Dharwad Murder Case: ಧಾರವಾಡ ಯುವ ಕಾಂಗ್ರೆಸ್ ನಾಯಕ ಹತ್ಯೆ ಕೇಸ್; 8 ಆರೋಪಿಗಳ ಬಂಧನ
ಧಾರವಾಡದ ಹಾಸ್ಮಿ ನಗರದ ನಿವಾಸದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಮೇಲೆ ಮಾರಕಾಸ್ತ್ರಗಳೊಂದಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಒಟ್ಟು 9 ಆರೋಪಿಗಳ ಪೈಕಿ 8 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ಮುಂದುವರಿದಿದೆ.
ಯುವ ಕಾಂಗ್ರೆಸ್ ಫೈರೋಜ್ ಪಠಾಣ್ -
ಧಾರವಾಡ: ನಗರದ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ (32) ಹತ್ಯೆ ಪ್ರಕರಣಕ್ಕೆ (Dharwad Murder Case) ಸಂಬಂಧಿಸಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಸ್ಮಿ ನಗರದ ನಿವಾಸದಲ್ಲೇ ಶುಕ್ರವಾರ ರಾತ್ರಿ ಫೈರೋಜ್ ಮೇಲೆ ಮಾರಕಾಸ್ತ್ರಗಳೊಂದಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
ದಾಳಿ ವೇಳೆ ಜೀವ ಉಳಿಸಿಕೊಳ್ಳಲು ಫೈರೋಜ್ ಮನೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡರೂ, ಹಂತಕರು ಬಾಗಿಲು ಮುರಿದು ಒಳನುಗ್ಗಿ ಅವರ ಮೇಲೆ ಮನಬಂದಂತೆ ಇರಿದು ಕೊಲೆ ಮಾಡಿದ್ದರು. ಈ ವೇಳೆ ಮನೆಯಲ್ಲಿದ್ದ ಮಹಿಳೆಯೊಬ್ಬರ ಮೇಲೂ ಹಲ್ಲೆ ನಡೆದಿತ್ತು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಕೊಲೆಗೆ ರಿಯಲ್ ಎಸ್ಟೇಟ್ ವ್ಯವಹಾರದ ಹಣಕಾಸಿನ ಭಿನ್ನಾಭಿಪ್ರಾಯ ಮತ್ತು ಹಳೆಯ ವೈಯಕ್ತಿಕ ದ್ವೇಷವೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಆರಂಭದಲ್ಲಿ ಇದು ರಾಜಕೀಯ ಪ್ರೇರಿತ ಹತ್ಯೆ ಎಂಬ ಸಂಶಯವಿತ್ತಾದರೂ, ಬಂಧಿತ ಆರೋಪಿಗಳು ಫೈರೋಜ್ ಅವರ ಆಪ್ತ ವಲಯದವರೇ ಎಂದು ತಿಳಿದುಬಂದಿದೆ.
ಮದುವೆ ಸಂಭ್ರಮದಲ್ಲಿದ್ದ ಕುಟುಂಬ: ಕೊಲೆಯಾದ ಫೈರೋಜ್ ಪಠಾಣ್ ಅವರ ಮದುವೆ ಇದೇ ತಿಂಗಳ ಏಪ್ರಿಲ್ 24ರಂದು ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆಯ ಸಿದ್ಧತೆಗಳು ನಡೆಯುತ್ತಿದ್ದಾಗಲೇ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಹಂತಕರು ಮನೆಗೆ ನುಗ್ಗುವ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಆರೋಪಿಗಳ ಪತ್ತೆಗೆ ಪ್ರಮುಖ ಸುಳಿವು ನೀಡಿದೆ.
ಆರೋಪಿಗಳ ಬಂಧನಕ್ಕೆ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಒಟ್ಟು 9 ಆರೋಪಿಗಳ ಪೈಕಿ 8 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ಮುಂದುವರಿದಿದೆ.