ಕ್ಷೇತ್ರ ಪುನರ್ವಿಂಗಡಣೆ ವಿವಾದ ಕೊನೆಗೊಳಿಸಲು ಕೇಂದ್ರದಿಂದ 3 ಮಸೂದೆಗಳ ಅಸ್ತ್ರ; ಲೋಕಸಭೆ ಬಲ 850ಕ್ಕೆ ಏರಿಕೆ, ವಿಧಾನಸಭಾ ಸ್ಥಾನದಲ್ಲಿಯೂ ಬದಲಾವಣೆ
Delimitation Bill: ಕ್ಷೇತ್ರ ಪುನರ್ವಿಂಗಡಣೆ ಮತ್ತು ಶೇ. 33ರಷ್ಟು ಮಹಿಳಾ ಮೀಸಲಾತಿ ಕುರಿತ ಬಿಕ್ಕಟ್ಟು ಬಗೆಹರಿಸಲು ಕೇಂದ್ರ ಸರ್ಕಾರ ನಿರ್ಣಾಯಕ ಹೆಜ್ಜೆ ಇಟ್ಟಿದೆ. ನವೆಂಬರ್ 30ರ ಸೋಮವಾರ ಸಂಸತ್ ಕಲಾಪ ಆರಂಭವಾಗುವ ಮುನ್ನವೇ ಸಂಸದರಿಗೆ ಮೂರು ಮಹತ್ವದ ಕರಡು ಮಸೂದೆಗಳನ್ನು ಹಂಚಲಾಗಿದೆ. ‘ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026’ರ ಮೂಲಕ ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವುದು ಮತ್ತು 2051ರವರೆಗೆ ರಾಜ್ಯಗಳ ನಡುವಿನ ಸ್ಥಾನಗಳ ಅನುಪಾತ ಬದಲಾಯಿಸದಂತೆ ಲಿಖಿತ ಸಾಂವಿಧಾನಿಕ ಗ್ಯಾರಂಟಿ ನೀಡಲು ಸರ್ಕಾರ ಮುಂದಾಗಿದೆ.
ಎಲ್ಲಾ ರಾಜ್ಯಗಳಿಗೂ 50% ಸೀಟು ಹಂಚಿಕೆ -
ನವದೆಹಲಿ, ನ.28: ಕ್ಷೇತ್ರ ಪುನರ್ವಿಂಗಡಣೆ (Delimitation Bill) ಮತ್ತು ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಯಲ್ಲಿದ್ದ ಬಿಕ್ಕಟ್ಟು ಬಗೆಹರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ನವೆಂಬರ್ 30ರ ಸೋಮವಾರ ಸಂಸತ್ ಕಲಾಪ ಆರಂಭವಾಗುವ ಮುನ್ನವೇ ಸಂಸದರಿಗೆ ಮೂರು ಕರಡು ಮಸೂದೆಗಳನ್ನು ಹಂಚಿದೆ. ‘ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026’ರ ಮೂಲಕ ಲೋಕಸಭೆಯ ಗರಿಷ್ಠ ಸ್ಥಾನಗಳ ಬಲವನ್ನು 550ರಿಂದ 850ಕ್ಕೆ ಹಾಗೂ ವಿಧಾನಸಭೆಗಳ ಗರಿಷ್ಠ ಮಿತಿಯನ್ನು 500ರಿಂದ 650ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. 1971ರ ಜನಗಣತಿಯನ್ನೇ ಆಧಾರವಾಗಿಟ್ಟುಕೊಂಡು ಎಲ್ಲಾ ರಾಜ್ಯಗಳ ಸೀಟುಗಳನ್ನು ಏಕರೂಪವಾಗಿ ಶೇ. 50ರಷ್ಟು ಹೆಚ್ಚಿಸುವುದು ಮತ್ತು ಅಂತರ-ರಾಜ್ಯ ಸೀಟು ಮರುಹಂಚಿಕೆಯನ್ನು 2051ರವರೆಗೆ ಸ್ಥಗಿತಗೊಳಿಸುವ ಲಿಖಿತ ಸಾಂವಿಧಾನಿಕ ಗ್ಯಾರಂಟಿಯನ್ನು ಇದರಲ್ಲಿ ನೀಡಲಾಗಿದೆ.
ಇದರ ಜೊತೆಗೆ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮತ್ತು ‘ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆಯನ್ನೂ ಸೋಮವಾರ ಮಂಡಿಸಲಾಗುತ್ತಿದೆ. 2011ರ ಜನಗಣತಿ ಆಧಾರದಲ್ಲಿ ರಾಜ್ಯದ ಒಳಗಿನ ಕ್ಷೇತ್ರಗಳ ಗಡಿ ಪುನರ್ವಿಂಗಡಣೆ ಮಾಡುವುದು ಹಾಗೂ ಸಾಮಾನ್ಯ ಸ್ಥಾನಗಳಿಗೆ ಧಕ್ಕೆಯಾಗದಂತೆ ಎಸ್ಸಿ, ಎಸ್ಟಿ ಮಹಿಳೆಯರೂ ಸೇರಿದಂತೆ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವುದು ಈ ಮಸೂದೆಗಳ ಉದ್ದೇಶವಾಗಿದೆ. ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಈ ಮಸೂದೆಗಳು ಅಂಗೀಕಾರವಾದರೆ, 2029ರ ಲೋಕಸಭಾ ಚುನಾವಣೆಗೂ ಮುನ್ನ ಮಹಿಳಾ ಮೀಸಲಾತಿ ಜಾರಿಗೆ ಹಾದಿ ಸುಗಮವಾಗಲಿದೆ. ಕ್ಷೇತ್ರ ಪುನರ್ವಿಂಗಡಣೆಯಿಂದ ಕರ್ನಾಟಕದಲ್ಲಿ ಇದ್ದ 28 ಸೀಟುಗಳು 42 ಕ್ಕೆ ಜಿಗಿಯಲಿವೆ.
ಯಾವ ರಾಜ್ಯಕ್ಕೆ ಎಷ್ಟು ಸೀಟು ಪೋಸ್ಟ್ ನೋಡಿ:
Details of Proposed Delimitation Bill; Current seats: 543 Proposed seats: 815 Uniform state seat increase: 50% Population Representation ratio: Unchanged. Considering all aspects, it’s a good deal offered to Southern States by the govt. https://t.co/CNhXKxLthY
— PVS Sarma - పి వి ఎస్ శర్మ - પી વી એસ શર્મા (@pvssarma) November 27, 2026
132ನೇ ತಿದ್ದುಪಡಿ ಮಸೂದೆಯಲ್ಲಿ ಏನಿದೆ?
- ಸಂವಿಧಾನದ 81ನೇ ವಿಧಿಗೆ ತಿದ್ದುಪಡಿ ತಂದು ಲೋಕಸಭೆಯ ಗರಿಷ್ಠ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸಲಾಗುತ್ತದೆ, ಇದರಲ್ಲಿ ರಾಜ್ಯಗಳಿಂದ 815 ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 35 ಸ್ಥಾನಗಳು ಇರಲಿವೆ.
- 1971ರ ಜನಗಣತಿಯನ್ನೇ ಆಧಾರವಾಗಿಟ್ಟುಕೊಂಡು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸಲಾಗುತ್ತದೆ. 2026ರ ನಂತರದ ಜನಗಣತಿ ಬದಲಿಗೆ 2051ರವರೆಗೆ ಅಂತರ-ರಾಜ್ಯ ಸೀಟು ಮರುಹಂಚಿಕೆಯನ್ನು ಸ್ಥಗಿತಗೊಳಿಸಲಾಗಿದೆ.
- 82ನೇ ವಿಧಿಗೆ ತಿದ್ದುಪಡಿ ತಂದು 2011ರ ಜನಗಣತಿ ಆಧಾರದಲ್ಲಿ ರಾಜ್ಯದ ಒಳಗಿನ ಕ್ಷೇತ್ರಗಳ ಗಡಿ ಪುನರ್ವಿಂಗಡಣೆ ಮಾಡಲಾಗುತ್ತದೆ. ಜೊತೆಗೆ 170ನೇ ವಿಧಿಗೆ ತಿದ್ದುಪಡಿ ತಂದು ರಾಜ್ಯ ವಿಧಾನಸಭೆಗಳ ಗರಿಷ್ಠ ಸ್ಥಾನಗಳ ಮಿತಿಯನ್ನು 500ರಿಂದ 650ಕ್ಕೆ ಏರಿಸಲಾಗುತ್ತಿದ್ದು, ಎಲ್ಲಾ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳೂ ಶೇ. 50ರಷ್ಟು ಹೆಚ್ಚಾಗಲಿವೆ.
ಉಳಿದ ಎರಡು ಮಸೂದೆಗಳ ಪಾತ್ರವೇನು?
ಕ್ಷೇತ್ರ ಪುನರ್ವಿಂಗಡಣೆ ಮಸೂದೆ: ಲೋಕಸಭೆ ಹಾಗೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಲ್ಲಿ ಎಸ್ಸಿ ಮತ್ತು ಎಸ್ಟಿ ಮಹಿಳೆಯರೂ ಸೇರಿದಂತೆ ಮಹಿಳೆಯರಿಗೆ ಮೂರನೇ ಒಂದರಷ್ಟು (33%) ಮೀಸಲಾತಿಯನ್ನು ತಕ್ಷಣದಿಂದ ಜಾರಿಗೆ ತರಲು ಇದು ಕಾನೂನು ಚೌಕಟ್ಟು ಒದಗಿಸುತ್ತದೆ. ಈಗಿರುವ ಸಾಮಾನ್ಯ ಸ್ಥಾನಗಳ ಸಂಖ್ಯೆಗೆ ಯಾವುದೇ ಕಡಿತವಾಗದಂತೆ ಹೊಸ ಕ್ಷೇತ್ರಗಳನ್ನು ವಿಂಗಡಿಸಲು ಕ್ಷೇತ್ರ ಪುನರ್ವಿಂಗಡಣೆ ಆಯೋಗಕ್ಕೆ ಇದು ಅಧಿಕಾರ ನೀಡುತ್ತದೆ.
ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ: ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳಿಗೆ ತಿದ್ದುಪಡಿ ತಂದು, ಶೇ. 50ರಷ್ಟು ಸೀಟು ಹೆಚ್ಚಳ, ಕ್ಷೇತ್ರಗಳ ಗಡಿ ಪುನರ್ವಿಂಗಡಣೆ ಮತ್ತು ಶೇ. 33ರಷ್ಟು ಮಹಿಳಾ ಮೀಸಲಾತಿ ಅಲ್ಲೂ ಏಕರೂಪವಾಗಿ ಜಾರಿಯಾಗುವಂತೆ ಮಾಡುತ್ತದೆ.
ಸೋಮವಾರ ಸಂಸತ್ತಿನಲ್ಲಿ ಮಂಡನೆಯಾಗಲಿರುವ ಈ ಮೂರು ಮಸೂದೆಗಳು ಅಂಗೀಕಾರವಾಗಲು ಸಂಸತ್ತಿನಲ್ಲಿ ಮೂರನೇ ಎರಡರಷ್ಟು (2/3) ಬಹುಮತ ಅಗತ್ಯವಿದೆ. ಮುಂದಿನ ವಾರ ಈ ಮಸೂದೆಗಳಿಗೆ ಅನುಮೋದನೆ ಸಿಕ್ಕರೆ, ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಆರಂಭವಾಗಲಿದ್ದು, 2029ರ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಹಾದಿ ಸುಗಮವಾಗಲಿದೆ.