Shivaji Flex: ಶಿವಾಜಿ ಫ್ಲೆಕ್ಸ್ ತೆರವಿಗೆ ಪೊಲೀಸರ ಪಟ್ಟು, ದಾವಣಗೆರೆ ಗಣೇಶೋತ್ಸವದಲ್ಲಿ ಉದ್ವಿಗ್ನತೆ
Davanagere: ಫ್ಲೆಕ್ಸ್ ಯಾವುದೇ ಕಾರಣಕ್ಕೂ ತೆರವು ಮಾಡುವುದಿಲ್ಲ. ಯುವಕರಿಗೆ ಇತಿಹಾಸ ತಿಳಿಸುವ ಕೆಲಸ ಪ್ರತಿ ವರ್ಷ ಮಾಡುತ್ತೇವೆ ವಿನಃ ಯಾವುದೇ ಕೋಮು ಪ್ರಚೋದನೆ ಆಗುವುದಿಲ್ಲ ಎಂದು ಹಿಂದೂ ಯುವಕರು ಪಟ್ಟು ಹಿಡಿದಿದ್ದು, ಆಗ ಪೊಲೀಸರ ಹಾಗೂ ಹಿಂದೂ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿದೆ.

ಸಾಂದರ್ಭಿಕ ಚಿತ್ರ

ದಾವಣಗೆರೆ: ದಾವಣಗೆರೆ (Davanagere) ನಗರದ ಮಟ್ಟಿಕಲ್ಲು ಪ್ರದೇಶದಲ್ಲಿ ಗಣೇಶೋತ್ಸವ (Ganeshotsav) ಆಚರಣೆ ವೇಳೆ ಎರಡು ಕೋಮುಗಳ ನಡುವೆ ಗಲಾಟೆ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಛತ್ರಪತಿ ಶಿವಾಜಿ ಅಫ್ಜಲ್ ಖಾನ್ನನ್ನು ಕೊಲ್ಲುವ ಫ್ಲೆಕ್ಸ್ (Shivaji Flex) ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ. ಇದು ಕೋಮು ಪ್ರಚೋದನೆಗೆ ದಾರಿ ಮಾಡಿಕೊಡುತ್ತದೆ ಎಂದು ಆರ್ಎಂಸಿ ಠಾಣೆಯ ಪೊಲೀಸರು ತೆರವು ಮಾಡಲು ಬಂದಿದ್ದು ಇದಕ್ಕೆ ಯುವಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಶಿವಾಜಿ ಕೊಂಕಣ ಪ್ರದೇಶವನ್ನು ಆಕ್ರಮಣ ಮಾಡಿದಾಗ ಔರಂಗಜೇಬ್ ಸೇನಾಧಿಪತಿಯಾಗಿ ಆಫ್ಜಲ್ ಖಾನ್ನನ್ನು ನಿಯೋಜಿಸುತ್ತಾನೆ. ಮಾತುಕತೆ ನೆಪದಲ್ಲಿ ಶಿವಾಜಿಯನ್ನು ಬಂಧಿಸಲು ಉಪಾಯ ಮಾಡಿದಾಗ ಶಿವಾಜಿ ತನಗಿಂತ ಸದೃಢನಾದ ಆಫ್ಜಲ್ ಖಾನ್ನನ್ನು ಹುಲಿ ಉಗುರಿನ ಕತ್ತಿಯಿಂದ ಕೊಲ್ಲುತ್ತಾನೆ. ಇದಕ್ಕೆ ಸಂಬಂಧಿಸಿದ ಫ್ಲೆಕ್ಸ್ ಅನ್ನು ಮಟ್ಟಿಕಲ್ಲಿನಲ್ಲಿ ಈ ಬಾರಿ ಗಣೇಶೋತ್ಸವದಲ್ಲಿ ಅಲ್ಲಿನ ಹಿಂದೂ ಯುವಕರು ಅಳವಡಿಸಿದ್ದಾರೆ. ಈ ಫ್ಲೆಕ್ಸ್ ಅನ್ನು ಮುಸ್ಲಿಮರು ವಿರೋಧಿಸಿದ್ದರು.
ಫ್ಲೆಕ್ಸ್ ಯಾವುದೇ ಕಾರಣಕ್ಕೂ ತೆರವು ಮಾಡುವುದಿಲ್ಲ. ಯುವಕರಿಗೆ ಇತಿಹಾಸ ತಿಳಿಸುವ ಕೆಲಸ ಪ್ರತಿ ವರ್ಷ ಮಾಡುತ್ತೇವೆ ವಿನಃ ಯಾವುದೇ ಕೋಮು ಪ್ರಚೋದನೆ ಆಗುವುದಿಲ್ಲ ಎಂದು ಹೇಳಿದರೂ ಪೊಲೀಸರು ತೆರವು ಮಾಡಲು ಮುಂದಾಗಿದ್ದಾರೆ. ಆಗ ಪೊಲೀಸರ ಹಾಗೂ ಹಿಂದೂ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿದೆ. ಕೊನೆಯದಾಗಿ ಪೊಲೀಸರು ಫ್ಲೆಕ್ಸ್ ತೆರವಿಗೆ ಬೆಳಗ್ಗೆ 10.30 ರ ವರೆಗೆ ಕಾಲಾವಕಾಶ ನೀಡಿದ್ದಾರೆ.
ಮಟ್ಟಿಕಲ್, ಬೇತೂರು ರಸ್ತೆ ಅತಿ ಸೂಕ್ಷ್ಮ ಪ್ರದೇಶಗಳಾಗಿದ್ದು, ಕಳೆದ ವರ್ಷ ಇದೇ ಸ್ಥಳದಲ್ಲಿ ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಾಟವಾಗಿತ್ತು. ಈಗ ಅ ರೀತಿಯ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ಅಕ್ಷೇಪಾರ್ಹ ಫ್ಲೆಕ್ಸ್ ಅಳವಡಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ. ಆದರೆ, ಹಿಂದೂ ಕಾರ್ಯಕರ್ತರು ಸಭೆ ಸೇರಿ, ಯಾವುದೇ ಕಾರಣಕ್ಕೂ ಫ್ಲೆಕ್ಸ್ ತೆರವು ಮಾಡುವುದಿಲ್ಲ. ಹಾಗೇನಾದರೂ ಮಾಡಬೇಕು ಎಂದರೆ ಜಿಲ್ಲೆಯಲ್ಲಿರುವ ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ್ ಫ್ಲೆಕ್ಸ್ ತೆರವು ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಾರೆಯಾಗಿ ದಾವಣಗೆರೆಯ ಮಟ್ಟಿಕಲ್ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಇದನ್ನೂ ಓದಿ: Lawrence Bishnoi: ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಗ್ಯಾಂಗ್‌ಸ್ಟರ್ ಬಿಷ್ಣೋಯಿ ಭಾವಚಿತ್ರ