇಳಿದಾಗ ಉಮಾಶ್ರೀ ನನಗೆ ಯಕ್ಷಗಾನ ಅನುಭವವಿಲ್ಲ. ಹೀಗಾಗಿ ಹೇಗೆ ಮಾಡಲಿ ಎಂದು ಹಿಂದೇಟು ಹಾಕಿದ್ದರಂತೆ. ಇತ್ತೀಚೆಗೆ ಅವರ ಮಗ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಮತ್ತೆ ಮಂಥರೆಯ ಪಾತ್ರ ಮಾಡಲು ಕೋರಿಕೊಂಡಾಗ ರಾಮಚಂದ್ರ ಚಿಟ್ಟಾಣಿ ಅವರ ಮೇಲಿನ ಗೌರವದಿಂದ ಪಾತ್ರ ಮಾಡಲು ಒಪ್ಪಿಕೊಂಡರಂತೆ. ಅವರ ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ಪಾತ್ರ ಮಾಡಲು ಸಮ್ಮತಿಸಿದೆ ಎಂದಿದ್ದಾರೆ.
ಈ ಮೂಲಕ ಉಮಾಶ್ರೀ ಅವರು ಈ ಒಂದು ಪಾತ್ರವನ್ನ ರಾಮಚಂದ್ರ ಚಿಟ್ಟಾಣಿ ಅವರ ಆಸೆಯಂತೆ ಮಾಡಿದ್ದಾರೆ. ಈ ಪಾತ್ರವನ್ನ ಮಾಡುವ ಮೂಲಕ ಇದೀಗ ಮಹಾನ್ ಯಕ್ಷಗಾನ ಕಲಾವಿದ ರಾಮಚಂದ್ರ ಚಿಟ್ಟಾಣಿ ಅವರ ಆಸೆಯನ್ನು ಈಡೇರಿಸಿದ್ದಾರೆ
ಜತೆಗೆ ಯಕ್ಷಗಾನದಲ್ಲಿ ಪಾತ್ರ ಮಾಡುವುದಕ್ಕಾಗಿ ಉಮಾಶ್ರೀ ಮೊದಲೇ ಹೊನ್ನಾವರಕ್ಕೆ ತೆರಳಿ ಮೇಳದವರೊಂದಿಗೆ ಎರಡು ದಿನಗಳ ತಾಲೀಮು ಕೂಡಾ ನಡೆಸಿ ಬಂದಿದ್ದರು. ವೇದಿಕೆಯಲ್ಲಿ ಮಂಥರೆಯ ಪಾತ್ರದಲ್ಲಿ ಮಿಂಚಿದ ಉಮಾಶ್ರೀ ತಮ್ಮೊಳಗಿನ ಮತ್ತೊಂದು ಪ್ರತಿಭೆಯ ಅನಾವರಣ ಮಾಡಿ ಸೈ ಎನಿಸಿಕೊಂಡಿದ್ದಾರೆ.
1957ರ ಮೇ 10ರಂದು ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಜನಿಸಿದ ಉಮಾಶ್ರೀ ಅವರು ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ನಟಿ. ವೃತ್ತಿ ರಂಗಭೂಮಿಯಲ್ಲಿ ಹಲವಾರು ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ. ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಅವರ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಉಮಾಶ್ರೀ ಅವರು 1980ರಲ್ಲಿ ತೆರೆಕಂಡ ಟಿ.ಎಸ್.ನಾಗಾಭರಣ ನಿರ್ದೇಶನದ ʼಬಂಗಾರದ ಜಿಂಕೆʼ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡು ಸ್ಯಾಂಡಲ್‌ವುಡ್ ಪ್ರವೇಶಿಸಿದರು. 2008ರಲ್ಲಿ ರಿಲೀಸ್ ಆದ ʼಗುಲಾಬಿ ಟಾಕೀಸ್ʼ ಕನ್ನಡ ಚಿತ್ರದ ಅಭಿನಯಕ್ಕಾಗಿ ಉಮಾಶ್ರೀ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.