ಬೆಂಗಳೂರು, ನ. 28: ದೇಶದ ರಾಜಕೀಯದಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಕ್ಷೇತ್ರ ಪುನರ್ವಿಂಗಡಣೆ ಮೂಲಕ ಹೊಸ ಅಧ್ಯಾಯ ಬರೆಯಲು ಹೊರಟಿದೆ (Delimitation Bill). ಕ್ಷೇತ್ರಗಳ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಯಲ್ಲಿ ಬದಲಾವಣೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಅದರ ಪ್ರಕಾರ ಎಲ್ಲ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಏಕರೂಪವಾಗಿ ಹೆಚ್ಚಿಸಲಾಗುತ್ತದೆ. ಅಂದರೆ ಸೀಟುಗಳ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಏರಿಸಲಾಗುತ್ತದೆ. ಇದರ ಜತೆಗೆ ವಿಧಾನಸಭೆ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಲೆಕ್ಕಾಚಾರದಂತೆ ರಾಜ್ಯದಲ್ಲಿ ಸಂಸದರ ಸಂಖ್ಯೆ 42ಕ್ಕೆ ಮತ್ತು ಶಾಸಕರ ಸಂಖ್ಯೆ 336ಕ್ಕೆ ಏರಿಕೆಯಾಗಲಿದೆ.
ಪ್ರಸ್ತುತ ರಾಜ್ಯದಲ್ಲಿ 224 ಶಾಸಕರಿದ್ದಾರೆ. ಶೇಕಡಾ 50ರಷ್ಟು ಹೆಚ್ಚಳ ಎಂದರೆ 112 ಸ್ಥಾನ ಹೆಚ್ಚಾಗಿ 336ಕ್ಕೆ ಏರಿಕೆಯಾಗಲಿದೆ. ಸದ್ಯ ಸಂಸದೀಯ ಕ್ಷೇತ್ರಗಳ ಸಂಖ್ಯೆ 28. 14 ಅಧಿಕ ಎಂದರೆ 42ಕ್ಕೆ ತಲುಪಲಿದೆ.
ಕ್ಷೇತ್ರ ಪುನರ್ವಿಂಗಡಣೆ ವಿವಾದ ಕೊನೆಗೊಳಿಸಲು ಕೇಂದ್ರದಿಂದ 3 ಮಸೂದೆಗಳ ಅಸ್ತ್ರ; ಲೋಕಸಭೆ ಬಲ 850ಕ್ಕೆ ಏರಿಕೆ
ಇದರೊಂದಿಗೆ ಸರ್ಕಾರ ರಚನೆಯ ಮ್ಯಾಜಿಕ್ ನಂಬರ್ 113ರಿಂದ 169ಕ್ಕೆ ಏರಲಿದೆ. ಅಲ್ಲದೆ ಮಹಿಳಾ ಮೀಸಲಾತಿಯಡಿ 112 ಶಾಸಕಿಯರಿಗೆ ಅವಕಾಶ ಸಿಗಲಿದೆ. ಸಂಸದೆಯರ ಸಂಖ್ಯೆ 14ಕ್ಕೆ ಹೆಚ್ಚಾಗಲಿದೆ. 2011ರ ಪ್ರಕಾರ ಈ ಪ್ರಕ್ರಿಯೆ ನಡೆಯಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಉತ್ತರ ಪ್ರದೇಶದಲ್ಲಿ ಗರಿಷ್ಠ ಶಾಸಕರು
ಉದ್ದೇಶಿತ ಪುನರ್‌ವಿಂಗಡನೆಯ ಪ್ರಕಾರ ದೇಶದ ವಿಧಾನಸಭೆಗಳ ಗರಿಷ್ಠ ಸದಸ್ಯ ಬಲ 650ಕ್ಕೆ ಏರಿಕೆಯಾಗುವ ಸಂಭವವಿದೆ. ಪ್ರಸ್ತುತ 403 ಸದಸ್ಯರನ್ನು ಹೊಂದಿರುವ ಉತ್ತರ ಪ್ರದೇಶ ವಿಧಾನಸಭೆಯ ಬಲ 650ಕ್ಕೆ ತಲುಪುವ ನಿರೀಕ್ಷೆಯಿದೆ. ಇನ್ನ ಸಂಸತ್‌ನಲ್ಲಿ ದಕ್ಷಿಣ ಭಾರತದ 5 ರಾಜ್ಯಗಳ ಒಟ್ಟು ಪ್ರಾತಿನಿಧ್ಯ 129ರಿಂದ 195ಕ್ಕೆ ವೃದ್ಧಿಸಲಿದೆ. ಕರ್ನಾಟಕ (42) ತಮಿಳುನಾಡು (59) ಆಂಧ್ರ ಪ್ರದೇಶ (38), ಕೇರಳಂ (30) ಮತ್ತು ತೆಲಂಗಾಣ (25) ರಾಜ್ಯಗಳ ಸ್ಥಾನಗಳು ಹೆಚ್ಚಾಗಲಿದೆ.
ರಾಜ್ಯದಲ್ಲಿ ಬೆಂಗಳೂರು ನಗರದ ಶಾಸಕರ ಸಂಖ್ಯೆ ಅತೀ ಹೆಚ್ಚಿರಲಿದೆ. ಪ್ರಸ್ತುತ 28 ಇದ್ದು, ಅದು 25 ಅಧಿಕವಾಗಿ 53ಕ್ಕೆ ತಲುಪಲಿದೆ. ಇನ್ನು ಬೆಳಗಾವಿಗೆ 26 ಶಾಸಕರು ದೊರೆಯಲಿದ್ದಾರೆ. ಅತೀ ಕಡಿಮೆ ಎಂದರೆ ಕೊಡಗಿನಲ್ಲಿ 3 ಶಾಸಕರಿರಲಿದ್ದಾರೆ. ಪ್ರಸ್ತುತ ಇಲ್ಲಿ 2 ವಿಧಾನಸಭಾ ಕ್ಷೇತ್ರಗಳಿವೆ.
ಯಾವಾಗ ಜಾರಿ?
ವಿಧಾನಸಭಾ ಕ್ಷೇತ್ರಗಳ ಈ ಹೆಚ್ಚಳ 2029ರಲ್ಲಿ ಹಂತ ಹಂತವಾಗಿ ರಾಜ್ಯಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಕರ್ನಾಟಕ ವಿಧಾನಸಭಾ ಚುನಾವಣೆ 2028ರಲ್ಲಿ ನಡೆಯಲಿದ್ದು, ಆಗ ಈ ಬದಲಾವಣೆ ಜಾರಿಗೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ರಾಜ್ಯವಾರು ಲೋಕಸಭಾ ಸ್ಥಾನಗಳ ಹಂಚಿಕೆಯ ಪ್ರಮಾಣವನ್ನು 2051ರವರೆಗೆ ಬದಲಾಯಿಸದೆ ಯಥಾ ಸ್ಥಿತಿಯಲ್ಲಿ ಉಳಿಸಿಕೊಳ್ಳಲು ಕೇಂದ್ರ ತೀರ್ಮಾನಿಸಿದೆ. 2000ದಲ್ಲಿ ಅಂದಿನ ವಾಜಪೇಯಿ ಸರ್ಕಾರವು 2026ರವರೆಗೆ ಸ್ಥಾನಗಳ ಹಂಚಿಕೆಯನ್ನು ಸ್ಥಗಿತಗೊಳಿಸಿತ್ತು. ಈಗ ಅದನ್ನು ಮತ್ತೆ 25 ವರ್ಷಗಳ ಕಾಲ ವಿಸ್ತರಿಸಲಾಗಿದೆ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.